ಮರಳು ಅಭಾವ ನೀಗಿಸಲು ದ.ಕ. ಜಿಲ್ಲಾಡಳಿತಕ್ಕೆ ಸೂಚನೆ: ಸ್ಪೀಕರ್ ಯು.ಟಿ.ಖಾದರ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರವಾಗಿರುವ ಮರಳು ಅಭಾವ ನೀಗಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖೆಗಳ ಸಮನ್ವಯ ಸಭೆ ನಡೆಸಿ, ಜನರಿಗೆ ಮತ್ತೆ ಕಡಿಮೆ ದರದಲ್ಲಿ ಮರಳು ದೊರೆಯುವಂತೆ ಮಾಡಬೇಕು. ಈ ಕುರಿತು ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ನಾನು ಸಚಿವನಾಗಿದ್ದಾಗ ‘ಸ್ಯಾಂಡ್ ಬಜಾರ್’ ಎಂಬ ಮೊಬೈಲ್ ಆ್ಯಪ್ ರೂಪಿಸಿ ಅದರ ಮೂಲಕ ನಿಗದಿತ ಸಮಯದಲ್ಲಿ ನಿಗದಿತ ಬೆಲೆಗೆ ಜನರಿಗೆ ಮರಳು ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಸರ್ಕಾರ ಬದಲಾದ ಮೇಲೆ ಆ ವ್ಯವಸ್ಥೆಯನ್ನೇ ನಿಲ್ಲಿಸಲಾಗಿದೆ. ಈಗ ಮರಳಿ ಸ್ಯಾಂಡ್ ಬಜಾರ್ ಆಪ್ ವ್ಯವಸ್ಥೆ ಜಾರಿಯಾಗಬೇಕು ಎಂದರು.
ಮರಳು ವಿಚಾರದಲ್ಲಿ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ಖಾದರ್, ಅಧಿಕಾರಿಗಳಿಗೆ ಅಧಿಕಾರ, ಕಚೇರಿ ನೀಡಿದ್ದು ಜನರ ಸಮಸ್ಯೆ ನೀಗಿಸಲಿಕ್ಕಾಗಿಯೇ ಹೊರತು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕಲ್ಲ. ಗಣಿ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ನಡುವೆ ಸಮನ್ವಯತೆಯನ್ನು ಜಿಲ್ಲಾಡಳಿತ ಮರು ಸ್ಥಾಪಿಸಿ ಜನರ ಸಮಸ್ಯೆ ನೀಗಿಸಲು ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಆಸ್ಕರ್ ಫರ್ನಾಂಡಿಸ್ ಕೇಂದ್ರ ಸಚಿವರಾಗಿದ್ದ ಕಾಲದಲ್ಲಿ ತೀವ್ರ ಮರಳು ಅಭಾವ ಎದುರಾದಾಗ ಒಂದೇ ದಿನದಲ್ಲಿ ಸಿಆರ್‌ಝಡ್ ವ್ಯಾಪ್ತಿಯ ಮರಳು ದಿಬ್ಬ ತೆರವುಗೊಳಿಸುವ ಆದೇಶ ಜಾರಿ ಮಾಡಿ ಜನರಿಗೆ ಮರಳು ನೀಡುವ ಕಾರ್ಯ ಮಾಡಲಾಗಿತ್ತು. ಈಗ ಮತ್ತೆ ಮರಳು ಅಭಾವ ಸೃಷ್ಟಿ ಆಗಿರುವಾಗ ಕೇಂದ್ರ ಸರ್ಕಾರದಿಂದ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ಆದೇಶವನ್ನು ಬಿಜೆಪಿಯವರಿಂದ ಯಾಕೆ ಮಾಡಲಾಗುತ್ತಿಲ್ಲ ಎಂದು ಸ್ಪೀಕರ್ ಪ್ರಶ್ನಿಸಿದರು.
ಮುಂದಿನ ರಾಜ್ಯ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹಲವು ಬೇಡಿಕೆಗಳನ್ನು ಈಡೇರಿಸುವ ನಿರೀಕ್ಷೆಯಿದೆ. ಜಿಲ್ಲೆಗೆ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಒಪಿಡಿ ಸೆಂಟರ್ ಸೇರಿದಂತೆ ಹಲವು ಬೇಡಿಕೆಗಳು ಘೋಷಣೆ ಯಾಗುವ ಸಾಧ್ಯತೆಯಿದೆ. ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಆಗಬೇಕೆಂಬ ಬೇಡಿಕೆ ಇದೆ. ಆದರೆ ರಾಜ್ಯದ 9 ಜಿಲ್ಲೆ ಗಳಲ್ಲಿ ಸುಸಜ್ಜಿತವಾದ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಕೊರತೆ ಇರುವಾಗ ಆ ಜಿಲ್ಲೆಗಳಿಗೆ ಸಾಮಾನ್ಯವಾಗಿ ಮೊದಲ ಆದ್ಯತೆ ನೀಡಲಾಗುತ್ತದೆ. ದ.ಕ. ಜಿಲ್ಲೆಯ ಬೇಡಿಕೆಯೂ ಈಡೇರಬೇಕಿದೆ ಎಂದು ಯು.ಟಿ.ಖಾದರ್ ಹೇಳಿದರು.