ಮಣಿಕಲ್ಲು ಶ್ರೀ ಮಹಾದೇವಿ ಅಬ್ಬಗ ಧಾರಗ ಅಮ್ಮನವರ ಸಾನಿಧ್ಯ ಕುರಿತು ಅಷ್ಟಮಂಗಲ ಪ್ರಶ್ನೆಯ ಸಾರಾಂಶ
ದೈವಜ್ಞರಾದ ಶ್ರೀಯುತ ಅಶ್ವಿನ್ ಶರ್ಮಾ ಮಣಿಪಾಲ ಅವರು ಮಣಿಕಲ್ಲು ಶ್ರೀ ದೇವಿ ಅಬ್ಬಗ ಧಾರಗೇಶ್ವೇರಿ ಸಾನಿಧ್ಯದ ಕುರಿತು ಅಷ್ಟಮಂಗಲ ಪ್ರಶ್ನೆಯಲ್ಲಿ ನೀಡಿದ ವಿವರ ಯಥಾವತ್ತಾಗಿ ಪ್ರಕಟಿಸಲಾಗಿದೆ
ಅನೇಕ ಕೋಟಿ ಬ್ರಹ್ಮಾಂಡದ, ಸೃಷ್ಟಿ, ಸ್ಥಿತಿ, ಲಯಗಳಿಗೇ ವಿಭುವಾದ, ಆ ಮೂಲ ತತ್ವಕ್ಕೆ ನಮಿಸುತ್ತಾ, ತಾಯಿ ಭುವನೇಶ್ವರಿಯನ್ನು ಪ್ರಾರ್ಥಿಸುತ್ತಾ,
ನಮ್ಮ ಸನಾತನ ಧರ್ಮ ನಿತ್ಯವೂ, ನೂತನವೂ ಆಗಿರುವಂತದ್ದು, ಸನಾತನ ತತ್ವದ ಪ್ರತಿರೂಪದಂತಿರುವ ಅನೇಕ ಋಷಿ, ಮುನಿಗಳು, ವೇದ, ಪುರಾಣಗಳು ಸಾಮಾನ್ಯ ಮನುಷ್ಯರಿಗೆ ಅರ್ಥವಾಗುವಂತೆ ಚಿತ್ರೀಕರಿಸಲ್ಪಟ್ಟವು.
ಅಸೇತು ಹಿಮಾಚಲದವರೆಗೆ ಈ ಭರತಭೂಮಿ ದೇವ ಸಾನಿಧ್ಯಗಳ ಬೀಡಾಗಿರುವುದು, ಅನೇಕ ಆಕ್ರಮಣ ದಾಳಿಗಳು ನಡೆದರೂ ಈ ಸಾನಿಧ್ಯಗಳು ತಮ್ಮ ಮೂಲ ಚಿತ್ರಣವನ್ನು ಅಂತೇ ಕಾಪಿಟ್ಟು ಈಗ ಮತ್ತೆ ಪುಟಿದೆದ್ದು ನಿಲ್ಲುವ ಸಂದರ್ಭದಲ್ಲಿ ನಾವೆಲ್ಲರೂ ತಲೆಬಾಗಿ ನಮಸ್ಕರಿಸೋಣ ಬನ್ನಿ.
ಇಂತಹ ಸಾನಿಧ್ಯಗಳಲ್ಲಿ ಉಡುಪಿ ಜಿಲ್ಲೆಯ ಮಣಿಕಲ್ಲು ಸಾನಿಧ್ಯವೂ ಒಂದು. ಕರಾವಳಿಯಿಂದ ಹಿಡಿದು, ಮಲೆನಾಡು, ಬೆಂಗಳೂರು ಮುಂಬಯಿ, ಮೊದಲಾಡೆಯಿಂದ ಅನೇಕ ಭಕ್ತ ಸಮೂಹವನ್ನು ಪಡಕೊಂಡ ಕ್ಷೇತ್ರವಾಗಿದೆ.
