ಮರಳುಗಾರಿಕೆ ಆರಂಭಿಸುವಲ್ಲಿ ವಿಳಂಬ ಮಾಡಲು ಕಾನೂನಿನ ಒತ್ತಡವಿದೆ; ಡಿಸಿ ಪ್ರಿಯಾಂಕ ಮೇರಿ

Spread the love

ಮರಳುಗಾರಿಕೆ ಆರಂಭಿಸುವಲ್ಲಿ ವಿಳಂಬ ಮಾಡಲು ಕಾನೂನಿನ ಒತ್ತಡವಿದೆ; ಡಿಸಿ ಪ್ರಿಯಾಂಕ ಮೇರಿ

ಉಡುಪಿ: ನನಗೆ ಮರಳುಗಾರಿಕೆ ಆರಂಭಿಸುವಲ್ಲಿ ವಿಳಂಬ ಮಾಡಲು ಯಾವುದೇ ರಾಜಕೀಯ ಒತ್ತಡವಿಲ್ಲ ಆದರೆ ಇರುವುದು ಕಾನೂನಿನ ಒತ್ತಡ. ಈಗಾಗಲೇ ಎನ್ಜಿಟಿಯಲ್ಲಿ ಈ ಸಂಬಂದ ದಾವೆ ನಡೆಯುತ್ತಿರುವುದರಿಂದ ಎಚ್ಚರ ವಹಿಸಬೇಕಾಗಿದೆ. ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಶುಕ್ರವಾರ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮರಳುಗಾರಿಕೆ ಸಂಬಂಧ ಈ ಹಿಂದಿನ ಜಿಲ್ಲಾಧಿಕಾರಿ ಅಫಿದವಿತ್ ಸಲ್ಲಿಸಿದ್ದಾರೆ. ಪ್ರಸ್ತುತ ಎನ್ಜಿಟಿಯಲ್ಲಿ ಪರವಾನಿಗೆ ನೀಡಿದ ಅಂಶವನ್ನೇ ಮುಖ್ಯವಾಗಿರಿಸಿ ದಾವೆ ಹೂಡಲಾಗಿದೆ.ಜಿಲ್ಲೆಯಲ್ಲಿ ಮರಳುಗಾರಿಕೆ ಪರವಾನಿಗೆ ಸಂಬಂಧ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ) ನೀಡಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಯನ್ನು ಸೂಕ್ಷ್ಮವಾಗಿ ನಿರ್ವಹಿಸಬೇಕಾದ ಅನಿವಾರ್ಯತೆ ಜಿಲ್ಲಾಡಳಿತಕ್ಕಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ತನ್ನನ್ನು ಕಳೆದ ವರ್ಷ ತಾನು 170 ಮಂದಿಗೆ ಪರವಾನಿಗೆ ನೀಡಿರುವುದು ತಪ್ಪು ಎಂದಾದಲ್ಲಿ ಈ ಬಾರಿ ಮತ್ತೆ ಅದೇ ತಪ್ಪು ಮಾಡಬೇಕೇ ಎಂದು ಪ್ರಶ್ನಿಸಿದ ಅವರು, ಉದಯ ಸುವರ್ಣ ಎರಡನೇ ಬಾರಿ 2017ರ ಅಕ್ಟೋಬರ್ನಲ್ಲಿ ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಸಾಂಪ್ರದಾಯಿಕ ಮರಳು ತೆಗೆಯುವವರಿಗೆ ಮಾತ್ರವಲ್ಲದೇ ಉದ್ಯಮಿಗಳು, ಗುತ್ತಿಗೆದಾರರು, ಬಾರ್ ಮಾಲಕರು ಸೇರಿದಂತೆ ಅನರ್ಹರಿಗೆ ಪರವಾನಿಗೆ ನೀಡಲಾಗಿದೆ ಮತ್ತು ಮರಳು ಸಾಗಾಟ ವಾಹನಗಳಿಗೆ ಜಿಪಿಎಸ್ ಅಳವಡಿಸಿಲ್ಲ. ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಅಂಶವನ್ನು ಉಲ್ಲೇಖಿಸಿದ್ದರು. ಹೀಗಿರುವಾಗ ಅದನ್ನೇ ಕೇಂದ್ರೀಕರಿಸಿ ಎಚ್ಚರಿಕೆಯಿಂದ ಪರವಾನಿಗೆ ನೀಡಬೇಕಾದ ಅನಿವಾರ್ಯತೆ ತನಗಿದೆ ಎಂದರು.

