ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಹೊಣೆಯಾಗಿದೆ: ಉಡುಪಿ ಎಸ್ಪಿ ಲಕ್ಷಣ್ ನಿಂಬರಗಿ

Spread the love

ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪ್ರತಿಯೊಬ್ಬರ ಹೊಣೆಯಾಗಿದೆ: ಉಡುಪಿ ಎಸ್ಪಿ ಲಕ್ಷಣ್ ನಿಂಬರಗಿ

ಉಡುಪಿ: ಮಾದಕ ವ್ಯಸನ ತಡೆಗಟ್ಟಲು ಸಮಾಜದ ವಿವಿಧ ಸ್ತರಗಳ ಜನರು ಇದೊಂದು ಸಾಮಾಜಿಕ ಹೊಣೆಗಾರಿಕೆಯೆಂದು ಭಾವಿಸಿ ಒಂದಾಗಿ ಕೈ ಜೋಡಿಸಿದಾಗ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಿಸುವತ್ತ ಯಶಸ್ಸುಗಳಿಸಲು ಸಾಧ್ಯವಿದೆ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರಗಿ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿ ಶೈಕ್ಷಣಿಕ ಕೇಂದ್ರಗಳಿಗೆ ಹೆಸರುವಾಸಿಯಾಗಿದ್ದು ಬೇರೆ ಬೇರೆ ರಾಜ್ಯ ಹಾಗೂ ದೇಶಗಳಿಂದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎರಡು ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲಾ ಪೋಲಿಸ್, ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿಕೊಂಡು ಬಂದಿದ್ದು. ಈ ಎಲ್ಲಾ ಕಾರ್ಯಕ್ರಮಗಳ ಮುಖ್ಯ ರೂವಾರಿ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರಗಿ ಅವರು ಎರಡು ತಿಂಗಳ ಮಾಸಾಚರಣೆಯ ಉದ್ದೇಶ, ಮಾದಕ ವ್ಯಸನದಿಂದ ಸಮಾಜದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಮ್ಯಾಂಗಲೋರಿಯನ್ ಡಾಟ್ ಕಾಮ್ (Mangalorean.com) ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಮಾದಕ ವ್ಯಸನ ಎನ್ನುವುದು ಒಂದು ಸಮಸ್ಯೆ ಎನ್ನುವುದನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಬೇಕಾಗಿದೆ. ಅದನ್ನು ಸಮಸ್ಯೆ ಎನ್ನುವುದನ್ನು ಅರಿತು ಅದರ ದುಷ್ಪರಿಣಾಮದ ವಿರುದ್ದ ಕೆಲಸ ಮಾಡಿದಾಗ ನಮ್ಮ ಯುವಶಕ್ತಿ ಉತ್ತಮ ದಾರಿಯತ್ತ ಸಾಗಲು ಸಾಧ್ಯವಿದೆ. ಸಮಾಜದಲ್ಲಿ ಮಾದಕ ವ್ಯಸನಕ್ಕೆ ಮಕ್ಕಳು, ಯುವಕರು ತುತ್ತಾಗದಂತೆ ಇರಬೇಕಾದರೆ ಪೋಷಕರು, ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು ಸಮಾಜದಲ್ಲಿ ನಾಗರಿಕರು ಹೆಚ್ಚಿನ ಪಾತ್ರ ವಹಿಸಬೇಕಾಗುತ್ತದೆ. ಕಾನೂನಿನ ಮೂಲಕ ಒಂದು ಕಡೆಯಿಂದ ಇದರ ನಿರ್ಮೂಲನೆ ಸಂಪೂರ್ಣವಾಗಿ ಆಗುವುದು ಅಸಾಧ್ಯ. ವಿದ್ಯಾರ್ಥಿಗಳಿಗೆ ಅವರ ಮಾನಸಿಕ, ದೈಹಿಕ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕಾಗುತ್ತದೆ. ಅವರ ಬದುಕಿನಲ್ಲಿ ಸೋಲು, ವೈಫಲ್ಯದ ಸಂದರ್ಭದಲ್ಲಿ ಅವರ ಮೇಲಿನ ಒತ್ತಡ ನಿವಾರಣೆಗೆ ಸೂಕ್ತ ಮಾರ್ಗದರ್ಶನ ನೀಡು ಕೆಲಸ ಆಗಬೇಕಾಗಿದೆ. ಸಮಾಜದಲ್ಲಿ ಮಾದಕ ವ್ಯಸನ ಹೋಗಲಾಡಿಸುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಬೇಕಾಗಿದೆ.

ಮಾದಕ ವ್ಯಸನ ವಿರೋಧಿ ಮಾಸಾಚಾರಣೆ ಯಾವ ಕಾರಣಕ್ಕೆ ಅಗತ್ಯ ಎನ್ನುವುದು ಚಿಂತಿಸುವ ಅಗತ್ಯ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ಭಾರತ ಒಂದು ಸಂಪತ್ಭರಿತ ರಾಷ್ಟ್ರವಾಗಿದ್ದು ಆ ರಾಷ್ಟ್ರದ ಯುವಶಕ್ತಿಯನ್ನು ಸರಿಯಾದ ದಾರಿಯಲ್ಲಿ ಉಪಯೋಗಿಸುವ ಅಗತ್ಯವಿದೆ. ನಮ್ಮ ದೇಶ ಯುವ ಶಕ್ತಿಯ ದೇಶವಾಗಿದ್ದು 60% ಜನಸಂಖ್ಯೆ ಯುವಜನರಿಂದ ಕೂಡಿದೆ. ದೇಶದ ಆರ್ಥಿಕ, ಸಾಮಾಜಿಕ ಬೆಳವಣಿಗೆ ಯುವಶಕ್ತಿಯ ಮೇಲೆ ಹೊಂದಿಕೊಂಡಿದೆ. ನಮ್ಮ ದೇಶದ ಮೇಲೆ ಯಾವುದೇ ಬೇರೆ ರಾಷ್ಟ್ರ ಧಾಳಿ ಮಾಡಿದಲ್ಲಿ ಅದನ್ನು ಎದುರಿಸಲು ಬೇಕಾದ ಸೈನ್ಯದ ಬಲವಿದೆ. ಆದರೆ ಕಣ್ಣಿಗೆ ಕಾಣದೆ ನಮ್ಮ ದೇಶದ ಯುವಜನತೆಯ ಮೇಲೆ ಗುಪ್ತವಾಗಿ ಧಾಳಿ ಮಾಡುತ್ತಿರುವುದು ಮಾದಕ ವ್ಯಸನಗಳು. ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತರಾಗಿ ಸ್ವಯಂ ನಿಯಂತ್ರಣದಿಂದ ಮಾತ್ರ ಈ ವ್ಯಸನದಿಂದ ಮುಕ್ತವಾಗಬಹುದು.

ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ ನಿಂಬರಗಿ ಅವರ ಸಂದರ್ಶನದ ಪೂರ್ಣ ವಿವರಕ್ಕಾಗಿ ವೀಡಿಯೋ ವೀಕ್ಷಿಸಿ.


Spread the love