ಮಲ್ಪೆಯಲ್ಲಿ ‘ಲೋಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್’ ಸಂಪನ್ನ
ಮಲ್ಪೆ: ಉಡುಪಿ ರನ್ನರ್ಸ್ ಕ್ಲಬ್ಗಳ ಜಂಟಿ ಆಶ್ರಯದಲ್ಲಿ ‘ಲೋಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್-2024’ನ್ನು ಮಲ್ಪೆಯಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.
ಮಲ್ಪೆ ಸೀವಾಕ್ನಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮ್ಯಾರಥಾನ್ಗೆ ಚಾಲನೆ ನೀಡಿದರು. ಈ ಸಂದರ್ಭ ಉಡುಪಿ ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ, ರನ್ನರ್ಸ್ ಕ್ಲಬ್ ಅಧ್ಯಕ್ಷ ಡಾ.ತಿಲಕ್ಚಂದ್ರ ಪಾಲ್ ಮೊದಲಾದವರು ಉಪಸ್ಥಿತರಿದ್ದರು. ಮುಂಜಾನೆ 5 ಗಂಟೆಗೆ ಸೀವಾಕ್ನಿಂದ ಆರಂಭಗೊಂಡ 21ಕಿ.ಮೀ. ದೂರದ ಹಾಫ್ ಮ್ಯಾರಥಾನ್ 9ಗಂಟೆಗೆ ಅದೇ ಸ್ಥಳದಲ್ಲಿ ಸಮಾಪನಗೊಂಡಿತು.
ಇಥಿಓಪಿಯಾ, ಕೀನ್ಯಾ, ಜರ್ಮನ್, ಉಗಾಂಡ ದೇಶದ ಅಂತಾರಾಷ್ಟರೀಯ ಕ್ರೀಡಾಪಟುಗಳು ಸೇರಿದಂತೆ ರಾಜ್ಯ, ಹೊರರಾಜ್ಯ ಸುಮಾರು 3500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಪುರುಷರು ಮತ್ತು ಮಹಿಳೆಯರಿಗೆ 21ಕಿ.ಮೀ. ಹಾಫ್ ಮ್ಯಾರಥಾನ್, ಜತೆಗೆ 10 ಕಿ.ಮೀ. 5 ಕಿ.ಮೀ. ಉಡುಪಿ ಶಾಲಾ ವಿದ್ಯಾರ್ಥಿಗಳಿಗೆ 5 ಮತ್ತು 3 ಕಿ.ಮೀ ಮೋಜಿನ ಓಟವನ್ನು ನಡೆಯಿತು. 21ಕಿ.ಮೀ.ನಲ್ಲಿ 250, 10ಕಿ.ಮೀನಲ್ಲಿ 750, 5 ಕಿ.ಮೀ ನಲ್ಲಿ 850, ವಿದ್ಯಾರ್ಥಿಗಳ 5 ಮತ್ತು 3 ಕಿ.ಮೀ.ನಲ್ಲಿ 1050 ಮತ್ತು ಫನ್ ರನ್ನಲ್ಲಿ 525 ಮಂದಿ ಪಾಲ್ಗೊಂಡಿದ್ದರು.
ಮ್ಯಾರಥಾನ್ ಸಮಾರೋಪ: ಸಮಾರಂದಲ್ಲಿ ವಿಜೇತ ಕೀಡಾ ಪಟುಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಯಾವುದೇ ಒಬ್ಬ ವ್ಯಕ್ತಿ ತಮ್ಮ ಜೀವನದಲ್ಲಿ ಯಾವುದಾದರೂ ಸಾಧನೆ ಮಾಡ ಬೇಕಾದರೆ ಪ್ರಪ್ರಥಮವಾಗಿ ಆತ ಆರೋಗ್ಯವಂತನಾಗಿರಬೇಕು. ಆ ಕಲ್ಪನೆಯೊಂದಿಗೆ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತ ಯುವಕರಲ್ಲಿ ಕ್ರೀಡಾ ಮನೋ ಭಾವವನ್ನು ಮೂಡಿಸಲಾಗುತ್ತಿದೆ. ಇದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿದೆ ಎಂದರು.
ಉಡುಪಿ ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿ, ದೈಹಿಕ ಮತ್ತು ಮಾನಸಿಕ ಸ್ವಸ್ಥವನ್ನು ಕಾಪಾಡುವ ಉದ್ದೇಶದಿಂದ ಮ್ಯಾರಥಾನ್ ಓಟ ಆಯೋಜಿಸಲಾಗಿದೆ. ಪ್ರಸ್ತುತ ಬದುಕಿನಲ್ಲಿ ಹೃದಯಾಘಾತ ಗಳು ಹೆಚ್ಚುತ್ತಿದ್ದು, ಅವಕ್ಕೆಲ್ಲ ಕಡಿವಾಣ ಹಾಕಲು ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಅದಾನಿ ಗ್ರೂಪ್ನ ನಿರ್ದೇಶಕ ಕಿಶೋರ್ ಆಳ್ವ, ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್, ಉದ್ಯಮಿ ಆನಂದ ಪಿ.ಸುವರ್ಣ, ಉಡುಪಿ ಕೊಚ್ಚಿನ್ ಶಿಪ್ಯಾರ್ಡ್ನ ಸಿಇಓ ಹರಿಕುಮಾರ್, ಡಿಜಿಎಂ ಎಂ.ಅಂಬಲವನಮ್, ರನ್ನರ್ಸ್ ಕ್ಲಬ್ ಅಧ್ಯಕ್ಷ ಡಾ.ತಿಲಕ್ಚಂದ್ರ ಪಾಲ್, ಯುವಕ್ರೀಡಾ ಮತ್ತು ಸಬಲೀಕರಣದ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಶೆಟ್ಟಿ, ಉಡುಪಿ ರನ್ನರ್ಸ್ ಕ್ಲಬ್ನ ಪದಾಧಿಕಾರಿಗಳಾದ ದಿವಾಕರ ಗಣಪತಿ ನಾಯಕ್, ಸತೀಶ್ ಸಾಲ್ಯಾನ್, ಉದಯ ಕುಮಾರ್ ಶೆಟ್ಟಿ, ದಿವೇಶ್ ಶೆಟ್ಟಿ, ಯತೀಶ್ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.