ಮಲ್ಪೆ: ‘ಉಚಿತ ಯೋಜನೆಗಳ ಜೊತೆ ಬಾಂಬ್ ಫ್ರೀ’ ವಿಡಿಯೋ ಮಾಡಿದ ವ್ಯಕ್ತಿ ವಿರುದ್ಧ ಕೇಸ್

Spread the love

ಮಲ್ಪೆ: ‘ಉಚಿತ ಯೋಜನೆಗಳ ಜೊತೆ ಬಾಂಬ್ ಫ್ರೀ’ ವಿಡಿಯೋ ಮಾಡಿದ ವ್ಯಕ್ತಿ ವಿರುದ್ಧ ಕೇಸ್

ಉಡುಪಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಉಚಿತ ಯೋಜನೆಗಳ ಜೊತೆ ಬಾಂಬ್ ಕೂಡ ಉಚಿತವಾಗಿ ಸಿಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿ ವೀಡಿಯೋ ಹರಿಬಿಟ್ಟ ಗರಡಿ ಮಜಲು ನಿವಾಸಿ ದಿವಾಕರ ಕೋಟ್ಯಾನ್ ವಿರುದ್ದ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿವಾಕರ್ ಕೋಟ್ಯಾನ್ ಸ್ವತಃ ತಾವೇ ಮಾಡಿರುವ ವಿಡಿಯೋದಲ್ಲಿ, ‘ಬಸ್ ಟಿಕೆಟ್, 2000ರೂ., ವಿದ್ಯುತ್ ಬಿಲ್ ಫ್ರಿ ಜೊತೆಗೆ ಈಗ ಹೊಸದಾಗಿ ಬಾಂಬ್ ಸ್ಪೋಟ ಫ್ರೀ ಕೂಡ ರಾಜ್ಯ ಸರಕಾರ ಕೊಡುತ್ತಿದೆ. ಇದಕ್ಕೂ ಏನು ಹಣ ಕೊಡಲು ಇಲ್ಲ. ಎಲ್ಲವೂ ಫ್ರಿ. ನೇರವಾಗಿ ಮೇಲೆ…ನೋ ಪಾಸ್ ಪೋಟ್ ನೋ ವೀಸಾ.. ಸನ್ಮಾನ್ಯ ಮುಖ್ಯಮಂತ್ರಿ ಸಿದ್ರುಲ್ಲಾ ಖಾನ್… ಹಿಂದುಗಳೇ ಫ್ರೀ ಬೇಕಲ್ಲ ತೆಗೆದುಕೊಳ್ಳಿ,..ಮುಂದೆ ಇನ್ನು ಆರರು ತಿಂಗಳಿಗೆ ಬಸ್, ವಿದ್ಯುತ್, 2000ರೂ. ಜೊತೆ ಬಾಂಬ್ ಕೂಡ ಫ್ರೀ ಸಿಗುತ್ತದೆ. ಮಜಾ ಮಾಡಿ…’ ಹೇಳಿರುವುದು ಕಂಡುಬಂದಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ. ದಿವಾಕರ್ ಕೋಟ್ಯಾನ್ ರಾಜ್ಯ ಸರಕಾರದ ಯೋಜನೆಗಳ ಜೊತೆ ಬಾಂಬ್ ಉಚಿತ ಹೇಳುವುದರೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅವಹೇಳನಕಾರಿ ಯಾಗಿ ನಿಂದಿಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರು  ಉಡುಪಿ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


Spread the love