ಇಂತಹ ಕ್ಷೇತ್ರದ ಇತಿಹಾಸ ತಿಳಿದುಕೊಳ್ಳುವ ಸಲುವಾಗಿ ದಿನಾಂಕ: 23-11-2024 ನೇ ಶನಿವಾರದಂದು ಬಿಲ್ಲಾಡಿ ಮನೆಯಲ್ಲಿ ದೈವಜ್ಞರಾದ ಶ್ರೀಯುತ ಅಶ್ವಿನ್ ಶರ್ಮಾ ಮಣಿಪಾಲ, ಶ್ರೀಯುತ ಶ್ರೀ ಕುಮಾರ್ ಶರ್ಮಾ ವಯನಾಡ್ ಕೇರಳ ಮತ್ತು ಶ್ರೀಯುತ ರಾಘವೇಂದ್ರ ಉಡುಪ ಹಟ್ಟಿಕುದ್ರು ಕುಂದಾಪುರ ಇವರ ಮುಖಾಂತರ ಅಷ್ಟಮಂಗಳ ಸ್ವರ್ಣ ಪ್ರಶ್ನೆಯನ್ನು ಇರಿಸಲಾಯಿತು.
ಮಣಿಕಲ್ಲು ಶ್ರೀ ದೇವಿ ಅಬ್ಬಗ ದಾರಗೇಶ್ವೇರಿ ಸಾನಿಧ್ಯದ ಹೆಸರಿನ ಪ್ರಶ್ನಾ ಚಿಂತನೆಯಲ್ಲಿ ಸ್ವರ್ಣರೂಢ ರಾಶಿ ತುಲಾ, ಸ್ವರ್ಣಾಂಶಕ ರಾಶಿ ವೃಶ್ಚಿಕ, ಉದಯ ರಾಶಿ ಮಕರ, ಲಗ್ನಾಂಶಕ ರಾಶಿ ಮಿಥುನ, ಛತ್ರರಾಶಿ ಕನ್ಯಾ, ಸ್ಪಷ್ಟಾಂಗ ರಾಶಿ ವೃಶ್ಚಿಕ, ಚಂದ್ರಾದೀಷ್ಠಿತ ರಾಶಿ ಸಿಂಹ, ತಾಂಬೂಲ ರಾಶಿ ವೃಶ್ಚಿಕ.
ಕ್ಷೇತ್ರದ ಪುರಾಣ ಇತಿಹಾಸ
ಸೃಷ್ಟಿ ಕಾಲದಲ್ಲಿ ದಕ್ಷ ಪ್ರಜಾ ಪತಿಯ ಮಗಳಾದ ದಾಕ್ಷಾಯಣಿಗೆ ಯಾಗ ಶಾಲೆಯಲ್ಲಿ ಅವಮಾನವಾದ ಹೊತ್ತಲ್ಲಿ, ಆಕೆ ತನ್ನ ಕ್ರೋದಾಗ್ನಿಯಲ್ಲಿ ತನ್ನನ್ನು ದಹಿಸಿಕೊಂಡಳು. ಮಂಗಳಮಯನಾದ ಶಿವನು ಕ್ರೋದಗೊಂಡು, ವೀರಭದ್ರ ಮತ್ತು ಭದ್ರಕಾಳಿಯಿಂದ ದಕ್ಷನ ವಧೆಯಾಗುವುದು. ಕ್ರೋದಗೊಂಡ ಶಿವನು ತನ್ನ ಏಕಾಂತಕ್ಕಾಗಿ ಈ ಭೂಮಿಯಲ್ಲಿ ನೆಲೆಯಾದ. ಕ್ರೋದಗೊಂಡ ಶಿವ ಇಲ್ಲಿ ಕಾಲಭೈರವ ಸ್ವರೂಪ ಪಡೆದುಕೊಂಡು ನಿಂತ. ಆ ಶಿವನನ್ನು ಸಾಂತ್ವನಗೊಳಿಸಲು ನಾರಾಯಣ, ಬ್ರಹ್ಮ ಸೇರಿ ದೇವಾನುದೇವತೆಗಳೇ ಈ ಜಾಗಕ್ಕೆ ಬಂದ ಲಕ್ಷಣ ಕಾಣುವುದು.
