ಮತಾಂಧ ಶಕ್ತಿಗಳ ವಿರುದ್ಧ ನಿರ್ಣಾಯಕ ಹೋರಾಟ ಸಂಸದ ನಳಿನ್ಕುಮಾರ್ ಕಟೀಲ್
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲೆಯ ಜನತೆ ಪೋಲೀಸ್ ವ್ಯವಸ್ಥೆಯಲ್ಲಿ ಸಂಪೂರ್ಣ ವಿಶ್ವಾಸ ಕಳಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ . ಅಮಾನುಷ ಕೃತ್ಯ ನಡೆಸುತ್ತಿರುವ ಮತಾಂಧ ಶಕ್ತಿಗಳು ಮತ್ತು ದುಷ್ಕರ್ಮಿಗಳಿಗೆ ಪ್ರಚೋದನೆ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರ್ಣಾಯಕ ಹೋರಾಟ ನಡೆಸುವುದು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳಿಗೆ ಅನಿವಾರ್ಯವಾಗಲಿದೆ ಎಂದು ಸಂಸದ ನಳಿನ್ಕುಮಾರ್ ಕಟೀಲ್ ತಿಳಿಸಿದ್ದಾರೆ.
ಬಿ.ಸಿ.ರೋಡ್ನಲ್ಲಿ ಸೆಕ್ಷನ್ ಇದ್ದರೂ ಹಿಂದೂಗಳಿಗೆ ಆದ ಅನ್ಯಾಯದ ವಿರುದ್ಧ ಆಕ್ರೋಶಿತ ಜನರ ಶಕ್ತಿ ಪ್ರದರ್ಶನವಾಗಿದೆ. ಇದರಲ್ಲಿ ಭಾಗವಹಿಸಿದವರ ವಿರುದ್ಧ ಪ್ರಕರಣ ದಾಖಲಿಸುವ ಪೋಲೀಸರಿಗೆ ಆರ್ಎಸ್ಎಸ್ ಕಾರ್ಯಕರ್ತ ಶರತ್ ಹಂತಕರನ್ನು ಪತ್ತೆ ಹಚ್ಚಲು ಇದುವರೆಗೆ ಸಾಧ್ಯವಾಗಿಲ್ಲ. ಶರತ್ ಅಂತಿಮ ಯಾತ್ರೆಗೂ ಕಲ್ಲು ತೂರಾಟ ನಡೆಸುವ ಹೀನ ಕೃತ್ಯ ನಡೆದಿದೆ. ಶನಿವಾರ ರಾತ್ರಿ ಕುತ್ತಾರುವಿನಲ್ಲಿ ಚಿರಂಜೀವಿ ಎನ್ನುವ ಯುವಕನ ಮೇಲೆ ತಲವಾರು ಹಲ್ಲೆ ನಡೆದಿದೆ. ಹಿಂದೂಗಳ ಸಹನೆಗೂ ಮಿತಿ ಇದೆ. ತಕ್ಷಣ ಆರೋಪಿ ಗಳನ್ನು ಬಂಧಿಸಿ ಮತ್ತು ಶರತ್ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಸಂಸದರು ಒತ್ತಾಯಿಸಿದ್ದಾರೆ.
ಎನ್ಐಎ ತನಿಖೆಗೆ ಕೋರಿಕೆ :
ಕರಾವಳಿಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ವಿನಂತಿಸಲಾಗಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಮಾನುಷ ಘಟನೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ . ಜಿಲ್ಲೆಗೆ ಆಗಮಿಸಿ ಕಾಂಗ್ರೆಸ್ ಸಮಾವೇಶ ನಡೆಸುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಇಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಸಭೆ ನಡೆಸುವ ಕನಿಷ್ಠ ಜ್ಞಾನವೂ ಇರಲಿಲ್ಲ. ಕೆಪಿಸಿಸಿ ಅಧ್ಯಕ್ಷರು, ಕಾಂಗ್ರೆಸ್ ಸಚಿವರು ಬಿಜೆಪಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದೇ ಅಶಾಂತಿ ಮುಂದುವರಿಯಲು ಕಾರಣವಾಗಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶರತ್ ಮನೆಗೆ ಸಂಸದ ನಳಿನ್ ಭೇಟಿ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶರತ್ ಅವರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಶನಿವಾರ ರಾತ್ರಿ ಭೇಟಿ ಮನೆಮಂದಿಗೆ ಸಾಂತ್ವನ ಹೇಳಿದರು. ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ , ಬಿಜೆಪಿ ಪ್ರಮುಖರಾದ ಬದರೀನಾಥ ಕಾಮತ್ ಉಪಸ್ಥಿತರಿದ್ದರು.
ಕುತ್ತಾರುವಿನಲ್ಲಿ ಮಾರಣಾಂತಿಕ ಹಲ್ಲೆಗೀಡಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರು ಚಿರಂಜೀವಿಯನ್ನು ಸಂಸದ ನಳಿನ್ ಕುಮಾರ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.