ಮಹಿಳಾ ಸುರಕ್ಷತೆ ಕುರಿತು ಬಿಜೆಪಿಯಿಂದ ಪಾಠ ಹೇಳಿಸಿಕೊಳ್ಳಬೇಕಾಗಿಲ್ಲ – ವೆರೋನಿಕಾ ಕರ್ನೇಲಿಯೋ

Spread the love

ಮಹಿಳಾ ಸುರಕ್ಷತೆ ಕುರಿತು ಬಿಜೆಪಿಯಿಂದ ಪಾಠ ಹೇಳಿಸಿಕೊಳ್ಳಬೇಕಾಗಿಲ್ಲ – ವೆರೋನಿಕಾ ಕರ್ನೇಲಿಯೋ

ಉಡುಪಿ: ಮಹಿಳೆಯರ ಸುರಕ್ಷತೆಯ ಕುರಿತು ಬಿಜೆಪಿಯಿಂದ ಸಂಸ್ಕೃತಿಯ ಪಾಠವನ್ನು ಹೇಳಿಕೊಳ್ಳುವಷ್ಟು ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಸ್ಥಿತಿ ಬಂದಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರರಾದ ವೆರೋನಿಕಾ ಕರ್ನೆಲಿಯೊ ಹೇಳಿದ್ದಾರೆ.

ಕರ್ನಾಟಕದಲ್ಲಿ ಸಂವಿಧಾನ ವಿರೋಧಿ ಮತ್ತು ಮಹಿಳಾ ವಿರೋಧಿ ಕಾಂಗ್ರೆಸ್ ಸರಕಾರ ದುರಾಡಳಿತ ನಡೆಸುತ್ತಿದೆ. ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ಮಹಿಳಾ ವಿರೋಧಿ ಧೋರಣೆಗಳು ಕಾಣಿಸುತ್ತವೆ. ಮಹಿಳಾ ವಿರೋಧಿ ಕಾಂಗ್ರೆಸ್ಸಿಗೆ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿರುವ ಬಿಜೆಪಿ ಜಿಲ್ಲಾ ವಕ್ತಾರೆ ಗೀತಾಂಜಲಿ ಎಮ್. ಸುವರ್ಣ ಅವರು ಒಮ್ಮೆ ತಮ್ಮದೇ ಬಿಜೆಪಿ ಪಕ್ಷದ ನಾಯಕರು ಮಹಿಳೆಯರನ್ನು ಯಾವ ರೀತಿಯಲ್ಲಿ ನಡೆಸಿಕೊಂಡಿದ್ದಾರೆ ಎನ್ನುವುದನ್ನು ಅವಲೋಕನ ಮಾಡಿಕೊಳ್ಳುವುದು ಒಳಿತು.

ಮಹಿಳೆಯನ್ನು ಮಾತೆ ತಾಯಿ ಎಂದು ಬಾಯಿ ತುಂಬಾ ಹೊಗಳಿ ಅವರ ಮೇಲೆ ದೌರ್ಜನ್ಯವೆಸಗಿದ ಬಿಜೆಪಿ ಪಕ್ಷದ ನಾಯಕರುಗಳಾದ ರೇಣುಕಾಚಾರ್ಯ, ಹಾಲಪ್ಪ, ರಾಮದಾಸ್ ಅವರ ವರ್ತನೆಯನ್ನು ಈ ರಾಜ್ಯದ ಜನರು ಮರೆತಿಲ್ಲ. ಬೇಟಿ ಬಚಾವೊ ಬೇಟಿ ಪಡವೊ ಎಂದು ಹೇಳುವುದರ ಮೂಲಕ ಮಹಿಳೆಯ ಉದ್ದಾರ ಮಾಡುವುದಾಗಿ ಹೇಳಿ ಮೋಸ ಮಾಡಿರುವುದು ಅಲ್ಲದೆ ಆಕೆಯ ಅಭಿವೃದ್ಧಿಗೆ ಯಾವ ಯೋಜನೆಯನ್ನು ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ನೀಡಿದೆ ಎನ್ನುವುದು ರಾಜ್ಯದ ಪ್ರತಿಯೊಂದು ಮಹಿಳೆಯರೂ ಕೂಡ ಅರಿತಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ಆದೇಶದಲ್ಲಿ ಹೇಳಿರುವಂತೆ ಮಹಿಳಾ ಅಭ್ಯರ್ಥಿಗಳು ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ. ಆದರೆ ಬಿಜೆಪಿಗರು ಸುಳ್ಳನ್ನು ಸತ್ಯ ಮಾಡುವುದರಲ್ಲಿ ನಿಸ್ಸೀಮರು ಎನ್ನುವುದು ಜಗತ್ತಿಗೆ ತಿಳಿದಿರುವ ಸಂಗತಿಯಾಗಿದೆ. ಮಹಿಳೆಯರಿಗೆ ಯಾವ ರೀತಿ ಗೌರವ ನೀಡಬೇಕು ಎನ್ನುವುದು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಅರಿತಿದ್ದು ಆಕೆಯ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಪಕ್ಷ ನಮ್ಮದು.

