ಮರಳುಗಾರಿಕೆ ವಿಚಾರದಲ್ಲಿ ನನಗೆ ಯಾರ ಸರ್ಟಿಫಿಕೇಟ್ ಬೇಡ – ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಉಡುಪಿ: ಜಿಲ್ಲೆಯ ಜನರಿಗೆ ಮರಳು ನೀಡುವ ವಿಚಾರದಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನನ್ನ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುತ್ತಿದ್ದೇನೆ. ಮರಳು ಪರವಾನಿಗೆ ನೀಡುವ ಕುರಿತು ಕೇಂದ್ರ , ರಾಜ್ಯ ಸರಕಾರಗಳು, ನ್ಯಾಯಾಲಯಗಳ ಆದೇಶಗಳನ್ನು ಗಮನದಲ್ಲಿಟ್ಟುಕೊಂಡು ನಾನು ಕೆಲಸ ಮಾಡುತ್ತಿದ್ದು, ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿರುವವರು ವಾಸ್ತವ ಸಂಗತಿಯನ್ನು ಅರಿತು ಮಾತನಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಜಿಲ್ಲೆಯ ಮರಳು ಸಮಸ್ಯೆಗೆ ಸಂಬಂಧಿಸಿದಂತೆ ತನ್ನ ವಿರುದ್ದ ಕೇಳಿ ಬರುತ್ತಿರುವ ಆರೋಪಗಳಿಗೆ ಉತ್ತರಿಸಲು ಹಾಗೂ ನೈಜ ಸ್ಥಿತಿಯ ಕುರಿತು ದಾಖಲೆಗಳ ಸಮೇತ ವಿವರಿಸಲು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಲವು ಸಾಮಾಜಿಕ ಜಾಲತಾಣ ಹಾಗೂ ವಿವಿಧ ಮಾಧ್ಯಮಗಳಲ್ಲಿ ವಾಸ್ತವಾಂಶಗಳನ್ನು, ಇಲ್ಲಿನ ಸಮಸ್ಯೆಗಳನ್ನು ಮರೆಮಾಜಿ ಸುಳ್ಳು ಸುದ್ದಿಗಳನ್ನು ಪ್ರಚಾರಮಾಡಲಾಗುತ್ತಿದೆ. ಜಿಲ್ಲೆಯ ಜನರಿಗೆ ಮರಳು ಸಿಗದಂತೆ ತಾನು ಹಠ ತೊಟ್ಟಿರುವುದಾಗಿ, ಮರಳು ದಿಬ್ಬ ತೆರವಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ಮರಳುಗಾರಿಕೆ ವಿಷಯದಲ್ಲಿ ನನಗೆ ಯಾರ ಸರ್ಟಿಫಿಕೇಟ್ ಬೇಕಾಗಿಲ್ಲ. ಜಿಲ್ಲೆಯ ಜನರು ಮುಗ್ದರು ಆದರೆ ಅವರು ಮೂರ್ಕರಲ್ಲ. ಅವರಿಗೆ ತಪ್ಪು ಮಾಹಿತಿ ನೀಡಬೇಡಿ. ಮರಳುಗಾರಿಕೆ ಸಂಬಂಧಿಸಿದಂತೆ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ಉಡುಪಿ ಜಿಲ್ಲೆಯ ಸಿ ಆರ್ ಝಡ್ ಮರಳು ದಿಬ್ಬಗಳನ್ನು ಗುರುತಿಸಿ ಮರಳುಗಾರಿಕೆ ಪರವಾನಿಗೆ ನೀಡಲು ರಾಷ್ಟ್ರೀಯ ಹಸಿರು ಪೀಠ ಹಾಗೂ ಕೇಂದ್ರ ಪರಿಸರ ಅರಣ್ಯ ಸಚಿವಾಲಯದ ಮಾರ್ಗಸೂಚಿಯಂತೆ ತಾನು ಗರಿಷ್ಠ ಪ್ರಯತ್ನ ನಡೆಸುತ್ತಿದ್ದು, ಶೀಘ್ರದಲ್ಲೇ ಮರಳುಗಾರಿಕೆ ಪ್ರಾರಂಭಗೊಳ್ಳುವ ವಿಶ್ವಾಸವಿದೆ ಎಂದ ಅವರು, ಮರಳು ದಿಬ್ಬಗಳನ್ನು ಗುರುತಿಸುವುದಕ್ಕಾಗಿ ಸಹಾಯಕ ಕಮೀಷನರ್ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಉಪಸಮಿತಿ ನೀಡಿದ ವರದಿಯನ್ನು ಸೆಪ್ಟೆಂಬರ್ 27ರಂದು ನಡೆದ ಜಿಲ್ಲಾ 7 ಸದಸ್ಯರ ಮರಳು ಸಮಿತಿ ಸಭೆಯಲ್ಲಿ ಚರ್ಚಿಸಿ, ಮರಳು ದಿಬ್ಬ ಇರುವ ಪ್ರದೇಶಗಳನ್ನು ವೈಜ್ಞಾನಿಕವಾಗಿ ಪತ್ತೆ ಹಚ್ಚಿ, ಸರ್ವೆ ಕಾರ್ಯ ಕೈಗೊಂಡು ತಾಂತ್ರಿಕ ವರದಿ ನೀಡಲು ಸುರತ್ಕಲ್ ಎನ್ ಐ ಟಿಕೆ ತಜ್ಞರ ತಂಡಕ್ಕೆ ಪ್ರಸ್ತಾವನೆಯನ್ನು ನೀಡಲಾಗಿತ್ತು ಎಂದರು.
