ಮಣಿಪಾಲ: ಪತ್ನಿಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆಗೆಂದು ಕರೆದುಕೊಂಡು ಬಂದಿದ್ದ ಆರೋಪಿ ಗಯಾಪ್ರಸಾದ್ ಎಂಬವರು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಉತ್ತರಪ್ರದೇಶದ ಭಾಂಡಾ ಜಿಲ್ಲೆಯ ಭವಾನಿ ಡೇರ ಗ್ರಾಮದ ಗಯಾಪ್ರಸಾದ್ (20) ಆತನ ರಾಜ್ಯದವಳೇ ಆದ ರೋಶ್ನಿ(18) ಎಂಬಾಕೆಯನ್ನು ವಿವಾಹವಾಗಿದ್ದ. ಇಬ್ಬರೂ ಉತ್ತರ ಪ್ರದೇಶದಿಂದ ಉಡುಪಿಯ ಪರ್ಕಳ ಲೇಬರ್ ಕಾಲನಿಗೆ ಬಂದು ನೆಲೆಸಿದ್ದರು. ಮದುವೆಯ ಬಳಿಕ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.
ರೋಶ್ನಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಸಹೋದರ ಶಿವಮಂಗಲ್ ರೋಶ್ನಿ ಆತ್ಮಹತ್ಯೆಗೆ ಗಯಾಪ್ರಸಾದ್‌ನ ಕಿರುಕುಳವೇ ಕಾರಣ ಎಂದು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು .ರೋಶ್ನಿಗೆ ನಿರಂತರ ಹಿಂಸೆ ನೀಡುತ್ತಿದ್ದ ಎಂದು ದೂರಿದ್ದರು. ಪ್ರಕರಣ ದಾಖಲಿಸಿದ್ದ ಪೊಲೀಸರು ಬುಧವಾರ ರಾತ್ರಿ 9.30ಕ್ಕೆ ಗಯಾಪ್ರಸಾದ್‌ನನ್ನು ಬಂಧಿಸಿ ಠಾಣೆಗೆ ಕರೆತರಲಾಗಿತ್ತು.
ಪೊಲೀಸ್ ಠಾಣೆಯ ಲಾಕಪ್‌ನಲ್ಲಿದ್ದ ಗಯಪ್ರಸಾದ್‌ನನ್ನು ರಾತ್ರಿ 11.30ಕ್ಕೆ ನೋಡಿದಾಗ ಆತ ಬಟ್ಟೆ ಹೊದ್ದು ಮಲಗಿದ್ದ. ರಾತ್ರಿ 11.45ರ ಹೊತ್ತಿಗೆ ಸದ್ದು ಕೇಳಿದಾಗ ಮತ್ತೆ ಡ್ಯೂಟಿಯಲ್ಲಿದ್ದ ಪೊಲೀಸರು ನೋಡಲು ಹೋದಾಗ ಲಾಕಪ್ ಕೊಠಡಿಯೊಳಗೆ ಇರುವ ಶೌಚಾಲಯದ ಕಿಟಕಿಯ ವೆಂಟಿಲೇಟರ್‌ಗೆ ಬಟ್ಟೆ ಕಟ್ಟಿ ನೇಣು ಹಾಕಿಕೊಂಡು ಒದ್ದಾಡುತ್ತಿದ್ದ. ಕೂಡಲೇ ಇಳಿಸಿ ಪ್ರಥಮ ಚಿಕಿತ್ಸೆ ನೀಡಿ ಆತನನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮಾನವ ಹಕ್ಕು ಕಾಯ್ದೆ ಪ್ರಕಾರ ಆಯೋಗಕ್ಕೆ ರಾತ್ರಿಯೇ ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದರು. ಜೆಎಂಎಫ್‌ಸಿ ಪ್ರಧಾನ ನ್ಯಾಯಾಧೀಶೆ ಸುನೀತಾ ಅವರು ಪೊಲೀಸ್ ಠಾಣೆಗೆ ಬಂದು ವಿಚಾರಣೆ ನಡೆಸಿದ್ದಾರೆ. ಬಳಿಕ ಮಣಿಪಾಲ ಶೈತ್ಯಾಗಾರದಲ್ಲಿ ನ್ಯಾಯಾಧೀಶೆಯ ಮುಂದೆಯೆ ವಿಚಾರಣೆ, ಮರಣೋತ್ತರ ಪರೀಕ್ಷೆಗಳು ನಡೆದಿವೆ. ಪಶ್ಚಿಮ ವಲಯ ಐಜಿಪಿ ಅಮೃತ್ ಪಾ ಲ್, ಎಎಸ್‌ಪಿ ಸಂತೋಷ್ ಕುಮಾರ್, ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಇನ್‌ಸೆಕ್ಟರ್‌ಗಳಾದ ಗಿರೀಶ್, ಶ್ರೀಕಾಂತ್, ದಿವಾಕರ್ ಭೇಟಿ ನೀಡಿದ್ದಾರೆ.