ಮಾತೃಭಾಷೆ-ಮಾನವ ಸಂಬಂಧಕ್ಕೆ ಬಲ – ಡಾ. ಮಾಧವ ಎಂ ಕೆ
ಮಂಗಳೂರು: ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದರಿಂದ ಮತ್ತು ಮಾತೃಭಾಷೆಗಳಲ್ಲಿ ವ್ಯವಹರಿಸುವುದರಿಂದ ಮನುಷ್ಯ ಮನುಷ್ಯರನ್ನು ಹತ್ತಿರವಾಗಿಸಿ ಮಾನವ ಸಂಬಂಧಗಳು ಬಲಗೊಳ್ಳುತ್ತವೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಮತ್ತು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ. ಕೆ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ಫೆಬ್ರವರಿ 20 ರಂದು ಆಯೋಜಿಸಲಾಗಿದ್ದ ಮಾತೃಭಾಷಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು ಬ್ರಿಟಿಷರು ಭಾರತೀಯರನ್ನು ತಮ್ಮ ಆಂಗ್ಲಭಾಷೆಯ ಪಾಶ್ಚಿಮಾತ್ಯ ಶಿಕ್ಷಣದ ಮೂಲಕ ನಮ್ಮನ್ನು ದಾಸ್ಯದ ಸಂಕೋಲೆಯಲ್ಲಿ ಬಂಧಿಸಿದರು. ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯಿಂದ ನಾವು ನಮ್ಮ ಸ್ವಾಭಿಮಾನವನ್ನು ಕಳೆದುಕೊಂಡಿದ್ದೇವೆ. ಇದರಿಂದ ನಾವು ಇನ್ನೂ ಹೊರಬರಲಾಗಿಲ್ಲ. ಇಂದಿಗೂ ನಾವು ಇಂಗ್ಲೀಷ್ ಭಾಷೆ ತಿಳಿಯದಿದ್ದರೆ ಜೀವನದಲ್ಲಿ ಯಾವ ಸಾಧನೆಯನ್ನೂ ಮಾಡಲಾಗುವುದಿಲ್ಲ ಎಂದು ಭಾವಿಸಿದ್ದೇವೆ. ಇದೊಂದು ತಪ್ಪು ತಿಳುವಳಿಕೆಯಾಗಿದ್ದು ಮಾಜಿ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ, ವಿಶ್ವೇಶ್ವರಯ್ಯನಂತಹವರು ತಮ್ಮ ಮಾತೃಭಾಷೆಯಲ್ಲಿಯೇ ಶಿಕ್ಷಣವನ್ನು ಪಡೆದುಕೊಂಡು ಸಾಧನೆ ಮಾಡಿದವರು. ನಾವು ಇಂತಹ ಸಾಧಕರಿಂದ ಪ್ರೇರಣೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಶಿಕ್ಷಣ ಮಾತೃಭಾಷೆಯಲ್ಲಿಯೇ ದೊರೆಯಬೇಕು. ಆಂಗ್ಲ ಮಾಧ್ಯಮದಲ್ಲಿ ಕಲಿಯುವ ಮಗು ಒಂದೆಡೆಯಲ್ಲಿ ವಿಷಯವನ್ನು ಕಲಿಯಬೆಕು ಅದರ ಜೊತೆಗೆ ಭಾಷೆಯನ್ನು ಕಲಿಯಬೇಕು ಎಂಬ ಒತ್ತಡದಲ್ಲಿ ಶಿಕ್ಷಣ ಪಡೆಯುತ್ತಿರುತ್ತದೆ. ಇದರಿಂದಾಗಿ ಆ ಮಗುವಿನ ಶಿಕ್ಷಣ ನಾಶವಾಗುತ್ತದೆ, ಮಕ್ಕಳ ಸ್ವಂತ ಆಲೋಚನಾ ಶಕ್ತಿ ನಾಶವಾಗುತ್ತದೆ ಆದುದರಿಂದ ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರಕುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಬಿ ಎಂ ಮಾತನಾಡಿ, ಮಾನವನ ಸರ್ವಾಂಗೀಣ ಬೆಳವಣಿಗೆಗೆ ಮಾತೃಭಾಷೆ ಸಹಕಾರಿಯಾಗಿದೆ, ಯಾರೂ ಕೂಡ ತಮ್ಮ ಮಾತೃಭಾಷೆಯನ್ನು ಕೀಳಾಗಿ ಭಾವಿಸದೆ ಮಾತೃಭಾಷೆಯ ಕುರಿತಾದ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಪರಸ್ಪರ ತಮ್ಮ ಮಾತೃಭಾಷೆಯಲ್ಲಿಯೇ ಸಂವಹನ ಮಾಡುವುದರ ಮೂಲಕ ತಮ್ಮ ಮಾತೃಭಾಷೆಯ ಉಳಿವಿಗಾಗಿ ತಮ್ಮ ಕೊಡುಗೆಗಳನ್ನು ನೀಡಬೇಕು ಎಂದು ತಿಳಿಸಿದರು.
ಮಾತೃಭಾಷಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಾದ ವಿನಾಯಕ್ ಅನಂತ ಶೇಟ್ ಅತಿಥಿಗಳನ್ನು ಸ್ವಾಗತಿಸಿ ನಿತಿನ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಸೌಜನ್ಯಾ ವಂದನಾರ್ಪಣೆಗೈದರು. ಕುಮಾರಿ ಅಥಿರಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಉಪನ್ಯಾಸಕ ವರ್ಗದವರು ಭಾಗವಹಿಸಿದ್ದರು.