ಮಣಿಪಾಲದಲ್ಲಿ ತಲೆ ಎತ್ತುತ್ತಿರುವ ಜೂಜು ಹಾಗೂ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಟ: ಬಿಜೆಪಿ ನಗರ ಯುವ ಮೋರ್ಚಾ
ಉಡುಪಿ: ವಿದ್ಯಾಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಮಣಿಪಾಲ ನಗರದ ಹೃದಯಭಾಗದಲ್ಲಿ ವಿದ್ಯಾರ್ಥಿಗಳ ಭವಿಷ್ಯವನ್ನೇ ಬರಡು ಮಾಡಬಲ್ಲ ಜುಗಾರಿ ಅಡ್ಡೆಗಳು ತಲೆ ಎತ್ತುತ್ತಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ಉಡುಪಿ ನಗರ ಯುವ ಮೋರ್ಚಾ ಅಧ್ಯಕ್ಷ ಅಕ್ಷಿತ್ ಶೆಟ್ಟಿ ಹೆರ್ಗ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮಣಿಪಾಲದಲ್ಲಿ ದೇಶವಿದೇಶದ ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಬರುತ್ತಿದ್ದು, ಜಾಗತಿಕ ಮಟ್ಟದಲ್ಲಿ ಮಣಿಪಾಲಕ್ಕೆ ತನ್ನದೇ ಆದ ಮಾನ್ಯತೆ ಇದೆ. ಮೂವತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಯುವ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾದಕದ್ರವ್ಯ,ಜಾಲ,ಜುಗಾರಿ ಅಡ್ಡೆಗಳು ನಾಯಿಕೊಡೆಗಳಂತೆ ಅಲ್ಲಲ್ಲಿ ತೆಲೆ ಎತ್ತುತ್ತಿವೆ. ಹಳೆಯ ಇಸ್ಟೀಟು ಆಟವನ್ನೇ ಆಧುನಿಕ ರೂಪದಲ್ಲಿ ವಿದ್ಯಾರ್ಥಿಗಳ ಮುಂದಿಟ್ಟು ಸಾವಿರಾರು ರೂಪಾಯಿ ಪ್ರವೇಶ ಶುಲ್ಕ ಪಡೆದು ಇಲ್ಲಿ ಮಕ್ಕಳನ್ನು ಜೂಜು ಆಡುವಂತೆ ಪ್ರೇರೇಪಿಸಲಾಗುತ್ತಿದೆ. ಒಮ್ಮೆ ಈ ಆಟದ ಚಟಕ್ಕೆ ಬಿದ್ದರೆ ಮತ್ತೆ ವಿದ್ಯಾರ್ಥಿಗಳು ಇದರಿಂದ ಹೊರಬರುವುದು ಸಾಧ್ಯವಿಲ್ಲ. ಅಕ್ರಮಗಳ ಕೇಂದ್ರ ಸ್ಥಾನವಾಗಿರುವ ಇಂಥ ಹಲವಾರು ಅಡ್ಡೆಗಳು ಕಾರ್ಯಚರಿಸುತ್ತಿದ್ದರು ಪಕ್ಕದಲ್ಲೇ ಪೊಲೀಸ್ ಠಾಣೆ ಇದ್ದರೂ ಪೊಲೀಸರು ಸುಮನಿರುವುದು ಆಶ್ಚರ್ಯ, ಇದರ ಹಿಂದೆ ರಾಜಕೀಯ ಶಕ್ತಿಗಳ ಒತ್ತಡವಿರುವ ಸಾಧ್ಯತೆಯೂ ಬಲವಾಗಿದೆ. ಇದಲ್ಲದೆ ಸ್ಥಳೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾದಕ ವಸ್ತುಗಳ ಮಾರಾಟ ಜಾಲವೂ ಕಾರ್ಯನಿರ್ವಹಿಸುತ್ತಿದೆ. ಈ ಜೂಜು ಮತ್ತು ಡ್ರಗ್ಸ್ ಜಾಲಕ್ಕೆ ಸಿಲುಕಿ ದುಡ್ಡು ಹೊಂದಿಸಲು ಯುವಕರು ತಪ್ಪುದಾರಿ ತುಳಿಯುತ್ತಿರುವ ಘಟನೆಗಳೂ ಕೂಡ ವ್ಯಾಪಕವಾಗಿ ನಡೆಯುತ್ತಿದೆ. ಈ ವಿದ್ಯಾನಗರಿಯಿಂದ ಪದವಿ ಪಡೆದು ಮಕ್ಕಳು ತಮ್ಮ ಬದುಕಿಗೆ ಆಸರೆಯಾಗಬಲ್ಲ ಜವಾಬ್ದಾರಿಯುತ ಪ್ರಜೆಗಳಾಗಿ ಹಿಂದಿರುಗಬಹುದು ಎಂಬ ನಿರೀಕ್ಷೆ ಹೊತ್ತು ಮಕ್ಕಳ ಪೋಷಕರಿಗೆ ತಮ್ಮ ಮಕ್ಕಳು ಮಣಿಪಾಲದಲ್ಲಿ ಜೂಜು,ಡ್ರಗ್ಸ್ ಮೊದಲಾದ ವಿಷವ್ಯೂಹದೊಳಗೆ ಸಿಲುಕಿರುತ್ತಾರೆ ಎನ್ನುವ ಊಹೆಯೂ ಇರುವುದಿಲ್ಲ.
ಯುವ ಸಮುದಾಯದ ಬಗ್ಗೆ ಕಾಳಜಿ ತೋರಬೇಕಿರುವ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಕೈ ಕಟ್ಟಿ ಕುಳಿತಿರುವುದನ್ನು ನಗರ ಬಿಜೆಪಿ ಯುವ ಮೋರ್ಚಾ ಉಗ್ರವಾಗಿ ಖಂಡಿಸುತ್ತದೆ. ಮುಂದಿನ ಒಂದುವಾರದೊಳಗೆ ಇಂಥ ಜೂಜು ಕೇಂದ್ರಗಳನ್ನು ಪತ್ತೆ ಹಚ್ಚಿ ಅವುಗಳನ್ನು ಮುಚ್ಚಿ ಅದರ ಹಿಂದಿರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳತಕ್ಕದ್ದು. ತಪ್ಪಿದರೆ ನಗರ ಯುವ ಮೋರ್ಚಾ ವತಿಯಿಂದ ಅಂತಹ ಅಡ್ಡೆಗಳ ಮುಂಬಾಗದಲ್ಲೇ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿರುತ್ತಾರೆ.