ರಾಜಕೀಯದಲ್ಲಿ 50% ಮಹಿಳಾ ಮೀಸಲಾತಿಯನ್ನು ನೀಡಲು ಸಂಸತ್ತಿನಲ್ಲಿ ವಿಧೇಯಕವನ್ನು ಪರಿಚಯಿಸಿದ್ದು ಹಿಂದಿನ ಯುಪಿಎ ಸರಕಾರ ಎನ್ನುವುದು ಬಿಜೆಪಿಗರು ಮೊದಲು ಅರಿಯಲಿ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು, ಮನೆಯ ಯಜಮಾನಿಗೆ 2000 ರೂಪಾಯಿ ಪ್ರತಿತಿಂಗಳೂ ನೀಡುವುದರ ಮೂಲಕ ಆರ್ಥಿಕ ಭದ್ರತೆಯನ್ನು ನೀಡಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಕೇವಲ ಬಾಯಿ ಮಾತಿನಲ್ಲಿ ಮಹಿಳೆಯರ ರಕ್ಷಣ ಎಂದು ಪುಂಗಿ ಉದದೇ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಅತೀ ಹೆಚ್ಚಿನ ಸೀಟು ನೀಡುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹೇಳಿಕೊಳ್ಳುವಂತಹ ಯಾವುದೇ ವಿಚಾರಗಳಿಲ್ಲದೆ ಒದ್ದಾಡುತ್ತಿದ್ದು ಇಂತಹ ಬಾಲಿಶ ಹೇಳಿಕೆಗಳನ್ನು ನೀಡಿಕೊಂಡು ಕಾಲ ಹರಣ ಮಾಡುತ್ತಿದೆ.

ಮಹಿಳೆಯರ ಬಗ್ಗೆ ಕಾಳಜಿ ಇರುವ ಇವರು ಕಳೆದ 10 ವರ್ಷಗಳಿಂದ ಸಂಸದರಾಗಿ ಪ್ರತಿನಿಧಿಸುತ್ತಿದ್ದ ಶೋಭಾ ಕರಂದ್ಲಾಜೆ ವಿರುದ್ದ ಅವರದ್ದೇ ಪಕ್ಷದವರು ಗೋ ಬ್ಯಾಕ್ ಎಂದಾಗ ರಸ್ತೆಗಿಳಿದು ಹೋರಾಟವನ್ನು ಮಾಡುವ ಧೈರ್ಯವನ್ನು ಯಾಕೆ ಬಿಜೆಪಿಯ ಮಹಿಳಾ ಸದಸ್ಯರು ತೋರಿಸಿಲ್ಲ. ಇದು 10 ವರ್ಷಗಳಿಂದ ಕ್ಷೇತ್ರದ ಪ್ರಾಮಾಣಿಕ ಸೇವೆ ಮಾಡಿದ್ದೇನೆ ಎಂದು ಹೇಳಿಕೊಂಡ ಮಹಿಳಾ ಸಂಸದೆಗೆ ಮಾಡಿದ ಅವಮಾನವಲ್ಲವೇ? ಇದು ಕೂಡ ಮಹಿಳಾ ವಿರೋಧಿ ವರ್ತನೆಯಲ್ಲವೇ?. ಮೊದಲು ತಮ್ಮ ಮನೆಯ ಬಟ್ಟಲಿನಲ್ಲಿ ಇರುವ ಹುಳುಕನ್ನು ಎತ್ತಿ ಬಳಿಕ ಬೇರೆಯವರ ಮನೆಯ ಬಟ್ಟಲಿನಲ್ಲಿ ಇಣುಕಿ ನೋಡಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love