ಮಣಿಕಲ್ಲು ನಾಗಸಾನಿಧ್ಯ ಇರುವ ಕಡೆ ಬ್ರಹತ್ ಆದ ಶಿಲೆಯ ಪಾರ್ಶ್ವದ ಗುಹೆಯಲ್ಲಿ ಆ ಶಿವ ಸಾನಿಧ್ಯ ಅಗೋಚರವಾಗಿ ಪ್ರಾಕೃತಿಕ ರೂಪದಲ್ಲಿ ಕಾಣುವುದು. ಶಿಲೆಯಲ್ಲಿ ಪಾದುಕೆಯ ರೂಪವನ್ನು ಕಾಣಬಹುದು. ಶಿವನ ಪಾದದಲ್ಲಿ ಸರ್ಪವೂ ನೆಲೆನಿಂತ ಜಾಗ. ಗಂಗೆಯು ಇದ್ದಾಳೆ. ಶಿವನ ಆ ಪ್ರಭೆಯೇ ಮಾಣಿಕ್ಯ ರೂಪದಲ್ಲಿ ಕಂಡಿರುವುದರಿಂದ ಇದನ್ನು ಮಣಿಕಲ್ಲು ಎಂದು ಕರೆದರು. ದಾಕ್ಷಾಯಣಿ ಯ ಕೋಪವೂ ಕಾಣುತ್ತಿದೆ. ದಾಕ್ಷಾಯಣಿ ಪಾರ್ವತಿಯಾದ ಬಳಿಕ ಶಿವನನ್ನು ಹುಡುಕಿ ಬಂದ ಲಕ್ಷಣಗಳು ಇವೆ.
ಈ ವರ್ತಮಾನ ಕಾಲದಲ್ಲಿ ಆ ಶಿವನೇ ಸಮಸ್ತ ಭೂತನಾಥರ “ಭೂತನಾಥೇಶ್ವರ” ನಾಗಿ ನಿಂತಿದ್ದಾನೆ. ಆ ಶಿವನನ್ನು ಕಂಡು ಈ ಪ್ರದೇಶದ ಎಲ್ಲಾ ಸಾನಿಧ್ಯಗಳು ಆಕರ್ಷಿತಗೊಂಡು ಈ ಕ್ಷೇತ್ರ ಆಲಡೆಯ ರೂಪದಲ್ಲಿ ಕಂಗೊಳಿಸುತ್ತದೆ.
ಈ ಪ್ರದೇಶದ 30 ಸಾನಿಧ್ಯಗಳು 30 ವರ್ಗಗಳು ಈ ಕ್ಷೇತ್ರಕ್ಕೆ ಸಂಬಂಧ ಪಟ್ಟು ನಿಂತಿವೆ. ಬಳಿಕ ಕಲಿಯುಗದ ಆದಿಯಲ್ಲಿ ಮಾನಸದಿಂದ ಇಳಿದು ಬಂದ ವಿಶಿಷ್ಟನಾದ ಮೂಲ ಗುರು ಶ್ರೀ ಮಚ್ಚೇಂದ್ರನಾಥರು ತನ್ನ ಎಂಟು ಶಿಷ್ಯರೊಂದಿಗೆ ಜಗತ್ ಕಲ್ಯಾಣಕ್ಕಾಗಿ ಜಗದೆಲ್ಲೆಡೆ ತಪ್ಪಸ್ಸು ಗೈದು ತನ್ನ ಜ್ಞಾನವನ್ನು ಪಸರಿಸುವ ಹೊತ್ತಲ್ಲಿ ತನ್ನ ಮನೋನ್ಮಯಿಯಾದ ತಾಯಿಯನ್ನು, ಈ ಜಾಗದಲ್ಲಿ ಕಂಡರು. ಈ ಜಾಗದಲ್ಲಿ ಆ ಗುರು ತಪಸ್ಸು ಮಾಡಿ ತನ್ನ ತಾಯಿಯನ್ನು ಸಂತುಷ್ಟಗೊಳಿಸಿದರು. ಮನುಕುಲಕ್ಕೆ ಜ್ಞಾನವನ್ನು ಕೊಡಲು ಬಂದ ಆ ಮೂಲ ಗುರು ತನ್ನವರಿಂದಲೇ ನೋವಿಗೆ ಒಳಗಾದರು.
