ಮರಳು ಸಮಸ್ಯೆ: ಜಿಲ್ಲಾಧಿಕಾರಿ ವರ್ಗಾವಣೆ ನನ್ನ ಕೈಯ್ಯಲಿಲ್ಲ; ಉಸ್ತುವಾರಿ ಸಚಿವೆ ಡಾ|ಜಯಮಾಲ
ಕುಂದಾಪುರ: ಜಿಲ್ಲಾಧಿಕಾರಿಯವರ ವರ್ಗಾವಣೆ ಮಾಡುವುದು ನನ್ನ ಕೈಯ್ಯಲಿಲ್ಲ ಅಲ್ಲದೆ ಅವರ ಬಗ್ಗೆ ನಾನೇನು ಮೃಧು ಧೋರಣೆ ತೋರುತ್ತಿಲ್ಲ. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ವರ್ಗಾವಣೆ ಮಾಡುವಂತೆ ಮೂರು ತಿಂಗಳ ಹಿಂದೆಯೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಜಿಲ್ಲಾಧಿಕಾರಿಯವರನ್ನು ವರ್ಗಾವಣೆಗೊಳಿಸುವ ನಿರ್ಧಾರ ಕೈಗೊಳ್ಳುವುದು ನಾನಲ್ಲ ಬದಲಾಗಿ ಮುಖ್ಯಮಂತ್ರಿಗಳು. ನಾನು ನನ್ನ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದೇನೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ|ಜಯಮಾಲಾ ಹೇಳಿದ್ದಾರೆ.
ಅವರು ಭಾನುವಾರ ಮರಳು ಪೊರೈಸಲು ಆಗ್ರಹಿಸಿ ಟಿಪ್ಪರ್ ಮಾಲಿಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ಮಾಡಿ ಮಾತನಾಡಿದರು.
ಮುಖ್ಯಮಂತ್ರಿಗಳೇ ಖುದ್ದಾಗಿ ಮರಳುಗಾರಿಕೆಗೆ ಅವಕಾಶ ಮಾಡಿಕೊಡಿ ಎಂದು ಜಿಲ್ಲಾಧಿಕಾರಿಯವರಿಗೆ ಹೇಳಿದ್ದಾರೆ. ನಾನೂ ಕೂಡ ಉಡುಪಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಹೇಳಿದ್ದೇನೆ. ಏನೇನು ತೊಡಕುಗಳಿವೆ ಅದನ್ನು ಸರಿಪಡಿಸಿಕೊಂಡು ಅಕ್ಟೋಬರ್ 16 ನೇ ತಾರೀಕಿನ ಬಳಿಕ ಮರಳು ಪೂರೈಕೆಗೆ ಅನುಮತಿ ನೀಡುತ್ತೇವೆ ಎಂದು ಜಿಲ್ಲಾಧಿಕಾರಿಯವರು ಹೇಳಿದ್ದರು. ಇನ್ನೂ ಕೂಡ ಮರಳು ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಮತ್ತೊಮ್ಮೆ ಜಿಲ್ಲಾಧಿಕಾರಿಯವರಲ್ಲಿ ಮಾತನಾಡುವೆ. ಅದಾಗ್ಯೂ ಪರಿಹಾರ ಸಿಗದೇ ಇದ್ದಲ್ಲಿ ಮುಂದೆ ನಾವೇ ನೋಡಿಕೊಳ್ಳೋಣ ಎಂದ ಸಚಿವೆ ಜಯಮಾಲಾ ಮುಷ್ಕರವನ್ನು ಹಿಂಪಡೆಯಲು ಮನವಿ ಮಾಡಿಕೊಂಡರು.
ಮರಳು ವಿಚಾರದಲ್ಲಿ ಒಂದಿಷ್ಟು ಕಾನೂನು ತೊಡಕುಗಳಿವೆ. ನನಗೆ ಅದರ ಬಗ್ಗೆ ಸರಿಯಾಗಿ ತಿಳಿದಿಲ್ಲ. ಮುಂದೆ ಸಂಬಂಧಪಟ್ಟವರಿಂದ ತಿಳಿದುಕೊಳ್ಳುತ್ತೇನೆ. ಜನಸಾಮಾನ್ಯರ ಸಂಕಷ್ಟ ಅರಿತು ಇದನ್ನೆಲ್ಲಾ ಮೀರಿ ಕೆಲಸ ಮಾಡಬಹುದು. ಮರಳು ಸಮಸ್ಯೆ ವಿಚಾರದಲ್ಲಿ ಜನಪ್ರತಿನಿಧಿಗಳನ್ನೇ ಟಾರ್ಗೆಟ್ ಮಾಡಬೇಡಿ ಎಂದು ಹೇಳಿದರು.
ಮುಷ್ಕರ ಹಿಂಪಡೆಯಲು ಸಾಧ್ಯವಿಲ್ಲ. ನಾವು ತಾಳ್ಮೆಯನ್ನು ಕಳೆದುಕೊಂಡಿದ್ದೇವೆ. ಮರಳು ಸಮಸ್ಯೆಯಿಂದಾಗಿ ಜನಸಾಮಾನ್ಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ನಾಲ್ಕು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ ಸಮೀಪ ಅಲ್ಲಲ್ಲಿ ಟಿಪ್ಪರ್ ಗಳನ್ನು ನಿಲ್ಲಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಧಿಕಾರಿಯವರು ಸೌಜನ್ಯಕ್ಕಾದರೂ ನಮ್ಮ ಬಳಿ ಬಂದು ನಮ್ಮ ಸಮಸ್ಯೆಗಳನ್ನು ಆಲಿಸಿಲ್ಲ. ಹೀಗಾಗಿ ಸೋಮವಾರ ನಾವೇ ಟಿಪ್ಪರ್ಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕೊಂಡೊಯ್ದು ಅಲ್ಲೇ ಪ್ರತಿಭಟಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.