ಮಲ್ಪೆ –  ಆದಿ ಉಡುಪಿ ರಾಷ್ಟೀಯ ಹೆದ್ದಾರಿ ಕಾಮಗಾರಿ ಬುಧವಾರ ಆರಂಭ : ಯಶ್ಪಾಲ್ ಸುವರ್ಣ ಸೂಚನೆ

Spread the love

ಮಲ್ಪೆ –  ಆದಿ ಉಡುಪಿ ರಾಷ್ಟೀಯ ಹೆದ್ದಾರಿ ಕಾಮಗಾರಿ ಬುಧವಾರ ಆರಂಭ : ಯಶ್ಪಾಲ್ ಸುವರ್ಣ ಸೂಚನೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ಎ ಮಲ್ಪೆ ಅದಿ ಉಡುಪಿ ಸಹಿತ ಹಿರಿಯಡ್ಕ, ಪರ್ಕಳ ಹಾಗೂ ಪೆರ್ಡೂರು ಭಾಗದ ರಾಷ್ಟೀಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಯವರ ಉಪಸ್ಥಿತಿಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಮಲ್ಪೆ ಆದಿ ಉಡುಪಿ ಕಾಮಗಾರಿ ಭೂ ಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದ ಕುಂಠಿತವಾಗಿದ್ದು ಈಗಾಗಲೇ ಭೂ ಮಾಲೀಕರಿಗೆ ಪರಿಹಾರ ಪಾವತಿಯ ಮೊತ್ತದ ಬಗ್ಗೆ ನೋಟಿಸ್ ನೀಡಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯ 214 ಕಡತಗಳ ಪೈಕಿ 19 ಸರ್ಕಾರಿ ಜಮೀನು ಹೊರತುಪಡಿಸಿ 195 ಖಾಸಗಿ ಜಮೀನು ಮಾಲಿಕರ ಪೈಕಿ 51 ನೋಟೀಸ್ ಸ್ವೀಕರಿಸಿದ್ದು, 48 ಮಂದಿ ಪರಿಹಾರ ಮೊತ್ತ ಪಡೆಯಲು ತಮ್ಮ ದಾಖಲಾತಿಗಳನ್ನು ಒದಗಿಸಿದ್ದಾರೆ. ಬಾಕಿ ಇರುವ 144 ಜಮೀನು ಮಾಲಕರನ್ನು ಸಂಪರ್ಕಿಸಿ ನೋಟೀಸ್ ನೀಡುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಬುಧವಾರದಿಂದಲೇ ಮಲ್ಪೆ ಆದಿ ಉಡುಪಿ ಕಾಮಗಾರಿ ಮರು ಆರಂಭ ಮಾಡುವಂತೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ ನೀಡಿದರು.

ಪರ್ಕಳ ಹೆದ್ದಾರಿ ಕಾಮಗಾರಿ ನ್ಯಾಯಾಲಯ ತಡೆಯಾಜ್ಞೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವು ಸರ್ಕಾರದ ಪರವಾಗಿ ಬಂದಿದ್ದು, ಭೂ ಮಾಲೀಕರಿಗೆ ಕೂಡಲೇ ಪರಿಹಾರದ ಹಣ ನೀಡಬೇಕು, ಕಾಮಗಾರಿ ಪ್ರಾರಂಭಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಪೆರ್ಡೂರಿನ ದೇವಸ್ಥಾನ ಸಮೀಪದ 600 ಮೀ. ವ್ಯಾಪ್ತಿಯಲ್ಲಿ ಕಾಮಗಾರಿ ಸಂಬಂಧ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಅದನ್ನು ಬಿಟ್ಟು ಉಳಿದ ಕಡೆ ಕಾಮಗಾರಿ ಕೈಗೊಳ್ಳಬೇಕು. ದೇವಸ್ಥಾನ, ಕಲ್ಯಾಣಿಯ ಮೂಲ ಸ್ವರೂಪಕ್ಕೆ ಧಕ್ಕೆ ಆಗಬಾರದೆಂಬುದು ಭಕ್ತರ ಬೇಡಿಕೆ. ಅದನ್ನು ಮನಗಂಡು ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.

ಸಭೆಯಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ  ಮಹೇಶ್ ಚಂದ್ರ, ರಾಷ್ಟೀಯ ಹೆದ್ದಾರಿ 169 ಎ ಅಧಿಕಾರಿಗಳಾದ  ಮಂಜುನಾಥ ಗೌಡ, ನವೀನ್ ರಾಜ್, ಮಂಜುನಾಥ ನಾಯಕ್, ನಗರಸಭಾ ಸದಸ್ಯರಾದ ಸುಂದರ ಕಲ್ಮಾಡಿ, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love