ಮಳೆಗಾಗಿ ಪ್ರಾರ್ಥಿಸಿ ಉಡುಪಿಯಲ್ಲಿ ಕಪ್ಪೆಗಳಿಗೆ ಮದುವೆ!

Spread the love

ಮಳೆಗಾಗಿ ಪ್ರಾರ್ಥಿಸಿ ಉಡುಪಿಯಲ್ಲಿ ಕಪ್ಪೆಗಳಿಗೆ ಮದುವೆ!

ಉಡುಪಿ: ತೀವ್ರ ಜಲಕ್ಷಾಮ ತಲೆದೂರಿರುವ ಉಡುಪಿಯಲ್ಲಿ ಶನಿವಾರ ಕಪ್ಪೆಗಳಿಗೆ ಮದುವೆ ಮಾಡಿ ಮಳೆಗಾಗಿ ವಿಶೇಷವಾಗಿ ಪ್ರಾರ್ಥಿಸಲಾಯಿತು. ಉಡುಪಿ ಕಿದಿಯೂರು ಹೊಟೆಲ್ ಪ್ರಾಂಗಣದಲ್ಲಿ ಗಂಡು ಕಪ್ಪೆ ಮತ್ತು ಹೆಣ್ಣು ಕಪ್ಪೆಗೆ ಹಿಂದು ಸಂಪ್ರದಾಯದ ವಿಧಿವಿಧಾನದಂತೆ ಅದ್ದೂರಿಯಾಗಿ ಮದುವೆ ನೆರವೇರಿಸಲಾಯಿತು.

ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್, ಪಂಚರತ್ನಾ ಸೇವಾ ಟ್ರಸ್ಟ್ ಆಯೋಜನೆಯಲ್ಲಿ ಮಂಡೂಕ ಕಲ್ಯಾಣೋತ್ಸವ ಆಯೋಜಿಸಲಾಗಿತ್ತು. ಶನಿವಾರ ಬೆಳಗ್ಗೆ 11ಕ್ಕೆ ಮಾರುತಿ ವಿಥಿಕ ಸರ್ಕಲ್ನಿಂದ ಕಪ್ಪೆ ಜೋಡಿಗಳ ದಿಬ್ಬಣ ಹೊರಟು, ನಗರದ ಹಳೇ ಡಯಾನ ವೃತ್ತ, ಕವಿ ಮುದ್ದಣ ಮಾರ್ಗದ ಮೂಲಕ ಕಿದಿಯೂರ್ ಹೋಟೆಲ್ಗೆ ಸಾಗಿ ಬಂದಿತು.

ಜಲಕ್ಷಾಮದ ನಿವರಾಣಾರ್ಥ ಹಾಗೂ ಮಳೆ ಬರುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಪಂಚರತ್ನಾ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿ ಕೊಳ್ಳಲಾದ ಮಂಡೂಕ ಕಲ್ಯಾಣೋತ್ಸವದಲ್ಲಿ ಕೊಳಲಗಿರಿ ಸಮೀಪದ ಕೀಳಿಂಜೆ ಎಂಬಲ್ಲಿ ಪತ್ತೆಯಾದ ‘ವರ್ಷ’ ಹೆಸರಿನ ಹೆಣ್ಣು ಕಪ್ಪೆ ಮತ್ತು ಉಡುಪಿ ಕಲ್ಸಂಕದಲ್ಲಿ ಪತ್ತೆಯಾದ ‘ವರುಣ’ ಹೆಸರಿನ ಗಂಡು ಕಪ್ಪೆಗೆ ಮದುವೆ ಮಾಡಲಾಯಿತು.

ಪುರೋಹಿತರು ಸೂಚಿಸಿದ ಮೂಹುರ್ತದಲ್ಲಿ ಹೆಣ್ಣು ಕಪ್ಪೆಗೆ ಅಮಿತಾ ಗಿರೀಶ್ ಮಲ್ಲಿಗೆ ಹೂವು ಮುಡಿಸಿ, ತಿಲಕ ಹಚ್ಚಿ, ಕಾಲು ಉಂಗುರ ತೊಡಿಸಿ, ಮಾಂಗಲ್ಯ ಕಟ್ಟುವ ಮೂಲಕ ವಿವಾಹ ನೆರವೇರಿಸಿದರು. ಬಳಿಕ ಭಜನಾ ಮಂಡಳಿಯ ಮಹಿಳೆಯರು ಆರತಿ ಎತ್ತಿದರು. ವಿವಾಹ ಮುಗಿದ ಬಳಿಕ ಕಪ್ಪೆಗಳನ್ನು ಮಣಿಪಾಲದ ಮಣ್ಣಪಳ್ಳದ ಕೆರೆಯಲ್ಲಿ ಬಿಡ ಲಾಯಿತು.

ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ತಾರನಾಥ ಮೇಸ್ತ, ಸಂತೋಷ್ ಸರಳಬೆಟ್ಟು, ಗಣೇಶ್ರಾಜ್ ಸರಳಬೆಟ್ಟು ಮೊದ ಲಾದವರು ಉಪಸ್ಥಿತರಿದ್ದರು.


Spread the love