ಮಾಜಿ ಸಚಿವ ಎಮ್ ಬಿ ಪಾಟೀಲ್, ಜಮೀರ್ ಅವರಿಂದ ಪೇಜಾವರ ಸ್ವಾಮೀಜಿ ಆರೋಗ್ಯ ವಿಚಾರಣೆ
ಉಡುಪಿ: ಶ್ವಾಸಕೋಶ ತೊಂದರೆ, ನ್ಯುಮೋನಿಯಾ ಸಮಸ್ಯೆಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಉಡುಪಿ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಲು ಮಾಜಿ ಸಚಿವರಾದ ಎಮ್ ಬಿ ಪಾಟೀಲ್ ಮತ್ತು ಜಮೀರ್ ಅಹ್ಮದ್ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದರು.
ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಎಮ್ ಬಿ ಪಾಟೀಲ್ ಸ್ವಾಮೀಜಿಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದು, ಅವರ ಶ್ವಾಸಕೋಶ ಸರಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ. ಶ್ರೀಗಳು ನೂರು ವರ್ಷ ಬಾಳಬೇಕು ಎನ್ನುವುದು ಕಾಂಗ್ರೆಸ್ ನಾಯಕರ ಪ್ರಾರ್ಥನೆಯಾಗಿದೆ. ದೇಶಕ್ಕೆ ಅವರ ಸೇವೆ ಅನನ್ಯವಾದದ್ದು, ಅವರ ಮಾರ್ಗದರ್ಶನ ದೇಶ ಮತ್ತು ಸಮಾಜಕ್ಕೆ ಅಗತ್ಯವಾಗಿದೆ ಎಂದರು.
ನಾನು ಬಹಳಷ್ಟು ಸಲ ಸ್ವಾಮೀಜಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಅವರಿಗೆ ಭಗವದ್ಗೀತೆ ಕೊಟ್ಟಿದ್ದೇನೆ. ನಮ್ಮ ನಡುವೆ ವೈಚಾರಿಕ ಭಿನ್ನಾಭಿಪ್ರಾಯ ಇತ್ತು ಆದರೂ ನಾವು ಒಟ್ಟು ಒಂದು ಅಭಿಪ್ರಾಯಕ್ಕೆ ಬಂದಿದ್ದೆವು ಬಸವಣ್ಣನಲ್ಲಿ ಶ್ರೀಗಳಿಗಾಗಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಜಮೀರ್ ಅಹ್ಮದ್ ಪೇಜಾವರ ಶ್ರೀಗಳ ಆರೋಗ್ಯವನ್ನು ವಿಚಾರಿಸಿದ್ದು ಶ್ರೀಗಳು ಶೀಘ್ರ ಗುಣಮುಖವಾಗಲಿ ಎನ್ನುವುದು ನಮ್ಮ ಹಾರೈಕೆ. ನಮಗೂ ಶ್ರೀಗಳಿಗೂ ನೇರ ಸಂಬಂಧವಿದ್ದು, ಬೆಂಗಳೂರು ರಾಘವೇಂದ್ರ ಮಠ ನಮ್ಮಕ್ಷೇತ್ರದಲ್ಲೇ ಇದೆ. ವರ್ಷಕ್ಕೊಮ್ಮೆ ನಾನು ಪೇಜಾವರಶ್ರೀ ಭೇಟಿ ಮಾಡುತ್ತೇವೆ ನನ್ನನ್ನು ಪೇಜಾವರಶ್ರೀಗಳೇ ಮಠಕ್ಕೆ ಕರೆಸುತ್ತಾರೆ ಎಂದರು.
ಈ ವೇಳೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಕಾಂಗ್ರೆಸ್ ನಾಯಕರಾದ ಜಿ ಎ ಬಾವಾ, ಎಮ್ ಎ ಗಫೂರ್, ಹಾಗೂ ಇತರರು ಉಪಸ್ಥಿತರಿದ್ದರು.