ಮಧ್ಯ ಪ್ರದೇಶದಲ್ಲಿ ರೈತರ ಗೋಲಿಬಾರ್ ; ಉಡುಪಿ ಯುವ ಕಾಂಗ್ರೆಸಿನಿಂದ ರೈಲ್ ರೋಕೊ

Spread the love

ಮಧ್ಯ ಪ್ರದೇಶದಲ್ಲಿ ರೈತರ ಗೋಲಿಬಾರ್ ; ಉಡುಪಿ ಯುವ ಕಾಂಗ್ರೆಸಿನಿಂದ ರೈಲ್ ರೋಕೊ

ಉಡುಪಿ: ಮಧ್ಯಪ್ರದೇಶದಲ್ಲಿ ಪರಿಹಾರಕ್ಕಾಗಿ ಆಗ್ರಹಿಸಿದ ರೈತರ ಗೋಲಿಬಾರ್ ಹಾಗೂ ಸಂತ್ರಸ್ತ ರೈತರನ್ನು ಭೇಟಿ ಮಾಡಲು ತೆರಳಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಬಂಧಿಸಿದ್ದನ್ನು ಖಂಡಿಸಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ರೈಲ್ ರೋಕೊವನ್ನು ನಡೆಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಅವರು ದೇಶದ ಜನತೆಗೆ ಅಚ್ಛೆ ದಿನ್ ನೀಡುವುದಾಗಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ ದೇಶದ ರೈತರ ಸಂಕಷ್ಟಕ್ಕೆ ಕಿವಿಗೊಡುವುದನ್ನು ಮರೆತಿದೆ.ಅಬ್ ಕಿ ಬಾರ್ ಮೋದಿ ಸರಕಾರ್ ಎಂಬ ಘೋಷಣೆ ಮಧ್ಯಪ್ರದೇಶದಲ್ಲಿ ಅಬ್ ಬಾರ್ ಗೋಲಿಬಾರ್ ಸರಕಾರ್ ಆಗಿದೆ. ಪ್ರತಿಯೊಂದು ವಿಷಯಕ್ಕೆ ಸದಾ ಮೋದಿ ಟ್ವೀಟ್ ಮಾಡುವವರು ಮಧ್ಯಪ್ರದೇಶದ ರೈತರ ಗೋಲಿಬಾರ್‍ನಲ್ಲಿ ಸತ್ತವರ ಕುರಿತು ಟ್ವೀಟ್ ಮಾಡುವುದನ್ನು ಮರೆತಿದ್ದಾರೆ ಬದಲಾಗಿ ವಿದೇಶದಲ್ಲಿ ತಮ್ಮ ಪ್ರವಾಸದಲ್ಲಿ ನಿರತರಾಗಿರುವುದು ಖಂಡನೀಯ. ಅಲ್ಲದೆ ರೈತರು ಮಧ್ಯಪ್ರದೇಶದಲ್ಲಿ ಸಾವನಪ್ಪಿದರೆ ಕೇಂದ್ರದ ಸಚಿವರೊಬ್ಬರು ಯೋಗದಲ್ಲಿ ನಿರತರಾಗಿರುವುದು ಅವರ ರೈತಪರ ಕಾಳಜಿಯನ್ನು ತೋರಿಸುತ್ತದೆ. ಯುಪಿಎ ಸರಕಾರವಿದ್ದಾಗ ರೈತರಿಗೆ ಯಾವುದೇ ವಿಷಯದಲ್ಲೂ ತೆರಿಗೆ ಕಟ್ಟಲು ಇರಲಿಲ್ಲ ಆದರೆ ಬಿಜೆಪಿ ಸರಕಾರ ಜಿಎಸ್‍ಟಿ ತಂದು ರೈತರು ಖರೀದಿಸುವ ಗೊಬ್ಬರಕ್ಕೂ 15% ತೆರಿಗೆ ವಿಧಿಸಿದೆ. ಇಂತಹ ಜನವಿರೋಧಿ ಸರಕಾರವನ್ನು ಕಿತ್ತೊಗೆಯುವ ತನಕ ಯುವ ಕಾಂಗ್ರಸ್ ಪ್ರತಿಭಟನೆ ನಡೆಸಲಿದೆ ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕಿಣಿ ಮಾತನಾಡಿ ಮಧ್ಯಪ್ರದೇಶದ ಸರಕಾರ 6 ಮಂದಿ ಅನ್ನದಾತರನ್ನು ಗೋಲಿಬಾರ್‍ನಲ್ಲಿ ಕೊಂದಿದೆ ಇದು ಖಂಡನೀಯ. ಬಿಜೆಪಿ ಆಡಳಿತ ಸರಕಾರಕ್ಕೆ ಇದು ಹೊಸದೇನಲ್ಲ. ಈ ಮೊದಲು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಯಡ್ಯೂರಪ್ಪ ನೇತ್ರತ್ವದ ಸರಕಾರ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಹಾವೇರಿಯಲ್ಲಿ ರೈತರನ್ನು ಗೋಲಿಬಾರ್ ಮಾಡಿ ಸಾಯಿಸಿದ್ದು ಕೂಡ ಬಿಜೆಪಿ ಸರಕಾರವಾಗಿದೆ. ಪ್ರದಾನಿ ನರೇಂದ್ರ ಮೋದಿ ಭಾರತದ ಪ್ರಧಾನಿ ಎನ್ನುವುದು ಮರೆಯದೆ ಕೇವಲ ವಿದೇಶ ಪ್ರವಾಸದಲ್ಲಿ ಸಮಯ ಕಳೆಯುವುದನ್ನು ಬಿಟ್ಟು ರೈತರ ಬಗ್ಗೆ ಕಾಳಜಿ ವಹಿಸಲಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾದ ರೀತಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟಿಸಲಿದೆ ಎಂದರು.

ಪ್ರತಿಭಟನಾಕಾರರು ಮಂಗಳೂರು – ಮಡಗಾಂವ್ ರೈಲನ್ನು ತಡೆಯಲು ಯತ್ನಿಸಿದಾಗ ಬೃಹತ್ ಸಂಖ್ಯೆಯಲ್ಲಿ ಸೇರಿದ ಪೋಲಿಸರು ತಡೆದು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.

ಪ್ರತಿಭಟನೆಯಲ್ಲಿ ಉಡುಪಿ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಯುವ ಕಾಂಗ್ರೆಸ್ ನಾಯಕರಾದ ಅಬ್ದುಲ್ ಅಝೀಜ್, ಪ್ರಭಾಕರ ಅಚಾರ್ಯ, ಯತೀಶ್ ಕರ್ಕೇರಾ, ಪ್ರಖ್ಯಾತ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love