ಮಲ್ಲಿಗೆ ಬೆಳೆ ಪರಿಹಾರ ಹೆಚ್ಚಳಕ್ಕೆ ಮೆಲ್ವಿನ್ ಡಿಸೋಜಾ ಆಗ್ರಹ
ಉಡುಪಿ: ಕೊರೋನಾ ಮಹಾಮಾರಿಯಿಂದ ಉಂಟಾದ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ಹೂವು ಬೆಳೆದ ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರಕಾರ ಘೋಷಣೆ ಮಾಡಿದ ಬೆಳೆ ನಷ್ಟ ಪರಿಹಾರದಲ್ಲಿ ಉಡುಪಿ ಜಿಲ್ಲೆಯ ಮಲ್ಲಿಗೆ ಬೆಳೆಗಾರರಿಗೆ ಪ್ರತ್ಯೇಕ ನಿಯಮ ರೂಪಿಸುವಂತೆ ಶಿರ್ವ ಗ್ರಾಮ ಪಂಚಾಯತ್ ಸದಸ್ಯ, ನ್ಯಾಯವಾದಿ ಮೆಲ್ವಿನ್ ಡಿಸೋಜಾ ಸರಕಾರ ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಕೊರೋನಾ ಮಹಾಮಾರಿಯಿಂದ ಉಂಟಾದ ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ಹೂವು ಬೆಳೆದ ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರಕಾರ ಪ್ರತಿ ಹೆಕ್ಟೇರ್ ಗೆ ರೂ 25000/- ಬೆಳೆ ನಷ್ಟ ಪರಿಹಾರ ನೀಡುವ ಭರವಸೆ ನೀಡಿದ್ದು ಈ ಬಗ್ಗೆ ಮಲ್ಲಿಗೆ ಬೆಳೆಗಾರರೂ ಕೂಡ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅವಕಾಶ ಸಲ್ಲಿಸಲಾಗಿದೆ.
ಆದರೆ ಉಡುಪಿ ಜಿಲ್ಲೆಯಲ್ಲಿ ಪ್ರಮುಖವಾಗಿ ಕಾಪು ತಾಲೂಕಿನಲ್ಲಿ ರೈತರು ಮಲ್ಲಿಗೆಯನ್ನು ಅತೀ ಕಡಿಮೆ ಜಾಗದಲ್ಲಿ ಬೆಳೆದಿದ್ದು ಕೆಲವರು 0.03 ಸೆಂಟ್ಸ್, ಕೆಲವರು 0.05 ಸೆಂಟ್ಸ್ ಜಾಗದಲ್ಲಿ ಬೆಳೆದಿದ್ದು ಇದರಿಂದ ಅತೀ ಕಡಿಮೆ ಪರಿಹಾರ ಅಂದರೆ ಸೆಂಟ್ಸ್ ಗೆ ರೂ 100 ಸಿಗುವುದೂ ಕಷ್ಟವಾಗಿದೆ. ಆದ್ದರಿಂದ ಉಡುಪಿ ಜಿಲ್ಲೆಗೆ ಈ ಬಗ್ಗೆ ಪ್ರತ್ಯೇಕ ನಿಯಮ ರೂಪಿಸಿ ಒಂದು ಗಿಡಕ್ಕೆ ಇಷ್ಟು ಪರಿಹಾರ ಎಂಬಂತೆ ಕನಿಷ್ಠ ಒಂದು ಗಿಡಕ್ಕೆ ರೂ 500/- ಪರಿಹಾರ ಘೋಷಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.