ತಾನೇ ಎತ್ತಿಕೊಟ್ಟ ತಾಯಿಯನ್ನು ಕೂಡ ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿದ ತಪ್ಪಿಗೆ ಗುರು ಕೋಪವೂ ಬಂತು, ಆ ದೇವಿ ಕೋಪವೂ ಬಂತು. ಆ ಗುರುವಿನ ಸಂಕೇತವಾಗಿ ಮಣಿಕಲ್ಲು ಮತ್ತು ಬಿಲ್ಲಾಡಿಯಲ್ಲಿ “ಸ್ವಾಮಿ ಗಣ” ಎಂಬ ಸಾನಿಧ್ಯವಿರುವುದು ಕಂಡು ಬಂತು.
ನಂತರದ ಕಾಲ ಅಂದರೆ ಈಗಿನ 1,850 ವರ್ಷಗಳ ಹಿಂದೆ ಕನ್ನಡದ ಮೊದಲ ದೊರೆ ತ್ರಿನೇತ್ರ ಕದಂಬ ಎಂದೇ ಪ್ರಖ್ಯಾತರಾದ ರಾಜಾ ಮಯೂರ ವರ್ಮರ ಆಡಳಿತ ಭೂಮಿ ಆಗಿತ್ತು. ಆ ಕಾಲದಲ್ಲಿ ಆ ರಾಜಪರಂಪರೆ ಜೇನ್ಯತ್ತದಲ್ಲಿದ್ದು, ಸುಖೀ ಸಾಮ್ರಾಜ್ಯವಾಗಿತ್ತು.
ನಂತರ ಅದೇ ರಾಜ ಪರಂಪರೆಯ (ಈಗಿನ 600 ವರ್ಷಗಳ ಹಿಂದೆ) ಮಾಂಡಲಿಕನೊರ್ವ ಈ ಪ್ರದೇಶ ಆಳುತ್ತಲಿದ್ದು, ಈಗಿನ ಬಿಲ್ಲಾಡಿ ಗುತ್ತು ಎಂಬಲ್ಲಿ ಕ್ಷತ್ರೀಯ ಪರಂಪರೆಯ ಅರಮನೆ ಇತ್ತು. ಆ ಅರಮನೆಯಲ್ಲಿ ರಾಜನ ಉಪಾಸನಾ ಮೂರ್ತಿ ವ್ಯಾಘ್ರು ಚಾಮುಂಡೇಶ್ವರಿಯ ಉಪಾಸನೆ ನಡೆಯುತ್ತಿತ್ತು. ಅದೇ ಶಕ್ತಿ ಈಗ ಗುತ್ತಿನ ಮನೆಯ ಹೊರಗೆ ಒಂದು ಕಟ್ಟೆಯಲ್ಲಿ ರಾಜರಾಜೇಶ್ವರಿ ರೂಪದಲ್ಲಿ ಇದ್ದಾಳೆ ಎಂದು ಕಂಡು ಬಂತು. ರಾಜ ಪರಂಪರೆಯ ಕಾಲದಲ್ಲಿ ರಾಜನ ಗದ್ದುಗೆಯ ಆಸೆ, ಧನ, ಕನಕಾದಿ, ಭೂಮಿಯ ಆಸೆಗಾಗಿ ಹಲವು ಪಿತೂರಿಗಳು ನಡೆದವು. ಆ ಮೂಲ ಶಕ್ತಿಗೆ ನರಬಲಿ ಇತ್ಯಾದಿಗಳನ್ನು ಕೊಟ್ಟು ಅವಳನ್ನು ನೋವ ಕೊಡುವ ಕಾಳಿ ಶಕ್ತಿಯಾಗಿ ಪರಿವರ್ತಿಸಲಾಯಿತು.