ಉಡುಪಿ ತಾಲೂಕಿನಲ್ಲಿ ಸರ್ವೆ ನಡೆಸಿದ ಎನ್ ಐ ಟಿಕೆ ತಂಡ 9 ಮರಳು ದಿಬ್ಬಗಳನ್ನು ಗುರುತಿಸಿ ಅಕ್ಟೋಬರ್ 9ರಂದು ನೀಡಿದ ತಾಂತ್ರಿಕ ವರದಿಯನ್ನು ಅದೇ ದಿನ ಜಿಲ್ಲಾ 7 ಸದಸ್ಯರ ಮರಳು ಸಮಿತಿ ಸಭೆಯಲ್ಲಿಟ್ಟು ಚರ್ಚಿಸಿ, ಸಮಿತಿಯ ತೀರ್ಮಾನದಂತೆ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಅಕ್ಟೋಬರ್ 10ರಂದು ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿ ಪರಿಸ್ಥಿತಿ ಇಲಾಖೆಯ ಕಾರ್ಯದರ್ಶಿಗೆ ಕಳುಹಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 2018ರ ಮೇ ಅಂತ್ಯದವರೆಗೂ ಮರಳುಗಾರಿಕೆ ನಡೆದಿದೆ. ಕಳೆದ ವರ್ಷ 170 ಜನರಿಗೆ ಪರವಾನಗಿ ನೀಡಲಾಗಿದೆ. 6,08,610 ಮೆಟ್ರಿಕ್ ಟನ್ ಮರಳು ತೆಗೆಯಲಾಗಿದ್ದು, ಅವರಿಂದ ₹ 3.65 ಕೋಟಿ ರಾಜಧನ ಸಂಗ್ರಹಿಸಲಾಗಿದೆ ಎಂದು ವಿವರ ನೀಡಿದರು.
ಆದರೂ ಮರಳುಗಾರಿಕೆ ವಿಚಾರ ದಲ್ಲಿ ಜಿಲ್ಲಾಡಳಿತ ಹಠ ಮಾಡುತ್ತಿದೆ. ಬೇಜವಾಬ್ದಾರಿಯುತವಾಗಿ ನಡೆದು ಕೊಳ್ಳುತ್ತಿದೆ ಎಂದು ಕೆಲವರು ಸಾಮಾ ಜಿಕ ಜಾಲತಾಣದಲ್ಲಿ ಅಪಪ್ರಚಾರ ನಡಸುತ್ತಿದ್ದಾರೆ. ಮರಳುಗಾರಿಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ತಕ್ಷಣಕ್ಕೆ ಜಿಲ್ಲಾಡಳಿತವೇ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಿ.ಆರ್.ಝೆಡ್ ವ್ಯಾಪ್ತಿಯ ಮರಳು ಗಾರಿಕೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಉಲ್ಲಂಘಿಸಿದ್ದರೆ ಶಿಕ್ಷಾರ್ಹ. ಈ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶವಿಲ್ಲ. ಇಲ್ಲಿ ಮೀನುಗಾರಿಕೆ ನಡೆಸಲು ಬೋಟು ಸಂಚರಿಸಲು ಅಡಚಣೆಯಾಗುತ್ತದೆ ಎಂಬ ನೆಲೆಯಲ್ಲಿ ಸಂಪ್ರಾದಾಯಿಕ ರೀತಿಯಲ್ಲಿ ಮರಳು ದಿಬ್ಬ ತೆರವಿಗೆ ಅನುಮತಿ ಇದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ದಿಬ್ಬಗಳನ್ನು ಗುರುತಿಸಲು ಬಳಸಿದ ನಿಖರ ಬೆಥಮೆಟಿಕಲ್ ಸರ್ವೇಗೆ ನಿರ್ಧರಿಸಲಾಗಿತ್ತು. ಆದರೆ ಸಿಎಂ ಸೂಚನೆಯಂತೆ ಅದನ್ನು ಕೈಬಿಟ್ಟು ಎನ್ಐಟಿಕೆ ಅವರಿಂದಲೇ ಮರಳು ದಿಬ್ಬ ಗುರುತಿಸಿ ವರದಿ ಪಡೆದು, ಅನುಮೋದನೆಗೆ ಕೆಸಿಎಂಝಡ್ಗೆ ಕಳುಹಿಸಲಾಗಿದೆ ಎಂದರು.
