ಮಹಿಳೆಯರ ವಿರುದ್ಧದ ದೌರ್ಜನ್ಯ ಖಂಡಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ

Spread the love

ಮಹಿಳೆಯರ ವಿರುದ್ಧದ ದೌರ್ಜನ್ಯ ಖಂಡಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ

ಸಂತೆಕಟ್ಟೆ: ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ವತಿಯಿಂದ ಮಹಿಳೆಯರ ವಿರುದ್ಧದ ದೌರ್ಜನ್ಯ ಖಂಡಿಸಿ ಸಂತೆಕಟ್ಟೆಯ ಮೌಂಟ್ ರೋಝರಿ ಚರ್ಚ್ ಸಮೀಪದ ಮೈದಾನದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಪನ್ಯಾಸಕಿ ಶಾರದ ಅವರು, ಮಹಿಳೆಯರನ್ನು ಸಮಾಜ ಯಾಕೆ ದುರ್ಬಲವೆಂದು ಹೇಳುತ್ತದೆ. ದೈಹಿಕವಾಗಿಯೂ ನಮ್ಮ ಪುರುಷರಷ್ಟೇ ಸಮಾನರು. ಯಾವ ಕಾರಣಕ್ಕೂ ನಾವು ಅಸಮಾನರು ಅಲ್ಲ. ನಾವು ಸಮಾನರಾಗಿ ಶಕ್ತಿಯುತರು ಎಂದರು.

ಅತ್ಯಾಚಾರಕ್ಕೆ ಜಾತಿಯಾಧರಿತ, ಧರ್ಮಾಧಾರಿತ ಹಾಗೂ ಪುರುಷಾಧಿಪತ್ಯದ ಮನಸ್ಥಿತಿಯೇ ಕಾರಣವಾಗಿದೆ. ಸಂತ್ರಸ್ಥರಿಗೆ ನ್ಯಾಯ ಸಿಗುವುದೇ ಜಾತಿ, ಧರ್ಮಧಾರಿತವಾಗಿ ಎಂಬ ವಾತಾವರಣ ಸೃಷ್ಟಿಯಾಗಿದೆ. ನ್ಯಾಯ ಎಲ್ಲರಿಗೂ ಸಮಾನವಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದರು.


ಹೆಣ್ಣುಮಕ್ಕಳು ಮೊಂಬತ್ತಿಗಳ ರೂಪಕವಾಗುವುದು ಬೇಡ. ಹೆಣ್ಣು ಮಕ್ಕಳಿಗೆ ಶಕ್ತಿಯಿದೆ. ನಮ್ಮ ಬಟ್ಟೆ ಸರಿಯಿಲ್ಲ, ನಡವಳಿಕೆ ಸರಿಯಿಲ್ಲ ಎನ್ನುವ ಮನಸ್ಥಿತಿ ವಿರುದ್ಧ ಮಾತನಾಡಬೇಕು. ಅವರನ್ನು ಸಮಾಜದಲ್ಲಿ ಸರಿಯಾದ ರೀತಿಯಲ್ಲಿ ಪ್ರಶ್ನಿಸುವಂತವರಾಗಿ ಬೆಳೆಸಬೇಕು ಎಂದು ಹೇಳಿದರು. ಹೆಣ್ಣು ಮಕ್ಕಳ ಪರ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರ ಒರ ಮಾತನಾಡುವವರನ್ನು ವ್ಯವಸ್ಥಿತವಾಗಿ ತುಳಿಯುವ ಪ್ರಯತ್ನ ನಡೆಯುತ್ತಿದೆ ಅದರ ಕುರಿತು ಮಾತನಾಡಬೇಕೆಂದು ಕರೆ ನೀಡಿದರು.

ಇನ್ನೋರ್ವ ಅತಿಥಿ ಡಾ.ಪಿ.ವಿ ಭಂಡಾರಿ ಮಾತನಾಡಿ, ” ಸರಕಾರ ಮಹಿಳೆಯರ ರಕ್ಷಣೆಯ ಜವಾಬ್ದಾರಿಯನ್ನು ಸೂಕ್ತವಾಗಿ ಮಾಡುತ್ತಿಲ್ಲ. ಕಾನೂನು ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾದ ಅವಶ್ಯಕತೆ ಇದೆ” ಎಂದು ಹೇಳಿದರು.

