ಮರಳು ಸಮಸ್ಯೆ ಇತ್ಯರ್ಥಕ್ಕೆ ರಾಜ್ಯ ಸರಕಾರ ಮದ್ಯಪ್ರವೇಶಿಸಲಿ- ಯಶ್ ಪಾಲ್ ಸುವರ್ಣ

Spread the love

ಮರಳು ಸಮಸ್ಯೆ ಇತ್ಯರ್ಥಕ್ಕೆ ರಾಜ್ಯ ಸರಕಾರ ಮದ್ಯಪ್ರವೇಶಿಸಲಿ- ಯಶ್ ಪಾಲ್ ಸುವರ್ಣ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಮರಳು ಸಮಸ್ಯೆಗೆ ಜಿಲ್ಲಾಡಳಿತದ ಹಠಮಾರಿ ಧೊರಣೆಯೇ ಕಾರಣವಾಗಿದ್ದು, ರಾಜ್ಯ ಸರಕಾರ ಕೂಡಲೆ ಈ ವಿಚಾರದಲ್ಲಿ ಮಧ್ಯ ಪ್ರವೇಶ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಅವರು ಆಗ್ರಹಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಈ ಸಮಸ್ಯೆಯನ್ನು ಜಿಲ್ಲಾಡಳಿತ ಉದ್ಧೇಶಪೂರ್ವಕವಾಗಿ ಜೀವಂತವಾಗಿಟ್ಟಿದ್ದು, ಇದರ ಇತ್ಯರ್ಥಕ್ಕೆ ಯಾವುದೇ ಕಾನೂನಾತ್ಮಕ ಉಪಾಯವನ್ನೂ ಕಂಡುಕೊಂಡಿಲ್ಲ. ಸರಕಾರ ಮತ್ತು ಜಿಲ್ಲಾಡಳಿತದ ಬೇಜವಾಬ್ದಾರಿತನದಿಂದಾಗಿ ಈ ಮೂರು ವರ್ಷಗಳಲ್ಲಿ ನಿರ್ಮಾಣಕಾರ್ಯಗಳಿಗೆ ಮರಳು ಸಿಗದೆ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿದೆ. ಬಡಜನರ ಮನೆಗಳು ಅರ್ದಕ್ಕೆ ನಿಂತಿವೆ, ಮರಳು ಕಾರ್ಮಿಕರು, ಕಟ್ಟಡ ಕಾರ್ಮಿಕರು,ಬಾಡಿಗೆ ವಾಹನಚಾಲಕರು, ಕೂಲಿಯಾಳುಗಳು ಗುತ್ತಿಗೆದಾರರು ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇದೆಲ್ಲವನ್ನೂ ಜಿಲ್ಲಾಡಳಿತ ಕಣ್ಣಿದ್ದು ಕುರುಡರ ಹಾಗೆ ನೋಡುತ್ತಿದ್ದು, ಜನಸಾಮಾನ್ಯರ ಹೋರಾಟಕ್ಕೂ ಕವಡೆಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಈ ಸಂವೇದನಾಶೂನ್ಯ ಅಧಿಕಾರಿ ವರ್ಗಕ್ಕೆ ಕಳೆದ ಬಾರಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನೀಡಿರುವ ಸೂಚನೆಯೂ ನಾಟಿಲ್ಲ. ಪ್ರಗತಿಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿಯವರು ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಎಚ್ಚರಿಕೆ ನೀಡಿದ್ದರೂ ಇನ್ನೂ ಜಿಲ್ಲಾಧಿಕಾರಿಯವರು ಕಾರ್ಯಪ್ರವೃತ್ತರಾಗಿಲ್ಲ. ಅಧಿಕಾರಿಗಳನಿಲುವಿನ ಹಿಂದೆ ಮಾಜಿ ಸಚಿವರೊಬ್ಬರ ಕೈವಾಡವಿರುವ ಶಂಕೆ ಇದೆ. ತನ್ನ ಅವಧಿಯಲ್ಲಿ ಬಗೆಹರಿಯದ ಸಮಸ್ಯೆ ನೂತನ ಶಾಸಕರ ಅವಧಿಯಲ್ಲೂ ಬಗೆಹರಿಯಬಾರದು ಎಂಬ ರಾಜಕೀಯ ಸ್ವಾರ್ಥ ಇದರ ಹಿಂದೆ ಇರುವಂತಿದೆ. ಒಂದು ವೇಳೆ ಬಡಜನರ ಅನ್ನದ ಬಟ್ಟಲಾಗಿರುವ ಮರಳಿನ ವಿಚಾರದಲ್ಲಿ ರಾಜಕೀಯ ನಡೆಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕೆ ಜಿಲ್ಲೆಯ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.

ಕಳದ ಒಂದು ವಾರದಿಂದ ಜಿಲ್ಲೆಯಲ್ಲಿ ಮರಳು ಸಮಸ್ಯೆಯ ವಿರುದ್ಧ ವಿವಿಧ ರೂಪದಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿದೆ. ಯಾವುದೇ ರಾಜಕೀಯ ಲಾಭಿಗಳಿಗೆ ಮಣಿಯದೆ, ಬಡಜನರಿಗೆ ಕಡಿಮೆ ದರದಲ್ಲಿ ಮರಳು ಲಭ್ಯವಾಗುವ ರೀತಿಯಲ್ಲಿ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳಿಗೆ ಈ ವಿಚಾರವಾಗಿ ನ್ಯಾಯಾಂಗ ನಿಂದನೆ ಅಥವಾ ಕಾನೂನಾತ್ಮಕ ತೊಡಕುಗಳು ಎದುರಾಗುವುದಿದ್ದರೆ, ರಾಜ್ಯ ಸರಕಾರ ಕೂಡಲೆ ಮದ್ಯ ಪ್ರವೇಶ ನಡೆಸಿ ಈ ಬಗ್ಗೆ ಸೂಕ್ತ ಕಾನೂನು ರೂಪಿಸಬೇಕು. ಡಾ.ವಿ.ಎಸ್ ಆಚಾರ್ಯ ಅವರ ಅವಧಿಯಲ್ಲಿ ನಡೆದಂತೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಸಹಕಾರದೊಂದಿಗೆ ಈ ವಿವಾದವನ್ನು ಗೊಂದಲವಿಲ್ಲದೆ ಬಗೆಹರಿಸಬಹುದು. ಆದರೆ ಕೆಲ ಸ್ಥಾಪಿತ ಹಿತಾಸಕ್ತಿಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ. ಅಧಿಕಾರಿಗಳು ಕೂಡ ಇವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಕಾರಣ ಸಮಸ್ಯೆ ದಿನದಿಂದ ದಿನಕ್ಕೆ ಜಟಿಲವಾಗುತ್ತಿದೆ. ಒಂದು ವಾರದೊಳಗೆ ಈ ಸಮಸ್ಯೆಗೆ ಜಿಲ್ಲಾಡಳಿತ ತಾರ್ಕಿಕ ಅಂತ್ಯವನ್ನು ಕಂಡುಕೊಳ್ಳದೇ ಹೋದಲ್ಲಿ ಜಿಲ್ಲಾಡಳಿತದ ವಿರುದ್ಧ ವ್ಯಾಪಕ ಜನಾಂದೋಲನ ನಡೆಸಲಾಗುವುದು ಎಂದು ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.


Spread the love