ಮಣಿಪಾಲ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡಿ, ಕಾರ್ಮಿಕರ ಹಕ್ಕುಗಳ ದಾಳಿ, ಕಾರ್ಮಿಕ ಕಾನೂನು ಮಾಲಿಕರ ಪರ ತಿದ್ದುವ ಕ್ರಮವನ್ನು ಕೈಬಿಡಬೇಕು. ಭವಿಷ್ಯ ನಿಧಿ, ಕಾರ್ಮಿಕ ಪಿಂಚಣಿ ಯೋಜನೆ, ಕಾರ್ಮಿಕ ವಿಮಾ ಯೋಜನೆ, ಇಎಸ್ಐನ್ನು ಕಾರ್ಮಿಕರಿಂದ ಕಸಿಯುವ ಷಡ್ಯಂತರ ಹಾಗೂ ಪಿಎಫ್ನ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಖಂಡನೀಯ ಎಂದರು.
ಸಾಮಾಜಿಕ ವೆಚ್ಚಗಳ ಕಡಿತ, ಐಸಿಡಿಎಸ್, ಅನುದಾನದ ಕಡಿತ, ಬಿಸಿ ಯೂಟ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ನ ವೆಚ್ಚಗಳ ಕಡಿತ ಮಾಡಿ ರುವುದನ್ನು ವಿರೋಧಿಸಲಾಗುವುದು. ದೇಶದ ರೈಲ್ವೆ ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸಬಾರದು. ಭೂಸ್ವಾಧೀನ ಕಾಯಿದೆ ತಿದ್ದುಪಡಿ ತರುವ ಸುಗ್ರೀವಾಜ್ಞೆ ಕೈಬಿಡಬೇಕು ಎಂದು ಅವರು ತಿಳಿಸಿದರು.
ಬೆಲೆ ಏರಿಕೆಯನ್ನು ತಡೆಗಟ್ಟಬೇಕು. ಕನಿಷ್ಠ ವೇತನ ತಿಂಗಳಿಗೆ 15ಸಾವಿರ ರೂ. ನಿಗದಿಗೊಳಿಸಬೇಕು. ಬೆಳೆಯುತ್ತಿರುವ ಗುತ್ತಿಗೆ ಕಾರ್ಮಿಕ ಪದ್ಧತಿ ಕೈಬಿಟ್ಟು ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೆ ತರಬೇಕು. ಸ್ಕೀಂ ನೌಕರರಾದ ಅಂಗನ ವಾಡಿ ಬಿಸಿಯೂಟ, ಆಶಾ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ಜಾರಿಗೆ ಹಾಗೂ ಅವರ ಸೇವೆಯನ್ನು ಖಾಯಂಗೊಳಿಸಬೇಕು. ಬೀಡಿ ಕಾರ್ಮಿಕರಿಗೆ ತಡೆ ಹಿಡಿದಿರುವ ತುಟ್ಟಿ ಭತ್ತೆಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಮುಖಂಡರಾದ ಎಚ್. ನರಸಿಂಹ, ಕೆ.ಲಕ್ಷ್ಮಣ್, ನಳಿನಿ, ಬಲ್ಕೀಸ್, ಉಮೇಶ್ ಕುಂದರ್, ಸುರೇಶ್ ಕಲ್ಲಾಗರ್, ರಾಮ ಕರ್ಕಡ, ಕವಿರಾಜ್, ವೆಂಕಟೇಶ್ ಕೋಣಿ, ಶೇಖರ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.