ಮಂದಿರದೊಂದಿಗೆ ರಾಮ ರಾಜ್ಯದ ಕನಸು ಕೂಡ ನನಸಾಗಬೇಕು – ಪೇಜಾವರ ಸ್ವಾಮೀಜಿ
ಉಡುಪಿ: ರಾಮ ಮಂದಿರ ಮಾತ್ರವಲ್ಲ ರಾಮ ರಾಜ್ಯದ ಕನಸು ಕೂಡ ನನಸಾಗಬೇಕು ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿ ಪೇಜಾವರ ಮಠದ ಮುಂಭಾಗದಲ್ಲಿ ಶನಿವಾರ ನಡೆದ ಅಭಿಮಾನಿ ಗಳಿಂದ ನಡೆದ 60ನೇ ವರ್ಷದ ಷಷ್ಠ್ಯಬ್ಧ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡುತಿದ್ದರು.
ರಾಮ ಮಂದಿರ ಶತಮಾನಗಳ ಕನಸು. ಮಂದಿರವು ಮಂದಿರವಾಗಿ ಉಳಿಯಬೇಕು. ನಾವು ಹಿಂದುಗಳಾಗಿ ಉಳಿದರೆ ಮಾತ್ರ ಮಂದಿರ ಮಂದಿರ ವಾಗಿ ಉಳಿಯುತ್ತದೆ. ಇದು ಎಲ್ಲರ ಜವಾಬ್ದಾರಿಯಾಗಿದೆ ಎಂದ ಅವರು, ಈ ಸಮ್ಮಾನವನ್ನು ಶ್ರೀಕೃಷ್ಣ ಶ್ರೀರಾಮನಿಗೆ ಸಲ್ಲಿಸುತ್ತೇವೆ. ನೀವೆಲ್ಲ ಒಟ್ಟು ಸೇರಿದರೆ ಅದು ಮಠ. ಕೇವಲ ನಮ್ಮಿಂದ ಅದು ಆಗುವುದಿಲ್ಲ. ನಮ್ಮಿಂದ ಏನಾದರು ಆಗಿದ್ದರೆ ಅದು ನಿಮ್ಮ ಸಹಕಾರದಿಂದ ಆಗಿರುವುದು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮಕ್ಕಳ ಮೂಲಕ ಸಂಸ್ಕೃತಿ ಉಳಿಸುವ ಕಾರ್ಯ ನಿರಂತರ ನಡೆ ಯುತ್ತದೆ. ರಾಮಭಕ್ತರೆಲ್ಲ ದೇಶಭಕ್ತರಾಗ ಬೇಕು. ಕಟ್ಟಿದ ಮಂದಿರ ಉಳಿಸಬೇಕು ಎಂದರು.
ಸಮಾರಂಭವನ್ನು ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು. ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀವಿದ್ಯಾವಲ್ಲಭತೀರ್ಥ ಆಶೀವರ್ಚನ ನೀಡಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ರಘು ಪತಿ ಭಟ್, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿದ್ವಾನ್ ಗೋಪಾಲ ಜೋಯಿಸ ಇರ್ವತ್ತೂರು, ಉದ್ಯಮಿ ನಾಗರಾಜ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಜೋಡುಕಟ್ಟೆಯಿಂದ ರಥಬೀದಿವರೆಗೆ ನಡೆದ ಶೋಭಾ ಯಾತ್ರೆಯಲ್ಲಿ ಪೇಜಾವರ ಸ್ವಾಮೀಜಿಯನ್ನು ಭವ್ಯವಾದ ರಥದಲ್ಲಿ ಕುಳ್ಳಿರಿಸಿ ಬರಮಾಡಿಕೊಳ್ಳಲಾಯಿತು. ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ತಂಡಗಳು, ಕುಣಿತ ಭಜನೆ, ಕತ್ತಿ ವರಸೆ, ಕೀಲ್ಕುದುರೆ, ಚೆಂಡೆ ವಾದ್ಯ, ಸ್ಯಾಕ್ಸೊಫೋನ್ ಮೊದಲಾದ ತಂಡಗಳು ಗಮನ ಸೆಳೆಯಿತು.