ಮಾದಕ ವ್ಯಸನ ಮುಕ್ತ ಜಾಗೃತಿಗಾಗಿ ಓಟ; 2.5 ಸಾವಿರಕ್ಕೂ ಅಧಿಕ ಮಂದಿ ಭಾಗಿ

Spread the love

ಮಾದಕ ವ್ಯಸನ ಮುಕ್ತ ಜಾಗೃತಿಗಾಗಿ ಓಟ; 2.5 ಸಾವಿರಕ್ಕೂ ಅಧಿಕ ಮಂದಿ ಭಾಗಿ

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಜಿಲ್ಲಾ ಪ್ರೆಸ್ ಕ್ಲಬ್ ಆಯೋಜಿಸಿದ ಮಾದಕ ವ್ಯಸನ ವಿರೋಧಿ ಮಾಸಾಚರಣೆಯ ಪ್ರಯುಕ್ತ ಮಣಿಪಾಲ ವಿಶ್ವವಿದ್ಯಾನಿಲಯದ ಪ್ರಾಯೋಜಕತ್ವದಲ್ಲಿ ಭಾನುವಾರ ಮಣಿಪಾಲದಲ್ಲಿ ಆಯೋಜಿಸಿದ 5 ಕಿಮಿಗಳ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನ ಜಾಗೃತಿ ಓಟದಲ್ಲಿ 2500 ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು.

ಸಣ್ಣ ಸಣ್ಣ ಮಕ್ಕಳಿಂದ ಹಿಡಿದು, ವಯೋವೃದ್ಧರವರೆಗಿನವರು ಓಟದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು, ಉದ್ಯೋಗಿಗಳು, ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಎಲ್ಲರೂ ಓಟದಲ್ಲಿದ್ದರು.

ಮಾಹೆ ವಿಶ್ವವಿದ್ಯಾಲಯದ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಮಾಹೆ ವಿವಿಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹಾಗೂ ಇತರ ಗಣ್ಯರು ಹಸಿರು ನಿಶಾನೆ ತೋರಿದರು. ಅಲ್ಲಿಂದ ಆರಂಭವಾದ ಜಾಗೃತಿ ಒಟ ಎಮ್ ಕೋಪ್ಸ್, ಉಪೇಂದ್ರ ಪೈ ಸರ್ಕಲ್, ಸಿಂಡಿಕೇಟ್ ಸರ್ಕಲ್, ವೇಣುಗೋಪಾಲ ದೇವಸ್ಥಾನ, ಎಮ್ ಐಟಿ ಈಜು ಕೊಳ, ಎಮ್ ಐ ಟಿ, ಕಾಮತ್ ಕೆಫೆ, ಟೈಗರ್ ಸರ್ಕಲ್ ಮೂಲಕ ಮಣಿಪಾಲ್ ಎಜ್ಯು ಕಟ್ಟಡದ ಬಳಿ ಸಮಾಪನಗೊಂಡಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಹೆ ವಿವಿಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ನಮ್ಮ ದೇಶದ ಮುಂದಿನ ಭವಿಷ್ಯವಾಗಿರುವ ಯುವಜನತೆ ಮಾದಕ ವ್ಯಸನದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿತುಕೊಳ್ಳಬೇಕು ಎನ್ನುವ ಉದ್ದೇಶದಿಂದ ಜಾಗೃತಿ ನಡಿಗೆಯನ್ನು ಆಯೋಜಿಸಿದ್ದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಅಭಿಮಾನದ ಸಂಗತಿಯಾಗಿದೆ. ವ್ಯಸನಮುಕ್ತ ಸಮಾಜ ನಿರ್ಮಾಣದತ್ತ ಮಣಿಪಾಲ ಸಂಸ್ಥೆಗಳು ಸದಾ ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದು ಮುಂದೆಯೂ ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ಸಹಕಾರ ನೀಡಲಿದೆ ಎಂದರು.

ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ ಮಾತನಾಡಿ, ಭಾರತ ಅತೀ ಹೆಚ್ಚು ಯುವಜನರನ್ನು ಹೊಂದಿದ ದೇಶವಾಗಿದ್ದು, ಇ ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಭವಿಷ್ಯ ಯುವಜನರ ಮೇಲೆ ಆಗಿರುವುದರಿಂದ ಅವರಿಗೆ ಸೂಕ್ತ ಸಮಯದಲ್ಲಿ ಸರಿಯಾದ ದಾರಿಯಲ್ಲಿ ಸಾಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಮಾದಕ ವ್ಯಸನ ಮುಕ್ತ ಅಭಿಯಾನಕ್ಕೆ ಜಿಲ್ಲೆಯಲ್ಲಿ ಕಳೆದ 2 ತಿಂಗಳಿನಿಂದ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮಾದಕ ವ್ಯಸನವನ್ನು ಪೊಲೀಸರು ಕೇವಲ ಶಿಕ್ಷೆ ನೀಡುವುದರ ಮೂಲಕ ತಡೆಗಟ್ಟಬಹುದು ಎಂಬ ಭಾವನೆ ಹಲವರಲ್ಲಿದೆ. ಕೇವಲ ಪೊಲೀಸ್ ಅಥವಾ ಕಾನೂನಿನಿಂದ ಇದು ಸಾಧ್ಯವಾಗದೇ ಇರುವಾಗ ಜನಜಾಗೃತಿ ಮೂಡಿಸುವುದು ಅಗತ್ಯವಾಗುತ್ತದೆ. ಈ ಮೂಲಕ ಒಂದು ಉತ್ತಮ ಸಂದೇಶವನ್ನು ನೀಡಲು ಇಂತಹ ಜಾಗೃತಿ ಕಾರ್ಯಕ್ರಮ ಸಹಕಾರಿಯಾಗುತ್ತದೆ.ಪ್ರಮುಖವಾಗಿ ಮಾದಕ ವಸ್ತುಗಳನ್ನು ಪೂರೈಕೆ ಮಾಡುವವರಿಗಿಂತಲೂ, ಸೇವಿಸುವುದನ್ನು ತಡೆಗಟ್ಟಲು ಜನಜಾಗೃತಿ ಮಾಡುವುದು ಅತ್ಯಂತ ಆವಶ್ಯಕವಾಗಿದೆ. ಈ ಮೂಲಕ ಬೇಡಿಕೆ ನಿಲ್ಲಿಸಿ, ಈ ಪಿಡುಗುಮುಕ್ತ ಸಮಾಜ ನಿರ್ಮಾಣದ ಗುರಿ ಹೊಂದಲಾಗಿದೆ ಎಂದರು.

ಮ್ಯಾರಾಥಾನ್ ಓಟದಲ್ಲಿ ಭಾಗವಹಿಸಿದ ಪೊಲೀಸ್ ಅದಿಕಾರಿಗಳು
ಸದಾ ಬಂದೋಬಸ್ತು, ಸ್ಟೇಶನ್ ಎಂಬ ಗುಂಗಿನಲ್ಲಿ ಜಿಲ್ಲಾ ಎಸ್ಪಿ ಲಕ್ಷ್ಮಣ್ ನಿಂಬರಗಿ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಡಿವೈಎಸ್ಪಿಗಳಾದ ಕುಮಾರಸ್ವಾಮಿ, ಬೆಳ್ಳಿಯಪ್ಪ, ದಿನೇಶ್ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಖಾಖಿ ಸಮವಸ್ತ್ರ ಕಳಚಿಟ್ಟು ಕ್ರೀಡಾ ಧಿರಿಸು ಧರಿಸಿ ಓಟದಲ್ಲಿ ಪಾಲ್ಗೊಂಡರು. ಎಸ್ಪಿ, ಎಎಸ್ಪಿ, ಡಿವೈಎಸ್ಪಿ, ಸಿಪಿಐ, ಪಿಎಸ್ಐ, ಎಎಸ್ಐಗಳು ಹಾಗೂ ಸಿಬ್ಬಂದಿ ಸೇರಿ 100 ಕ್ಕೂ ಅಧಿಕ ಮಂದಿ ಇತರ ವಿದ್ಯಾರ್ಥಿಗಳೊಂದಿಗೆ ಮ್ಯಾರಾಥಾನ್ ಓಟದಲ್ಲಿ ಭಾಗವಹಿಸಿದ್ದರು.

ಸಿಂಡಿಕೇಟ್ ಬ್ಯಾಂಕ್ ಇದರ ಜನರಲ್ ಮ್ಯಾನೇಜರ್, ಹೆಚ್. ಬಾಸ್ಕರ ಹಂದೆ, ಡೆಪ್ಯುಟಿ ಜೋನಲ್ ಮೆನೆಜರ್ ಬಿ ಆರ್ ಹಿರೇಮಠ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಪ್ರೆಸ್ ಕ್ಲಬ್ ಸಂಚಾಲಕ ನಾಗರಾಜ ರಾವ್, ಕೆಎಮ್ ಸಿ ಪ್ರಾಧ್ಯಾಪಕ ಡಾ ವಿನೋದ್ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love