ಮಳೆ ನಿಂತ ಬಳಿಕ ಪಾಲಿಕೆ ವ್ಯಾಪ್ತಿಯಲ್ಲಿ ದುರಸ್ತಿ ಕಾರ್ಯ ಆರಂಭ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಡಾಂಬರು ರಸ್ತೆಗಳ ಗುಂಡಿ ಮುಚ್ಚುವ ಹಾಗೂ ಡಾಂಬರು ತೇಪೆ ಅಳವಡಿಕೆ ಕಾಮಗಾರಿಯ ಬಗ್ಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ಹಲವಾರು ದೂರುಗಳು ಸತತವಾಗಿ ಬರುತ್ತಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಡಿಕೆಯಂತೆ ಪ್ರತಿ ಮಳೆಗಾಲ ಮುಗಿದ ಬಳಿಕ ಡಾಂಬರು ರಸ್ತೆಯಲ್ಲಿ ಉಂಟಾಗಿರುವ ಗುಂಡಿಯನ್ನು ಮುಚ್ಚಿ ಡಾಂಬರು ತೇಪೆ ಒದಗಿಸುವ ಕಾಮಗಾರಿಯನ್ನು ಕೈಗೊಳ್ಳುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ಅಕ್ಟೋಬರ್ ತಿಂಗಳ ಅಂತ್ಯ ಸಮೀಪಿಸುತ್ತಿದ್ದರೂ, ದಿನ ಬಿಟ್ಟು ದಿನ ವಿಪರೀತ ಮಳೆ ಸುರಿಯುತ್ತಿರುವುದರಿಂದ ಮತ್ತು ಪ್ರತಿಕೂಲ ವಾತಾವರಣವಿರುವ ಹಿನ್ನೆಲೆಯಲ್ಲಿ ಡಾಂಬರು ರಸ್ತೆಯ ಗುಂಡಿ ಮುಚ್ಚುವ ಹಾಗೂ ಡಾಂಬರು ತೇಪೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಡಾಂಬರು ರಸ್ತೆ ಗುಂಡಿಯನ್ನು ಮುಚ್ಚಲು ನಿರಂತರವಾಗಿ ಕನಿಷ್ಟ 10ದಿನಗಳ ಬಿಸಿಲಿನ ವಾತಾವರಣ ಅಗತ್ಯವಿದ್ದು, ಅಂತಹ ಸಂದರ್ಭದಲ್ಲಿ ಮಾತ್ರ ರಸ್ತೆ ಗುಂಡಿಯನ್ನು ಮುಚ್ಚಿ ಡಾಂಬರು ತೇಪೆ ಮಾಡಿದಲ್ಲಿ ಅದು ಸುಧೃಡವಾಗಿ ಮುಚ್ಚಲ್ಪಡುತ್ತದೆ.
ಮಳೆಯ ವಾತಾವರಣದಲ್ಲಿ ಡಾಂಬರು ಗುಂಡಿ ಮುಚ್ಚುವ ಕಾಮಗಾರಿ ಕೈಗೆತ್ತಿಕೊಂಡಲ್ಲಿ ಹಾಕಲಾಗಿರುವ ಡಾಂಬರು ಕಿತ್ತು ಹೋಗಿ ಮತ್ತೆ ಗುಂಡಿಯಂತಹ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದಾಗಿ ಸಾರ್ವಜನಿಕರಿಂದ ಅನಾವಶ್ಯಕ ಟೀಕೆ ಟಿಪ್ಪಣಿಗಳು ಬರುವ ಕಾರಣ ಮತ್ತು ಮಾಡಿರುವ ಕೆಲಸವೂ ಕೂಡಾ ನಿಷ್ಪ್ರಯೋಜಕವಾಗುವ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸಂಪೂರ್ಣ ಮಳೆ ನಿಂತು ಸತತವಾದ ಬಿಸಿಲಿನ ವಾತಾವರಣ ಬಳಸಿಕೊಂಡು ಗುಂಡಿ ಮುಚ್ಚಿ ಡಾಂಬರು ತೇಪೆ ಅಳವಡಿಸುವ ಕಾಮಗಾರಿ ನಿರ್ವಹಿಸುವುದು ತಾಂತ್ರಿಕವಾಗಿಯೂ ಸೂಕ್ತವಾಗಿರುತ್ತದೆ.
ಅದುವರೆಗೂ ಸಾರ್ವಜನಿಕರು ಮಹಾನಗರಪಾಲಿಕೆಯೊಂದಿಗೆ ಸಹಕರಿಸಬೇಕಾಗಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.