ಮಲ್ಪೆ ದ್ವೀಪದಲ್ಲಿ ಪೇಜಾವರ ಶ್ರೀಗಳ ಸ್ಮಾರಕ ನಿರ್ಮಾಣಕ್ಕೆ ಅನುಮತಿಗೆ ಯಶ ಪಾಲ್ ಸುವರ್ಣ ಮನವಿ
ಉಡುಪಿ: ಜಿಲ್ಲಾಡಳಿತ ಅನುಮತಿ ನೀಡಿದರೆ ಮಲ್ಪೆ ದ್ವೀಪದಲ್ಲಿ ಪೇಜಾವರ ಶ್ರೀಗಳ ಭವ್ಯ ಸ್ಮಾರಕವನ್ನು ಸಾರ್ವಜನಿಕ ಸಹಕಾರದೊಂದಿಗೆ ನಿರ್ಮಿಸಲಿದ್ದೇವೆ ಎಂದು ಮೀನುಗಾರ ಮುಖಂಡ ಯಶಪಾಲ ಸುವರ್ಣ ತಿಳಿಸಿದ್ದಾರೆ.
ಇತ್ತೀಚೆಗೆ ಕೃಷ್ಣೈಕ್ಯರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಸಂಪೂರ್ಣ ಜೀವಿತವನ್ನು ಸಮಾಜದ ಉನ್ನತಿಗೆ ಮುಡಿಪಾಗಿಟ್ಟ ಹಿರಿಯರು.ಸಮಾಜದ ಅವರ ಬದುಕಿನಿಂದ ನಮ್ಮ ಮುಂದಿನ ಪೀಳಿಗೆ ಪ್ರೇರಣೆ ಪಡೆಯ ಬೇಕಾದರೆ ಅವರ ಭವ್ಯ ಸ್ಮಾರಕವೊಂದು ನಿರ್ಮಾಣವಾಗಬೇಕು. ಉಡುಪಿಯ ಪ್ರಸಿದ್ಧ ಪ್ರವಾಸಿತಾಣವಾಗಿರುವ ತೋನ್ಸೆಪಾರ್ ದ್ವೀಪದಲ್ಲಿ ಪೂಜ್ಯ ಶ್ರೀಗಳ ಸುಂದರ ಪುತ್ಥಳಿ ಮತ್ತು ಅವರ ಬದುಕಿನ ಸಾಧನೆಗಳನ್ನು ಬಿಂಬಿಸುವ ಪುಟ್ಟ ಆಡಿಟೋರಿಯಂ ಒಂದನ್ನು ರಚಿಸಲು ನಾವು ಸಿದ್ಧರಿದ್ದು ಜಿಲ್ಲಾಡಳಿತ ಈ ಕಾರ್ಯಕ್ಕೆ ಅನುಮತಿ ನೀಡಬೇಕು ಎಂದು ಅವರು ವಿನಂತಿಸಿದ್ದಾರೆ.
ಸಂತನ ಬದುಕು ಲೋಕದ ಹಿತಕ್ಕೆ ಎಂಬ ಮಾತನ್ನು ಅಕ್ಷರಶಃ ಪಾಲಿಸಿದವರು ಪೇಜಾವರ ಶ್ರೀಗಳು.ಅವರು ಕೇವಲ ಮಧ್ವಮತದ ಪ್ರಸಾರಕ್ಕಷ್ಟೇ ಸೀಮಿತಗೊಳ್ಳದೆ ಎಲ್ಲಾ ಸಮಾಜಗಳ ಸಂಘಟನೆಗೆ ಮಹತ್ವ ನೀಡುತ್ತಾ ರಾಷ್ಟ್ರೀಯ ವಿಚಾರಗಳಿಗೆ ಸ್ಪಂದಿಸುತ್ತಾ ತನ್ನ ಇಳಿ ವಯಸ್ಸಿನಲ್ಲೂ ಪಾದರಸದಂತೆ ಸಂಚರಿಸುತ್ತಿದ್ದವರು. ಅಂತರಾಷ್ಟ್ರೀಯ ಸ್ತರದಲ್ಲಿ ಉಡುಪಿಯ ಕೀರ್ತಿಯನ್ನು ಎತ್ತಿ ಹಿಡಿದವರು ಪೇಜಾವರ ಶ್ರೀಗಳು.
ಸರಳ ಬದುಕನ್ನು ನಡೆಸಿದ ಯತಿಶ್ರೇಷ್ಠರು ಅನೇಕ ಶಿಕ್ಷಣ ಸಂಸ್ಥೆಗಳನ್ನು ಧಾರ್ಮಿಕ ಕೇಂದ್ರಗಳನ್ನು ಗೋಶಾಲೆಗಳನ್ನು ಬಿಟ್ಟು ಹೋಗಿದ್ದಾರೆ.
ಪೇಜಾವರಶ್ರೀಗಳ ಸ್ಮಾರಕ ನಿರ್ಮಾಣದಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದ್ದು ಪೇಜಾವರ ಶ್ರೀಗಳ ಸ್ಮಾರಕ ರಚನೆಗೆ ಜಿಲ್ಲಾಡಳಿತ ತನ್ನ ಪೂರ್ಣ ಸಹಕಾರ ನೀಡಬೇಕು ಎಂದು ಅವರು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.