ಮಾ.4: ಪೊಳಲಿಬ್ರಹ್ಮಕಲಶೋತ್ಸವ ಆರಂಭ; ನಾನಾ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು
ಪೊಳಲಿ: ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಇಂದಿನಿಂದ(ಮಾ.4) ಬ್ರಹ್ಮಕಲಶೋತ್ಸವ ಆರಂಭಗೊಳ್ಳಲಿದೆ.
ಬೆಳಿಗ್ಗೆ 8.30ರಿಂದ ಆಚಾರ್ಯಾದಿ ಋತ್ವಿಜರ ಸ್ವಾಗತ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಹವಾಚನ, ನಾಂದಿ, ಋತಿಗ್ವರಣ, ಕಂಕಣಬಂಧ, ಆದ್ಯಗಣಯಾಗ, ವೇದ ಪಾರಾಯಣ ಆರಂಭಗೊಳ್ಳಲಿದೆ. ಸಾಯಂಕಾಲ 5 ರಿಂದ ಪ್ರಾದಾದಪರಿಗ್ರಹ, ಪುಣ್ಯಾಹವಾಚನ, ತೋರಣ ಮಹೂರ್ತ, ಉಗ್ರಾಣ ಮಹೂರ್ತ, ಸಪ್ತಶುದ್ಧಿ, ಪ್ರಾಸಾದಶುದ್ಧಿ, ರಾಕ್ಷೊಘ್ನಹೋಮ, ವಾಸ್ತುಪೂಜೆ, ವಾಸ್ತುಹೋಮ, ಕಲಶಾಭಿಷೇಕ ಹಾಗು ಮಹಾಪೂಜೆ ನಡೆಯಲಿದೆ. ಸಂಜೆ 6ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಂಪುಟ ಶ್ರೀ ನರಸಿಂಹ ಮಠ ಸುಬ್ರಹ್ಮಣ್ಯ ಇಲ್ಲಿನ ಶ್ರೀವಿದ್ಯಾಪ್ರಸನ್ನ ತೀರ್ಥಸ್ವಾಮೀಜಿ ಆಶೀರ್ವಚನ-ಉಗ್ರಾಣ ಮಹೂರ್ತ ನೆರವೇರಿಸಲಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ವೇದಿಕೆ ಹಾಗೂ ಶ್ರೀರಾಜರಾಜೇಶ್ವರಿ ವೇದಿಕೆ ಎಂಬ ಎರಡು ಪ್ರಾಂಗಣ ನಿರ್ಮಿಸಲಾಗಿದ್ದು ಎರಡೂ ಪ್ರಾಂಗಣಗಳಲ್ಲಿ ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. ಶ್ರೀರಾಜರಾಜೇಶ್ವರಿ ವೇದಿಕೆ ಚೆಂಡಿನ ಗದ್ದೆಯನ್ನು ವ್ಯಾಪಿಸಿದೆ.ಇದರ ಪಕ್ಕದಲ್ಲಿ ಪಾಕಶಾಲೆ ನಿರ್ಮಿಸಲಾಗಿದ್ದು, ಇದರ ಸಮೀಪ ಸಾವಿರಾರು ಏಕಕಾಲದಲ್ಲಿ ಭೊಜನ ಸವಿಯಲು ವ್ಯವಸ್ಥೆಗೊಳಿಸಲಾಗಿದೆ. ಸಾವಿರಾರು ಮಂದಿ ಸ್ವಯಂಸೇವಕರು ಈಗಾಗಲೇ ನೋಂದಾಯಿಸಿಕೊಂಡಿದ್ದು, ಆಯಾಯ ದಿನಗಳಲ್ಲಿ ಕಾರ್ಯನಿರ್ವಹಿಸಲು ಜವಾಬ್ದಾರಿ ವಹಿಸಲಾಗಿದೆ. ಒಟ್ಟು ಹತ್ತು ದಿನಗಳ ಕಾಲ ಯಾವುದೇ ಅಡಚಣೆಯಾಗದಂತೆ ಕಾರ್ಯಕ್ರಮ ನಡೆಸಲು ಪೊಳಲಿಯನ್ನು ಸಂಪೂರ್ಣ ಸಜ್ಜುಗೊಳಿಸಲಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಡಾ| ಎಂ. ಮೋಹನ್ ಆಳ್ವ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು, ಹೆಸರಾಂತ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಶ್ರೀ ದುರ್ಗಾ ಪರಮೇಶ್ವರಿ ವೇದಿಕೆ:
ಈ ವೇದಿಕೆಯಲ್ಲಿ ಬೆಳಿಗ್ಗೆ 8.30ರಿಂದ ಪೊಳಲಿ ಚಂದ್ರಶೇಖರ ದೇವಾಡಿಗ ಪೊಳಲಿ ಬಳಗದಿಂದ ಸ್ಯಾಕ್ಸೊಫೋನ್ ವಾದನ, 9.30ರಿಂದ ರಾಜರಾಜೇಶ್ವರಿ ಭಜನಾ ಮಂಡಳಿ ಪೊಳಲಿ ಮಾತೃವಿಭಾಗದಿಂದ ಹಾಗು 10.30ರಿಂದ ಶ್ರೀ ಬಾಲ ವಿಠೋಭ ಭಜನಾ ಮಂಡಳಿ ಪಲ್ಲಿಪಾಡಿ ತಂಡದಿಂದ ಭಜನೆ ಕಾರ್ಯಕ್ರಮ ಜರುಗಲಿದೆ. ಸಂಜೆ 4ರಿಂದ ಶ್ರೀದೇವ್ದಾಸ್ ಪ್ರಭು ಮತ್ತು ಬಳಗ ಬಂಟ್ವಾಳದಿಂದ ಭಜನೆ ನಡೆಯಲಿದೆ.
ಶ್ರೀ ರಾಜರಾಜೇಶ್ವರಿ ವೇದಿಕೆ:
ಈ ವೇದಿಕೆಯಲ್ಲಿ 11.30ರಿಂದ ಕು|ಶಾರದ ಹಾಗು ಕು| ಪಂಚಮಿ ಶೃಂಗೇರಿಯವರಿಂದ ಭಕ್ತಿಗೀತೆ, 12.30ರಿಂದ ಬೆದ್ರ ಕಲಾವಿದರಿಂದ ಹಾಸ್ಯ ಕಾರ್ಯಕ್ರಮ, ಮಧ್ಯಾಹ್ 1ರಿಂದ ಗೋಪಾಲ್ ಮೌದ್ಗಲ್ ಅವರಿಂದ ವೀಣೆ, 1.35ರಿಂದ ಕು| ಕಸ್ತೂರಿ ಅವರಿಂದ ಸುಗಮ ಸಂಗೀತ, 2.30ರಿಂದ ಭಾರ್ಘವಿ ಉಡುಪಿ ಅವರಿಂದ ಭಾವ-ಯೋಗ-ನೃತ್ಯ ಕಾರ್ಯಕ್ರಮ ಜರುಗಲಿದೆ. ಸಂಜೆ 7ರಿಂದ ಆಳ್ವಾಸ್ ಪ್ರತಿಷ್ಠಾನದ 350 ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಜರುಗಲಿದೆ.