ಮಹಿಳೆ ತನ್ನ ಹಕ್ಕನ್ನು ಪಡೆಯುವತ್ತ ತನ್ನ ಹೋರಾಟವನ್ನು ರೂಪಿಸಬೇಕಾಗಿದೆ; ವಾಯ್ಲೆಟ್ ಪಿರೇರಾ
ಮಂಗಳೂರು: ಮಹಿಳೆ ಕೇವಲ ಅಡುಗೆ ಕೋಣೆಗೆ ಸೀಮಿತಗೊಳ್ಳದೆ ಆಕೆಯ ಹಕ್ಕನ್ನು ಪಡೆಯುವತ್ತ ತನ್ನ ಹೋರಾಟವನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಮ್ಯಾಂಗಲೋರಿಯನ್ ಡಾಟ್ ಕಾಂ ಇದರ ಮ್ಹಾಲಕರು ಹಾಗೂ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಇದರ ಸಂಸ್ಥಾಪಕಿ ಹಾಗೂ ಮ್ಯಾನೇಜಿಂಗ್ ಟ್ರಸ್ಟ್ ವಾಯ್ಲೆಟ್ ಪಿರೇರಾ ಅಭಿಪ್ರಾಯಪಟ್ಟಿದ್ದಾರೆ.
ಅವರು ಗುರುವಾರ ವಿಜಯ್ ಮಾರಿ ತಾಂತ್ರಿಕ ವಿದ್ಯಾಸಂಸ್ಥೆ ಮೇರಿಹಿಲ್ ಮಂಗಳೂರು ವತಿಯಿಂದ ಆಯೋಜಿಸಿದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಹಿಳೆ ಇಂದಿಗೂ ಕೆಲವೆಡೆ ಕೇವಲ ಅಡುಗೆ ಕೋಣೆಗೆ ಸೀಮಿತವಾಗಿದ್ದು, ಆಕೆಗೂ ಸ್ವಾತಂತ್ರ್ಯ ಸಾಮಾಜಿಕ ಜೀವನದ ಅಗತ್ಯವಿದೆ. ವಿಶ್ವದಾದ್ಯಂತ ಇಂದಿಗೂ ಮಹಿಳೆಯ ಮೇಲಿನ ದೌರ್ಜನ್ಯ ಹೆಚ್ಚುತ್ತಲಿದೆ ಆದ್ದರಿಂದ ಮಹಿಳೆಯರು ಇದನ್ನು ತಡೆಯಬೇಕಾದರೆ ಒಗ್ಗಟ್ಟಾಗುವ ಅಗತ್ಯವಿದೆ.
ತನ್ನ ಜೀವನದ ಕಥೆಯನ್ನು ವಿವರಿಸಿದ ವಾಯ್ಲೆಟ್ ಪಿರೇರಾ ವರ್ಷದ ಹಿಂದೆ ತಾನು ಪರಿವರ್ತನಾ ಚಾರಿಟೇಬಲ್ ಟ್ರಸ್ಟನ್ನು ಸಮಾಜದಿಂದ ತಿರಸ್ಕರಿಸಲ್ಪಟ್ಟ ಮಂಗಳಮುಖಿಯರಿಗೆ ಹೊಸ ಬದುಕನ್ನು ನೀಡುವ ಉದ್ದೇಶದಿಂದ ಮತ್ತು ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಸ್ಥಾಪಿಸಲಾಯಿತು. ಅದಕ್ಕಾಗಿ ಸಮಾಜದಿಂದ ಟೀಕೆಗಳನ್ನು, ಬೆದರಿಕೆಗಳನ್ನು ಸಾಮಾಜಿಕ ಜಾಲಾತಾಣ, ಅಂತರ್ಜಾಲ ಮಾಧ್ಯಮಗಳ ಮೂಲಕ ಎದುರಿಸಬೇಕಾಯಿತು. ಕೆಲವೊಂದು ವ್ಯಕ್ತಿಗಳು ಈ ಟ್ರಸ್ಟ್ ಹಣ ಮಾಡುವ ಉದ್ದೇಶದಿಂದ ಆರಂಭವಾಗಿದೆ ಎನ್ನುವ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರು. ಅವರುಗಳು ಟೀಕೆ ಮಾಡಲು ಪ್ರಮುಖ ಕಾರಣ ಇಂತಹ ಶೋಷಿತ ಮಂಗಳಮುಖಿಯರು ತಮ್ಮ ಚೇಲಾಗಳಿಗೆ ಹಣ ವಸೂಲಿ ಮಾಡಿ ನೀಡುತ್ತಿರುವುದು ನಿಲ್ಲಿಸಿ, ಮಂಗಳಮುಖಿಯರಿಗೆ ಉತ್ತಮ ಬದುಕು ನೀಡಿದ್ದರಿಂದ ಚೇಲಾಗಳಿಗೆ ಬರುವ ಹಣ ನಿಂತಿತು. ಟ್ರಸ್ಟಿನ ಸದಸ್ಯರಾದ ಮಂಗಳಮುಖಿಯರು ಇಂದು ಬ್ಯೂಟಿಶಿಯನ್, ಟೈಲರಿಂಗ್ ಕೋರ್ಸ್ ಮಾಡುವ ಮೂಲಕ ಸಮಾಜದಲ್ಲಿ ಸ್ವಾಭಿಮಾನಿಗಳಾಗಿ ಬದುಕುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದುವರೆಗೆ ಆಧಾರ್ ಕಾರ್ಡ್, ಭ್ಯಾಂಕ್ ಖಾತೆ ಪಡೆಯದವರು ಟ್ರಸ್ಟ್ ಮೂಲಕ ಪಡೆಯುವಂತಾಯಿತು. ಮಂಗಳ ಮುಖಿಯರು ಕೂಡ ಮನುಷ್ಯರು ಅವರಿಗೂ ಕೂಡ ಬದುಕುವ ಹಕ್ಕಿದೆ. ಇದೇ ಮಾರ್ಚ್ 12ನ್ನು ಮಂಗಳಮುಖಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ.
ದೇಶದ ಜನಸಂಖ್ಯೆ 50% ಜನಸಂಖ್ಯೆಯನ್ನು ಹೊಂದಿರುವ ಮಹಿಳೆಗೆ ಇಂದಿಗೂ ಕೂಡ ಅವರ ಶಿಕ್ಷಣ, ವಾಕ್ ಸ್ವಾತಂತ್ರ್ಯ, ಮತದಾನದ ಹಕ್ಕನ್ನು ಕೂಡ ಕಸಿಯುವಂತಹ ಕೆಲಸ ನಡೆಯುತ್ತಿದೆ. ಮಹಿಳೆಯರ ವಿರುದ್ದ ವಿವಿಧ ರೀತಿಯ ಶೋಷಣೆಗಳು ನಡೆಯುತ್ತಿದ್ದು ಮಹಿಳೆಯರ ಸಶಕ್ತಿರಣ ಎನ್ನುವುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಸಮಾಜ ಮಹಿಳೆಯನ್ನು ಕೂಡ ಒರ್ವ ಸಶಕ್ತ ವ್ಯಕ್ತಿ ಎನ್ನುವ ರೀತಿಯ ಮನೋಸ್ಥಿತಿ ಬೆಳೆದು ಬರಬೇಕಾಗಿದೆ. ಮಹಿಳೆಯರೂ ಕೂಡ ತಮ್ಮ ಹಕ್ಕುಗಳಿಗೆ ಹೋರಾಡುವುದರ ಜೊತೆಗೆ ಪುರುಷನಷ್ಟೇ ಸಮಾಜ ಸ್ಥಾನಕ್ಕಾಗಿ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಟಿವಿ/ರೇಡಿಯೋ ನಿರೂಪಕಿ ಸೌಜನ್ಯ ಹೆಗ್ಡೆ, ಸಿಸ್ಟರ್ ಪ್ರೇಮಿಕಾ, ಸಿಸ್ಟರ್ ಆಶಾ, ಸಿಸ್ಟರ್ ವಿಜಯ, ಸಿಸ್ಟರ್ ಮರಿಯಾ ಜ್ಯೋತಿ ಹಾಗೂ ಇತರರು ಉಪಸ್ಥಿತರಿದ್ದರು.