ಅಂದಿನ ರಾಜ ಇಲ್ಲಿಯ ಸಾನಿಧ್ಯಕ್ಕೆ (ಮಣಿಕಲ್ಲು ) ಅನೇಕ ಭೂಮಿಯನ್ನು ಉಂಬಳಿಯಾಗಿ ನೀಡಿದರು. ಬ್ರಾಹ್ಮಣರಿಗೆ ಅಗ್ರಹಾರ ನಿರ್ಮಿಸಿ ಕೊಟ್ಟರು. ಸುಖೀ ಸಾಮ್ರಾಜ್ಯವೇ ಆಗಿದ್ದ ಈ ಪ್ರದೇಶ ಮತ್ತೆ ನಾಶದತ್ತ ಹೋಯಿತು. ನಂತರ ಅನೇಕ ಆಕ್ರಮಣಗಳು ನಡೆದವು. ನಂತರ ಬೇರೆ ರಾಜ ಪರಂಪರೆ ಬಂದು ಆಳಿದ ಲಕ್ಷಣಗಳೂ ಇವೆ.
ರಾಜ ಪರಂಪರೆ ಪೂರ್ಣ ನಾಶದತ್ತ ಹೋಗುವ ಹೊತ್ತಲ್ಲಿ ಈಗಿನ 250 ವರ್ಷದಿಂದ 400 ವರ್ಷಗಳ ನಡುವೆ ಈ ಬಿಲ್ಲಾಡಿ ವಂಶ ಈ ಪ್ರದೇಶದಲ್ಲಿ ಬೇರೂರಿತು. ಆಗ ಈ ಪ್ರದೇಶದ ವರನಿಗೆ ನಂದಳಿಕೆ ಎನ್ನುವ ಊರಿನ ವಧುವನ್ನು ಮದುವೆ ಮಾಡಿ ತರಲಾಯಿತು. ಆ ಕನ್ಯ ದೇವಾಂಶಳಾಗಿದ್ದು ಅವಳ ಉಪಾಸನಾ ಮೂರ್ತಿ ಅಬ್ಬಗ ಧಾರಗ ಎಂಬ ಸಿರಿಯರು, ಅವರು ಈ ಜಾಗದ ರಾಜೇಶ್ವರೀ ತಾಯಿಯನ್ನು ಗುರುತಿಸಿರುವುದರಿಂದ ನಂದಳಿಕೆಯ ಕನ್ನೆಯ ಒಟ್ಟಿಗೆ ಈ ಪ್ರದೇಶಕ್ಕೆ ಬಂದರು.
ಈ ಬಿಲ್ಲಾಡಿ ಮನೆ ಗುತ್ತಿನ ಮನೆಯಾಗಿ ನ್ಯಾಯ ಒದಗಿಸುವ ಮನೆ ಆಗಿತ್ತು. ಈ ಮನೆತನದ ಹಿರಿಯ ಗುರಿಕಾರ ಮಣಿಕಲ್ಲಿನ ಮತ್ತು ಬಿಲ್ಲಾಡಿಯ ಸಾನಿಧ್ಯವನ್ನು ಉಪಾಸನೆ ಮಾಡಿ ಗುರು ಸಮಾನ ವ್ಯಕ್ತಿಯಾಗಿದ್ದ. ಆ ಹೊತ್ತಲ್ಲಿ ನಂದಳಿಕೆಯಿಂದ ಬಂದ ಸ್ತ್ರೀಯ ಮೇಲೆ ಹೊರಗಿನವರ ಪಿತೂರಿಯಿಂದ ಸುಳ್ಳು ಅಪವಾದಗಳು ಬಂದು, ಈ ನ್ಯಾಯ ಚಾವಡಿಯಲ್ಲಿ ಸುಳ್ಳು ನ್ಯಾಯ ಕೊಡಿಸಿ ಅವಳನ್ನು ಇದೇ ಭೂಮಿಯಲ್ಲಿ ವದ ಮಾಡಲಾಯಿತು. ಆಗ ಆಕೆ ತುಂಬು ಗರ್ಭಿಣಿ ಆಗಿದ್ದಳು. ಆ ಸ್ತ್ರೀ ಈಗ ಉಗ್ರ ಸ್ವರೂಪದಲ್ಲಿ ಇರುವುದು ಕಂಡು ಬಂತು. ಗುರಿಕಾರನೂ ಕೋಪದಲ್ಲಿ ನಿಂತಿದ್ದಾನೆ.
