ಮಕ್ಕಳ ಕೈಗೆ ತಟ್ಟೆ ಕೊಟ್ಟು ಪ್ರತಿಭಟಿಸುವ ಬದಲು ಅಕ್ಷರ ದಾಸೋಹಕ್ಕೆ ಅರ್ಜಿ ಕೊಡಿಸಿ ; ರಮಾನಾಥ ರೈ
ಮಂಗಳೂರು: ಮಕ್ಕಳ ಹೊಟ್ಟೆಗೆ ಕನ್ನ ಹಾಕಲಾಗಿದೆ ಎಂದು ಆರೋಪಿಸುತ್ತ ಮಕ್ಕಳ ಕೈಗೆ ತಟ್ಟೆ ಕೊಟ್ಟು, ಭಿಕ್ಷೆ ಬೇಡಿಸುವ ಬದಲು ಪ್ರಭಾಕರ ಭಟ್ ಅವರು ತಮ್ಮ ಶಾಲೆಗೆ ಸರಕಾರದಿಂದ ಅಕ್ಷರ ದಾಸೋಹಕ್ಕಾಗಿ ಅರ್ಜಿ ಕೊಡಿಸಲಿ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಅದನ್ನು ಲಭಿಸುವ ಹಾಗೆ ತಾನು ಮಾಡುತ್ತೇನೆ ಎಂದು ದಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಲ್ಲಡ್ಕದ ಶ್ರೀರಾಮ ಪ್ರೌಢ ಶಾಲೆ ಹಾಗೂ ಶ್ರೀ ದೇವಿ ಪ್ರೌಢ ಶಾಲೆಗೆಳಿಗೆ ಶ್ರೀ ಮುಕಾಂಬಿಕ ದೇವಸ್ಥಾನ ಕೊಲ್ಲೂರು ವತಿಯಿಂದ ನೀಡಲಾಗುತ್ತಿದ್ದ ನೆರವನ್ನು ಸ್ಥಗಿತಗೋಳಿಸಿದ ಕುರಿತು ಉಂಟಾಗಿರುವ ಆರೋಪಗಳಿಗೆ ಉತ್ತರಿಸಿದರು.
ಶಾಲೆಗಳಿಗೆ ಧಾರ್ಮಿಕ ಪರಿಷತ್ತಿನಿಂದ ಮಧ್ಯಾಹ್ನದ ಊಟಕ್ಕಾಗಿ ನೀಡಲಾಗುತ್ತಿದ್ದ ನೆರವನ್ನು ಸ್ಥಗಿತಗೊಳಿಸಿರುವುದನ್ನು ವಿವಾದಗೊಳಿಸಿದ್ದು, ಆದರೆ ಕಾನೂನು ಪ್ರಕಾರ ದೇವಸ್ಥಾನಗಳಿಂದ ನಡೆಸುವ ಶಾಲೆಗಳಿಗೆ ಹೊರತುಪಡಿಸಿ ಅನುದಾನಿತ ಅಥವಾ ಖಾಸಗಿ ಶಾಲೆಗಳಿಗೆ ಈ ನೆರವನ್ನು ನೀಡುವಂತಿಲ್ಲ. ಆದರೆ ಈ ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗಳಿಗೆ ನಿಯಮಬಾಹಿರವಾಗಿ ಕಳೆದ ಕೆಲವು ವರ್ಷಗಳಿಂದ ಈ ನೆರವನ್ನು ನೀಡಲಾಗುತ್ತಿತ್ತು ಅದರಲ್ಲೂ ದೇವಾಲಯದಿಂದ ಈ ಎರಡು ಶಾಲೆಗಳಿಗೆ ಹಣದ ರೂಪದಲ್ಲಿ ನೆರವು ನೀಡಲಾಗುತ್ತಿತ್ತು ಹೊರತು ಆಹಾರದ ರೂಪದಲ್ಲಿ ಅಲ್ಲ ಎಂದರು.
ಹಾಲಿವುಡ್, ಬಾಲಿವುಡ್ ಸಿನೆಮಾ ನಟರಿಂದ, ಗಣಿ ಉದ್ಯಮಿ ಜನಾರ್ಧನ ರೆಡ್ಡಿ ಹಾಗೂ ಇತರ ಶ್ರೀಮಂತರಿಂದ ನೆರವು ಪಡೆಯುತ್ತಿರುವ ಶ್ರೀರಾಮ ಪ್ರೌಢ ಶಾಲೆಗೆ ಬಿಸಿಯೂಟದ ವ್ಯವಸ್ಥೆಬೇಕಾಗಿದ್ದಲ್ಲಿ ಅವರು ನೇರವಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅದನ್ನು ಕೊಡಿಸುವ ಪ್ರಾಮಾಣಿಕ ವ್ಯವಸ್ಥೆಯನ್ನು ನಾನು ಮಾಡುತ್ತೇನೆ ಎಂದರು.
ಶಾಲೆಗೆ ಬಿಸಿಯೂಟ ವ್ಯವಸ್ಥೆಯನ್ನು ಪಡೆಯುವ ಅವಕಾಶವಿದ್ದರೂ ಕೂಡ ನಿರಾಕರಿಸಿರುವ ಶಾಲೆಯು, ಹಣದ ರೂಪದಲ್ಲಿ ಕಾನೂನು ಬಾಹಿರವಾಗಿ ದೇವಸ್ಥಾನದಿಂದ ನೆರವನ್ನು ಪಡೆಯುತ್ತಿತ್ತು ಅದರ ವ್ಯವಸ್ಥೆಯನ್ನು ಧಾರ್ಮಿಕ ದತ್ತಿಇಲಾಖೆ ನಿಲ್ಲಿಸಿದ್ದು, ಇದು ರಾಜ್ಯದ ಇತರ ಶಾಲೆಗಳಿಗೂ ಅನ್ವಯಿಸಲಿದೆ ಹೊರತು ಯಾವುದೇ ದ್ವೇಷದ ಕ್ರಮವಲ್ಲ ಎಂದರು.
ದೇವಸ್ಥಾನದಿಂದ ಹಣದ ರೂಪದಲ್ಲಿ ಪಡೆದ ನೆರವನ್ನು ದುರುಪಯೋಗ ಪಡಿಸಲಾಗಿರುವ ಕುರಿತಂತೆಯೂ ತನಿಖೆ ಆಗಬೇಕಾಗಿದೆ ಅಲ್ಲದೆ ಶ್ರೀರಾಮ ಪ್ರೌಢಶಾಲೆಯ ಶಿಕ್ಷಕರಿಗೆ ಸರಕಾರದಿಂದ ವೇತನವನ್ನು ನೀಡಲಾಗುತ್ತಿದ್ದು, ಸರಕಾರದಿಂದ ವೇತನ ಪಡೆಯುತ್ತಿರುವವರೇ ಸರಕಾರದ ವಿರುದ್ದ ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಶಾಸಕರಾದ ಜೆ ಆರ್ ಲೋಬೊ, ಮೊಯ್ದಿನ್ ಬಾವಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.