ಮೀನು ಸಂಸ್ಕರಣ ಘಟಕದಲ್ಲಿ ಅಮೋನಿಯಾ ಸೋರಿಕೆ ; ಹಲವು ಮಹಿಳಾ ಕಾರ್ಮಿಕರು ಅಸ್ವಸ್ಥ
ಕುಂದಾಪುರ: ಮೀನು ಸಂಸ್ಕರಣ ಘಟಕದಲ್ಲಿ ಅಮೋನಿಯಾ ಸೋರಿಕೆಯಾದ ಪರಿಣಾಮ ಇಪ್ಪತ್ತಕ್ಕೂ ಅಧಿಕ ಮಹಿಳಾ ಕಾರ್ಮಿಕರು ಅಸ್ವಸ್ಥಗೊಂಡ ಘಟನೆ ಹೆಮ್ಮಾಡಿಯ ಬಗ್ವಾಡಿ ಸಮೀಪದ ದೇವಲ್ಕುಂದಲ್ಲಿರುವ ಮಲ್ಪೆ ಮರೈನ್ ಫಿಶ್ ಸ್ಟೋರೇಜ್ ನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಅಸ್ವಸ್ಥಗೊಂಡ ಮಹಿಳಾ ಕಾರ್ಮಿಕರನ್ನು ಕೂಡಲೇ ಕುಂದಾಪುರದ ಆದರ್ಶ ಆಸ್ಪತ್ರೆಗೆ ದಾಖಲುಗೊಳಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೀನು ಸಂಸ್ಕರಣ ಘಟಕದಲ್ಲಿ ಅಮೋನಿಯಾ ಸೋರಿಕೆಯಾದ ಪರಿಣಾಮ ಕಾರ್ಮಿಕರಿಗೆ ವಾಂತಿ, ಹೊಟ್ಟೆನೋವು ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ದಳದ ಸಿಬಂದಿಗಳು ಆಗಮಿಸಿ ಅಮೋನಿಯಾ ಸೋರಿಕೆಯನ್ನು ಹತೋಟಿಗೆ ತಂದಿದ್ದಾರೆ.
ಮೀನು ಸಂಸ್ಕರಣಾ ಘಟಕದಲ್ಲಿ ಐಸ್ ಫ್ರೀಝ್ ಮಾಡಲು ಅಮೋನಿಯಾ ಬಳಸಲಾಗುತ್ತಿದ್ದು ಇದರ ಸೋರಿಕೆಯಿಂದ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ.
ಸ್ಥಳಕ್ಕೆ ಕಂಡ್ಲೂರು ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ರೀಧರ್ ನಾಯ್ಕ್ ಭೇಟಿ ನೀಡಿದ್ದಾರೆ.