ಆ ಕಾಲದಲ್ಲಿ ಈ ಬಿಲ್ಲಾಡಿ ವಂಶ ಒಂದೇ ವಂಶವಾಗಿತ್ತು. ಈ ಗುರಿಕಾರನ ಕೋಪ, ಸ್ತ್ರೀ ಕೋಪ, ಗುರು ಕೋಪ, ದೇವಿ ಕೋಪ, ಶಿವ ಕೋಪ, ರಾಜ ರಾಜೇಶ್ವರಿಯ ಕೋಪ, ಬ್ರಾಹ್ಮಣ ಕೋಪ, ಇತ್ಯಾದಿಗಳಿಂದ ಈ ಒಂದೇ ಕುಟುಂಬ ಇಬ್ಬಾಗವಾಯಿತು.
ಈ ವರ್ತಮಾನದಲ್ಲಿ ಹಿಂದಿನ ಎಲ್ಲಾ ದುರಿತಗಳಿಂದ ಮಣಿಕಲ್ಲು ದೇವಾಲಯಲ್ಲಿ ಕರ್ಮಲೋಪಗಳು ಆಗುತ್ತಿವೆ. ವಾಕ್ ದೋಷಗಳು, ದೈವ ನಿಂದೆ, ಅಶುದ್ಧಿಗಳೂ ನಡೆಯುತ್ತಿವೆ. ಇದರಿಂದ ಇಲ್ಲಿಯ ಸಾನಿಧ್ಯಗಳು ಹೊರಟು ನಿಂತ ಸ್ಥಿತಿ ಕಾಣುತ್ತಿದೆ. ಎಲ್ಲರೂ ಜೀವನ ಧರ್ಮವನ್ನು ಅಳವಡಿಸಿಕೊಂಡು ಪೂರ್ವಕಾಲದಲ್ಲಿ ಆದ ಎಲ್ಲಾ ದುರಿತಗಳನ್ನು ಸರಿಪಡಿಸಿಕೊಂಡು ಈ ಸಾನಿಧ್ಯಗಳಿಗೆ ತನು ಮನಗಳಿಂದ ಪ್ರಾರ್ಥಿಸಿ ಶರಣಾಗತರಾದಲ್ಲಿ, ಮುಂದೆ ಈ ಸಾನಿಧ್ಯದಲ್ಲಿ ಸೃಷ್ಟಿ ಕಾಲದ ಆ ಸ್ವಯಂ ಭೂ ಮಂಗಳಮಯನಾದ ಮಹಾದೇವ ಭೂತನಾಥೇಶ್ವರನಾಗಿ ತನ್ನ ಗಣಗಳೊಂದಿಗೆ ಪ್ರಾಕೃತಿಕ ರೂಪದಲ್ಲಿ ನಿಂತು ಪಾಲಿಸುವ.
ದೇವಾಲಯದ ಒಳಗೆ ನೀವು ದೇವಿ ಅನ್ನುವ ಅಥವಾ ಅಮ್ಮ ಅನ್ನುವ ಶಕ್ತಿ ಭದ್ರಕಾಳಿ ಸ್ವರೂಪದಲ್ಲಿ ಪ್ರಧಾನ ಶಕ್ತಿಯಾಗಿ, ಅಬ್ಬಗ, ಧಾರಗರು ತಾಯಿ ರಾಜರಾಜೇಶ್ವರಿಯ ಸೇವಕಿಯಾಗಿ ಈ ದೇವಾಲಯದಲ್ಲಿ ನಿಲ್ಲುವೆವು ಎಂದು ಅಬ್ಬಗ ಧಾರಗರು ಮಾಡುವ ಆಗ್ರಹ.