ಬಂಗಾಳ ಸರಕಾರವನ್ನೋ, ಕರ್ನಾಟಕ ಸರಕಾರವನ್ನೋ ದೂರಿ ಪ್ರಯೋಜನವಿಲ್ಲ. ಎಲ್ಲ ಸರಕಾರಗಳ ಸಮಾನವಾಗಿ ನಿಷ್ಕ್ರಿಯವಾಗಿದೆ.ಇದರಿಂದಾಗಿ ಪೊಲೀಸರಿಗೂ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಹಲವು ಪ್ರಕರಣದಲ್ಲಿ ಮಹಿಳೆಯರು ಪ್ರಕರಣ ದಾಖಲಿಸಲು ಹಿಂಜರಿಯಬೇಕಾದ ವಾತಾವರಣ ಸೃಷ್ಟಿಯಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

“ವೈದ್ಯರ ರಕ್ಷಣೆಗೆ ಸೂಕ್ತವಾದ ಕಾನೂನು ರಚಿಸುವಲ್ಲಿ ಸರಕಾರಗಳು ವಿಫಲವಾಗಿದೆ. ಸರಕಾರಗಳು ಈ ಕುರಿತು ಗಂಭೀರವಾಗಿ ಚಿಂತಿಸಬೇಕೆಂದು ಹೇಳಿದರು. ಇನ್ನು ಮಾಧ್ಯಮಗಳು ಸಂತ್ರಸ್ಥ ವಿವರಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಬಾರದು ಇದರಿಂದ ಸಂತ್ರಸ್ಥರಿಗೆ ಮತ್ತಷ್ಟು ಘಾಸಿಯಾಗುತ್ತದೆ. ಯಾವುದೇ ಕಾರಣಕ್ಕೂ ಇಂತಹ ಕೃತ್ಯವನ್ನು ಧರ್ಮಾಧರಿತವಾಗಿ ನೋಡಬಾರದು. ಎಲ್ಲ ಧರ್ಮ ಜಾತಿಗಳಲ್ಲೂ ಇಂತಹ ಜನರು ಇರುತ್ತಾರೆ ಎಂದು ಹೇಳಿದರು.

ಸುಂದರ್ ಮಾಸ್ತರ್ ಈ ಸಂದರ್ಭದಲ್ಲಿ ಮಾತನಾಡಿದರು. ಸಮೀರ್ ತೀರ್ಥಹಳ್ಳಿ ಪ್ರಸ್ತಾವಿಕವಾಗಿ ಮಾತನಾಡಿದರು.

ಸಭೆಯ ಆರಂಭದಲ್ಲಿ ಮೌಂಟ್ ರೋಝರಿ ಚರ್ಚ್ ನಿಂದ ಪ್ರತಿಭಟನಾ ಸ್ಥಳದ ವರೆಗೆ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ವೆರೋನಿಕಾ ಕರ್ನೆಲಿಯೋ,ಅಝೀಜ್ ಉದ್ಯಾವರ, ಝೀರ್ ನೇಜಾರು, ಸಾದೀಕ್ ಉಸ್ತಾದ್ ಹೂಡೆ, ಹುಸೇನ್ ಕೋಡಿಬೆಂಗ್ರೆ, ಫಾ.ವಿಲಿಯಮ್ ಮಾರ್ಟಿಸ್, ಸಂತೋಷ್ ಕರ್ನೆಲಿಯೋ,ಆಯಾನ್ ಮಲ್ಪೆ ಸೇರಿದಂತೆ ಹಲವಾರು ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು

ಅಲ್ವಿನ್ ದಾಂತಿ ನಿರೂಪಿಸಿದರು. ಗಾಡ್ವಿನ್ ಮಸ್ಕರೇನಸ್ ಧನ್ಯವಾದವಿತ್ತರು.


Spread the love
Subscribe
Notify of

0 Comments
Inline Feedbacks
View all comments