ಕೇಂದ್ರ ಸಚಿವಾಲಯದ ಮಾರ್ಗದರ್ಶಿ ಸೂಚನೆಯಡಿ ಸಾಂಪ್ರದಾಯಿಕ ಮರಳುಗಾರಿಕೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಸಾಂಪ್ರದಾಯಿಕವಾಗಿ ಮರಳು ತೆಗೆಯುವವರು ಯಾರು ಎಂಬ ಬಗ್ಗೆ ಸರಿಯಾದ ಮಾನದಂಡವಿಲ್ಲ. ಮಾರ್ಗದರ್ಶಿ 2011ರಲ್ಲಿ ಬಂದಿರುವುದರಿಂದ ಅದಕ್ಕಿಂತ ಮೊದಲು ಮರಳು ತೆಗೆಯುತ್ತಿದ್ದವರನ್ನು ಸಾಂಪ್ರದಾಯಿಕವಾಗಿ ಮರಳು ತೆಗೆಯುವವರು ಎಂದೇ ಪರಿಗಣಿಸುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ. ಅದರಂತೆ ಪರವಾನಿಗೆ ನೀಡಲಾಗುತ್ತಿದೆ. 2011ರ ಬಳಿಕ ಮರಳು ತೆಗೆಯುವವರಿಗೆ ಪರವಾನಿಗೆ ನೀಡಬೇಕೇ ಬೇಡವೇ ಎಂಬುದನ್ನು ಕೇಂದ್ರ ಸಚಿವಾಲಯದೊಂದಿಗೆ ಕೇಳಿ ನಂತರ ಮಾರ್ಗದರ್ಶನ ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಈಗಾಗಲೇ ಎನ್ಐಟಿಕೆ ತಜ್ಞರು ಸ್ವರ್ಣಾ, ಸೀತಾ ಮತ್ತು ಪಾಪನಾಶಿನಿ ನದಿಗಳಲ್ಲಿ ಬೆಥಮೆಟಿಕ್ ಸರ್ವೇ ನಡೆಸುತ್ತಿದ್ದಾರೆ. ಅ. 29ರಂದು ಸರ್ವೇ ಪೂರ್ಣಗೊಳ್ಳಲಿದೆ. ಅಲ್ಲಿ ಗುರುತಿಸಿದ ಮರಳು ದಿಬ್ಬಗಳಿಗೆ ಅನುಮೋದನೆ ಪಡೆದು ಮರಳು ತೆಗೆಯಲು ಪರವಾನಿಗೆ ನೀಡಲಾಗುತ್ತದೆ ಎಂದ ಜಿಲ್ಲಾಧಿಕಾರಿ ಪ್ರಿಯಾಂಕ, 2011ರ ಮೊದಲಿನ 68 ಮಂದಿ ಅರ್ಹ ಪರವಾನಿಗೆದಾರರ ಪಟ್ಟಿ ಗಣಿ ಇಲಾಖೆಯಲ್ಲಿದೆ. ಉಳಿದಂತೆ ತಮ್ಮಲ್ಲಿ ದಾಖಲೆಗಳಿದ್ದಲ್ಲಿ ಯಾರೂ ಅರ್ಜಿ ಸಲ್ಲಿಸಬಹುದು. 2001ರಲ್ಲಿ ಮರಳುಗಾರಿಕೆ ನಡೆಸುತ್ತಿದ್ದವರು ಇದ್ದಾರೆ ಎನ್ನುವ ಮಾಹಿತಿ ಇದೆ. ಅವರೂ ಕೂಡ ಅರ್ಜಿ ಸಲ್ಲಿಸಬಹುದು. ಗುರುವಾರದ ವರೆಗೆ ಕೇವಲ 4 ಅರ್ಜಿ ಬಂದಿದೆ. ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


Spread the love