ಈ ಹಿಂದೆ ನಿಯಮಾವಳಿ ಗಾಳಿಗೆ ತೂರಿ ಬೇಕಾಬಿಟ್ಟಿ ಮರಳುಗಾರಿಕೆ ಮಾಡಿದ್ದರಿಂದ ಒಂದು ವರ್ಷ ಮರಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಉದಯ ಸುವರ್ಣ ಎಂಬುವರು ಹಸಿರು ಪೀಠದಲ್ಲಿ ದಾವೆ ಹೂಡಿದ್ದರಿಂದ, ನ್ಯಾಯಾಲಯ ಸಾಕಷ್ಟು ಷರತ್ತು, ನಿಯಮಾವಳಿ ವಿಧಿಸಿ ಮರಳು ದಿಬ್ಬ ತೆರವುಗೊಳಿಸಲು ಸೂಚನೆ ನೀಡಿತ್ತು. ಮತ್ತೆ ಸಮಸ್ಯೆಯಾಗಬಾರದು ಎಂದು ಕಳೆದ ವರ್ಷ ಸಾಕಷ್ಟು ಜಾಗ್ರತೆ, ಎಚ್ಚರ ವಹಿಸಿ ನಿಯಮಾವಳಿ ಪ್ರಕಾರವೆ ಮರಳು ದಿಬ್ಬ ತೆರವಿಗೆ ಪರವಾನಗಿ ನೀಡಿದ್ದೆವು. ಜಿಲ್ಲಾಡಳಿತ ನಿಯಮಗಳನ್ನು ಗಾಳಿಗೆ ತೂರಿ ಮರಳುಗಾರಿಕೆ ನಡೆಸುತ್ತಿದೆ ಎಂದು ಮತ್ತೆ ಉದಯ ಸುವರ್ಣ ಹಸಿರು ಪೀಠಕ್ಕೆ ದಾವೆ ಹೂಡಿದ್ದಾರೆ. ಸದ್ಯ ಪ್ರಕರಣ ವಿಚಾರಣೆಯಲ್ಲಿದೆ. ಪುನಃ ಯಾವುದೇ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ನಿಯಮಾವಳಿ ಪ್ರಕಾರವೇ ಮರಳುಗಾರಿಕೆ ಬೇಕಾದ ಕೆಲಸವನ್ನು ಮಾಡುತಿದ್ದೇನೆ ಎಂದರು.
ಎಲ್ಲ ಕಾನೂನು ನಿಯಮಾವಳಿಯನ್ನು ಕೇಂದ್ರ, ರಾಜ್ಯ ಸರ್ಕಾರವೇ ಮಾಡಿದೆ. ಜತೆಗೆ ನ್ಯಾಯಾಲಯ ಸೂಚನೆ ಪಾಲಿಸುವುದು ನಮ್ಮ ಕರ್ತವ್ಯ. ನಿಯಮಾವಳಿ ಮೀರಿ ನಡೆಯಲು ಆಗುವುದಿಲ್ಲ. ನಾನು ಇಲಾಖೆ ಅಧಿಕಾರಿಗಳು ಏನೂ ಮಾಡಲು ಸಾಧ್ಯವಿಲ್ಲ. ಉಡುಪಿ ಮಾತ್ರವಲ್ಲ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಈ ಸಮಸ್ಯೆ ಇದೆ. ಉಡುಪಿಯಲ್ಲಿ ಮಾತ್ರ ಸಮಸ್ಯೆ ಎಂಬಂತೆ ಬಿಂಬಿಸಲಾಗುತ್ತಿದೆ. ಜನರಿಗೆ ಮರಳಿನ ಸಮಸ್ಯೆ ಇದ್ದು, ಹೆಚ್ಚಿನ ಜವಾಬ್ದಾರಿ ನನಗಿದೆ. ಆದರೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೆ ಜನರಿಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ ಎಂದು ಪ್ರಿಯಾಂಕಾ ಹೇಳಿದರು.
