ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಪೇಜಾವರ ಸ್ವಾಮೀಜಿಯ ಆರೋಗ್ಯ ವಿಚಾರಿಸಿದ ಉಡುಪಿ ಬಿಷಪ್
ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಭೇಟಿ ನೀಡಿ ಉಸಿರಾಟದ ಗಂಭೀರ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರ ಸ್ವಾಮೀಜಿಯವರ ಆರೋಗ್ಯವನ್ನು ವಿಚಾರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಹಲವಾರು ವರ್ಷಗಳಿಂದ ನಾವು ಸ್ವಾಮೀಜಿಯವರೊಂದಿಗೆ ಒಳ್ಳೆಯ ಭಾಂಧವ್ಯವನ್ನು ಇಟ್ಟುಕೊಂಡಿದ್ದೇವೆ. ಹಲವಾರು ಕಾರ್ಯಕ್ರಮಗಳಲ್ಲಿ ಸ್ವಾಮೀಜಿಯವರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ನಮಗೆ ಸಿಕ್ಕಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಸ್ವಾಮೀಜಿಯವರ ಆರೋಗ್ಯ ಸುಧಾರಿಸುವಂತೆ ನಾವು ಹಲವಾರು ದಿನಗಳಿಂದ ದೇವರಲ್ಲಿ ಪ್ರಾರ್ಥಿಸುತ್ತಿದ್ದು, ಆದಷ್ಟು ಬೇಗ ಅವರ ಆರೋಗ್ಯ ಸುಧಾರಿಸಿ ಮತ್ತೆ ಪುನಃ ಶ್ರೀಕೃಷ್ಣನ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು
ಪೇಜಾವರ ಶ್ರೀಗಳು ಆಸ್ಪತ್ರೆಗೆ ದಾಖಲಾಗಿರುವುದರಿಂದ ದೇಶಾದ್ಯಂತ ಹಲವು ಗಣ್ಯರು ಶ್ರೀಗಳನ್ನು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಕಸ್ತೂರ ಬಾ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಇನ್ನೂ ಹಲವು ಗಣ್ಯರು ದೂರವಾಣಿ ಮೂಲಕ ಮಾತನಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ಶ್ರೀಗಳ ಆರೋಗ್ಯ ಚೇತರಿಕೆ ಕಾಣಲೆಂದು ಹಲವೆಡೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.