ಮಕ್ಕಳು ವಿದ್ಯಾವಂತರಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು – ಶಾಸಕ ಲೋಬೊ
ಮಂಗಳೂರು: ದಕ್ಷಿಣ ವಲಯ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ದಿವಂಗತ ಸೋಮಪ್ಪ ಕುಂದರ್‍ರವರ ಸಮಾಜ ಸೇವಾ ಸಮರ್ಪಣೆಯ ನೆನಪಿಗಾಗಿ ತಾರೀಕು 29.05.2015ನೇ ಆದಿತ್ಯವಾರದಂದು ಮಂಗಳಾದೇವಿಯ ಕಾಂತಿ ಚರ್ಚ್ ಹಾಲ್‍ನಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹ ಧನ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ನೆರವೇರಿತು.
ಈ ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್. ಲೋಬೊ ಉದ್ಫಾಟಿಸಿ ಮಾತನಾಡುತ್ತಾ ದಿವಂಗತ ಕುಂದರ್ ರವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಅನೇಕ ಬಡ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದ್ದರು. ಈಗ ಅವರ ಮಕ್ಕಳು ಅದನ್ನು ಮುಂದುವರಿಸಿಕೊಂಡು ಬಂದಿರುವುದು ನಿಜಕ್ಕೂ ಶ್ಲಾಘನೀಯ. ಮಕ್ಕಳಿಗೆ ವಿದ್ಯಾಭ್ಯಾಸ ಅತೀ ಅಗತ್ಯ. ಎಲ್ಲಾ ಮಕ್ಕಳು ವಿದ್ಯಾವಂತರಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡುವುದರಿಂದ ಮಕ್ಕಳಿಗೆ ಮಾತ್ರವಲ್ಲದೇ ಅವರ ಹೆತ್ತವರಿಗೆ ಬಹಳಷ್ಟು ಉಪಕಾರವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್‍ನ ಶ್ರೀ ಜಯಾನಂದ ಮತ್ತು ಚೆನ್ನಕೇಶವ, ಮನಪಾ ಸದಸ್ಯರಾದ ಶ್ರೀ ರಾಧಾಕೃಷ್ಣ, ಶ್ರೀ ಪ್ರಭಾಕರ್ ಶ್ರೀಯಾನ್, ಟಿ.ಕೆ. ಸುಧೀರ್, ಡೆನ್ನಿಸ್ ಡಿ.ಸಿಲ್ವ, ಬಶೀರ್ ಬೈಕಂಪಾಡಿ, ರಮಾನಂದ ಪೂಜಾರಿ ಉಪಸ್ಥಿತರಿದ್ದರು.
ಸುಮಾರು 150 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ 60 ಮಂದಿಗೆ ವಿದ್ಯಾ ಪ್ರೋತ್ಸಾಹ ಧನ ನೀಡಲಾಯಿತು. ಶ್ರೀ ಕಿಶನ್ ಕಿಶೋರ್ ಸ್ವಾಗತಿಸಿ, ಶ್ರೀ ಸತೀಶ್ ಕುಂದರ್ ವಂದಿಸಿದರು. ಉದಯ ಕುಂದರ್ ಕಾರ್ಯಕ್ರಮವನ್ನು ನಿರೂಪಿದರು.