ಸಿಆರ್‌ಝಡ್‌ನಲ್ಲಿ ಮರಳುಗಾರಿಕೆಗೆ ಅವಕಾಶವಿಲ್ಲ. ಇಲ್ಲಿ ಮೀನುಗಾರಿಕೆ ನಡೆಸಲು ಬೋಟ್ ಸಂಚರಿಸಲು ಅಡಚಣೆಯಾಗುತ್ತದೆ ಎಂಬ ನೆಲೆಯಲ್ಲಿ ಮರಳು ದಿಬ್ಬ ತೆರವಿಗೆ ಮಾತ್ರ ಅವಕಾಶ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿನ್ ಸ್ಪಷ್ಟಪಡಿಸಿದರು. ಮೀನುಗಾರರಿಂದ ಬಂದ ಸಮಸ್ಯೆ ಅರ್ಜಿ ಪರಿಶೀಲಿಸಿ ದಿಬ್ಬ ಗುರುತಿಸಬೇಕು. ಈ ಬಾರಿ 47 ಅರ್ಜಿ ಬಂದಿವೆ. ಅದರಲ್ಲಿ ಮರಳು ದಿಬ್ಬದ ಪ್ರಮುಖ ಅಂಶ ಇರಲಿಲ್ಲ. ಬಳಿಕ ಇದನ್ನು ಪರಿಶೀಲಿಸಿ, ವರದಿ ನೀಡುವಂತೆ ಎಸಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ದಿಬ್ಬ ಗುರುತಿಸಲು ಬೇತಮೆಟ್ರಿಕ್ ಸರ್ವೇ ವೈಜ್ಞಾನಿಕವಾದ್ದರಿಂದ, ದ.ಕ ಜಿಲ್ಲೆಯಂತೆ ಅಳವಡಿಸಿಕೊಂಡೆವು. ಸಿಎಂ ಸೂಚನೆ ಮೇರೆಗೆ ಅದನ್ನು ಕೈಬಿಟ್ಟು ಎನ್ಐಟಿಕೆ ಅವರಿಂದಲೇ ದಿಬ್ಬ ಗುರುತಿಸಿ ವರದಿ ಪಡೆದುಕೊಂಡು, ಅದನ್ನು ಅಪ್ರೂವಲ್‌ಗಾಗಿ ಕೆಸಿಎಂಝಡ್‌ಗೆ(ಕರಾವಳಿ ನಿಯಂತ್ರಣ ವಲಯ) ಕಳಿಸಿದ್ದೇವೆ. ಅಲ್ಲಿಂದ ಅಪ್ರೂವಲ್ ಬಂದ ಬಳಿಕ ಡಿಸಿ ನೇತೃತ್ವದ 7 ಮಂದಿಯ ಸಮಿತಿ ಮರಳುಗಾರಿಕೆಗೆ ಪರವಾನಗಿ ನೀಡುತ್ತದೆ ಎಂದು ಹೇಳಿದರು.
ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸಿಆರ್‌ಝಡ್‌ನ ನೂತನ ಮ್ಯಾಪ್ ರಚಿಸಿದ್ದು, ನೋಟಿಫಿಕೇಶನ್ ಮಾಡಿದೆ. ನೂತನ ಮ್ಯಾಪ್‌ನಲ್ಲಿ ಜಿಲ್ಲೆಯ ಹಲವು ನದಿ ಮತ್ತು ನದಿಪಾತ್ರಗಳು ಸೇರಿಕೊಂಡಿದ್ದು, ಪರಿಣಾಮ ಉಡುಪಿಯಲ್ಲಿ ಮಾತ್ರ 9 ಉಪ್ಪು ನೀರು ಮರಳು ದಿಬ್ಬ ಸಿಗುತ್ತದೆ. ನಾನ್ ಸಿಆರ್‌ಝಡ್ ಸಿಹಿ ನೀರು ಮರಳು ದಿಬ್ಬಗಳನ್ನು 4 ಗುರುತಿಸಲಾಗಿದ್ದು 2 ಕಾರ್ಕಳ, 2 ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತದೆ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಬೈಂದೂರಿನಲ್ಲಿ ಅವಕಾಶ ಸಾಧ್ಯವಿಲ್ಲ, ಕಾರ್ಕಳದ 2 ದಿಬ್ಬಗಳಿಗೆ 2 ವಾರದಲ್ಲಿ ಮರಳುಗಾರಿಕೆ ಅವಕಾಶ ನೀಡಲಾಗುತ್ತದೆ. ಈ ಮರಳನ್ನು ಸರ್ಕಾರದ ಯೋಜನೆಗಳ ವಸತಿ ನಿರ್ಮಾಣಕ್ಕೆ ಬಳಸಲಾಗುತ್ತದೆ ಎಂದು ಡಿಸಿ ತಿಳಿಸಿದರು.