ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಮಹಿಳೆಯರ ಸೆರೆ: ಸೊತ್ತು ವಶ
ಮಂಗಳೂರು : ಮಂಗಳೂರು ನಗರ ವ್ಯಾಪ್ತಿಯಲ್ಲಿ ಒಂಟಿ ಮನೆಗಳನ್ನು ಹಾಡು ಹಗಲೇ ಮುರಿದು ಕಳ್ಳತನ ನಡೆಸುತ್ತಿದ್ದ ಇಬ್ಬರು ಮಹಿಳೆಯರನ್ನು ಹಾಗೂ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಕಾವೂರು ನಿವಾಸಿ ಪಾರ್ವತಿ (29) ಮತ್ತು ಜಯಲಕ್ಷ್ಮೀ (27) ಎಂದು ಗುರುತಿಸಲಾಗಿದೆ.
ಮಂಗಳೂರು ನಗರದಲ್ಲಿ ಇತ್ತೀಚೆಗೆ ಹಾಡು ಹಗಲೇ ಒಂಟಿ ಮನೆಗಳ ಬಾಗಿಲಿನ ಬೀಗವನ್ನು ಒಡೆದು ಬೆಲೆಬಾಳುವ ಸೊತ್ತುಗಳನ್ನು ದೋಚುತ್ತಿದ್ದ ಕಳ್ಳರ ಜಾಲವನ್ನು ಪತ್ತೆ ಹಚ್ಚುವ ಸಲುವಾಗಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಪತ್ತೆ ಕಾರ್ಯಾಚರಣೆಯಲ್ಲಿ ಈ ಹಿಂದೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಬುಧವಾರ ಪೋಲಿಸರು ಯಶಸ್ವಿಯಾಗಿರುತ್ತಾರೆ. ಆರೋಪಿಗಳು ಮಂಗಳೂರು ನಗರದಲ್ಲಿ ಗುಜರಿ ಹೆಕ್ಕುವ ನೆಪದಲ್ಲಿ ಒಂಟಿ ಮನೆಗಳನ್ನು ಗುರುತಿಸಿ ಹಗಲು ಹೊತ್ತಿನಲ್ಲಿ ಮನೆಯ ಬಾಗಿಲಿನ ಬೀಗವನ್ನು ಮುರಿದು ಬೆಲೆಬಾಳುವ ಸೊತ್ತುಗಳನ್ನು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದರು. ಆರೋಪಿಗಳು ಗುಂಪಾಗಿ ಗುಜರಿ ಹೆಕ್ಕುವ ನೆಪದಲ್ಲಿ ಸುತ್ತಾಡಿಕೊಂಡು ನಂತರ ವಾಸ್ತವ್ಯವಿಲ್ಲದ ಮನೆಗಳನ್ನು ಗುರುತಿಸಿ ಈ ಕಳವು ಕೃತ್ಯವನ್ನು ನಡೆಸುತ್ತಿದ್ದರು. ಆರೋಪಿಗಳು ಕಳವುಗೈದ ಚಿನ್ನಾಭರಣಗಳನ್ನು ಹಣಕಾಸು ಸಂಸ್ಥೆಗಳಲ್ಲಿ ಅಡವು ಇರಿಸಿ ಹಣವನ್ನು ಪಡೆದುಕೊಂಡು ಶೋಕಿ ಜೀವನ ನಡೆಸುತ್ತಿದ್ದರು. ಆರೋಪಿಗಳಿಂದ ಒಟ್ಟು 91.230 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನಾಭರಣದ ಒಟ್ಟು ಮೌಲ್ಯ ರೂ. 2,46,321/- ಆಗಿರುತ್ತದೆ. ಆರೋಪಿಗಳು ಚಿನ್ನಾಭರಣಗಳನ್ನು ಕಳವುಗೈದ ಮನೆಗಳ ಮಾಹಿತಿ ದೊರಕದೇ ಇದ್ದು, ಇನ್ನಷ್ಟೆ ಪತ್ತೆಹಚ್ಚಬೇಕಾಗಿರುತ್ತದೆ.
ಆರೋಪಿತಳ ಪೈಕಿ ಪಾರ್ವತಿ ಹಾಗೂ ಆಕೆಯ ಗಂಡನ ವಿರುದ್ಧ ಈ ಹಿಂದೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಚಿನ್ನಾಭರಣಗಳನ್ನು ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.
ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.