ಮಂಗಳೂರು: ದ.ಕ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಮೀನುಗಾರಿಕೆ ಹಾಗೂ ಕ್ರೀಡಾ ಸಚಿವರಾದ ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಮೀನುಗಾರರ ಸಮಸ್ಯೆಗಳ ಕುರಿತಂತೆ ಸಭೆ ಜರುಗಿತು
ಈ ವೇಳೆ ಮಾತನಾಡಿದ ಕರ್ನಾಟಕ ಮೀನುಗಾರಿಕಾ ಇಲಾಖೆಯ ನಿರ್ದೇಶಕರಾದ ಎಚ್.ಎಸ್. ವೀರಪ್ಪ ಗೌಡ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುರಕ್ಷತೆಯ ಬಗ್ಗೆ ಕರಾವಳಿ ಪಡೆ ಗಂಭೀರವಾಗಿದ್ದು, ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡನ್ನು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಇದನ್ನು ವಿತರಿಸುವ ಕಾರ್ಯ ನಡೆಯುತ್ತಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಎಲ್ಲಾ ಮೀನುಗಾರರು ಬಯೋಮೆಟ್ರಿಕ್ ಕಾರ್ಡ್ ಹೊಂದಿರುವುದನ್ನು ಸಂಬಂಧಪಟ್ಟ ದೋಣಿಗಳ ಮಾಲಕರು ಖಾತರಿಪಡಿಸಿಕೊಳ್ಳಬೇಕು. ಮೀನುಗಾರರ ವೇಷದಲ್ಲಿ ಸಮುದ್ರದ ಮೂಲಕ ಭಯೋತ್ಪಾದಕರು ದೇಶದಲ್ಲಿ ಆತಂಕ ಸೃಷ್ಟಿಸುವ ಅಪಾಯವಿರುವ ಹಿನ್ನೆಲೆಯಲ್ಲಿ ಮೀನುಗಾರರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮೀನುಗಾರಿಕಾ ಇಲಾಖೆಯು ಜೂ. 20ರಿಂದ 10 ದಿನಗಳ ಕಾಲ ಕರಾವಳಿ ಕರ್ನಾಟಕದಾದ್ಯಂತ ಬಂದರು, ಬೀಚ್ ಪ್ರದೇಶಗಳಲ್ಲಿ ಈ ಶಿಬಿರವನ್ನು ಹಮ್ಮಿಕೊಂಡು ಬಯೋ ಮೆಟ್ರಿಕ್ ಕಾರ್ಡ್ ವಿತರಿಸಲಿದೆ ಎಂದು ಅವರು ಹೇಳಿದರು.
ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರು ಬಯೋಮೆಟ್ರಿಕ್ ಗುರುತಿನ ಚೀಟಿಯನ್ನು ಹೊಂದುವುದು ಕಡ್ಡಾಯವಾಗಿದ್ದು, ಕರಾವಳಿ ಕರ್ನಾಟಕದಲ್ಲಿ ಜೂ. 20ರಿಂದ 30ರವರೆಗೆ ಅಲ್ಲಲ್ಲಿ ಶಿಬಿರಗಳನ್ನು ಮಾಡಿ ಗುರುತಿನ ಚೀಟಿ ವಿತರಿಸಲು ಮೀನುಗಾರಿಕಾ ಇಲಾಖೆ ನಿರ್ಧರಿಸಿದೆ.
ದ.ಕ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇಂದು ಮೀನುಗಾರಿಕೆ ಹಾಗೂ ಕ್ರೀಡಾ ಸಚಿವರಾದ ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಮೀನುಗಾರರ ಸಮಸ್ಯೆಗಳ ಕುರಿತಂತೆ ನಡೆದ ಸಭೆಯಲ್ಲಿ ಕರ್ನಾಟಕ ಮೀನುಗಾರಿಕಾ ಇಲಾಖೆಯ ನಿರ್ದೇಶಕರಾದ ಎಚ್.ಎಸ್. ವೀರಪ್ಪ ಗೌಡ ಈ ವಿಷಯ ತಿಳಿಸಿದರು.
ಕರಾವಳಿ ಕರ್ನಾಟಕದ ದೋಣಿಗಳಲ್ಲಿ ಹೊರಗಿನ ರಾಜ್ಯಗಳಿಂದ ಬಂದು ದುಡಿಯುವ ಮೀನುಗಾರರು ಬಹಳಷ್ಟಿದ್ದು ಅವರಿಗೂ ಬಯೋ ಮೆಟ್ರಿಕ್ ಕಾರ್ಡ್ ಒದಗಿಸಬೇಕು ಎಂಬ ಆಗ್ರಹ ಸಭೆಯಲ್ಲಿ ಮೀನುಗಾರರಿಂದ ವ್ಯಕ್ತವಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಭಯ ಚಂದ್ರ ಜೈನ್, ಈ ಬಗ್ಗೆ ಈಗಾಗಲೇ ಕೇಂದ್ರ ಸರಕಾರದ ಗಮನಕ್ಕೆ ತರಲಾಗಿದೆ. ಸದ್ಯ ಶಿಬಿರದಲ್ಲಿ ರಾಜ್ಯದ ಮೀನುಗಾರರಿಗೆ ಮಾತ್ರವೇ ಬಯೋಮೆಟ್ರಿಕ್ ಕಾರ್ಡ್ ನೀಡಲಾಗುವುದು. ಹೊರ ರಾಜ್ಯದಿಂದ ಬಂದಿರುವ ಮೀನುಗಾರರು ತಮ್ಮ ಗುರುತಿಗಾಗಿ ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ ಎಂದು ಹೇಳಿದರು.
ಹಳೆ ಮೀನುಗಾರಿಕಾ ಬಂದರಿನಲ್ಲಿ ಹೂಳು, ಸಂಪರ್ಕ ರಸ್ತೆ ಸಮಸ್ಯೆ ಬಗ್ಗೆ ಮೀನುಗಾರರು ಸಭೆಯ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಶಾಸಕ ಜೆ.ಆರ್. ಲೋಬೋ, ಕೇಂದ್ರದ ದ್ವಿತೀಯ ಹಂತದ ಸ್ಮಾರ್ಟ್ ಸಿಟಿಗೆ ಮಂಗಳೂರು ಆಯ್ಕೆಗೊಳ್ಳುವ ನಿಟ್ಟಿನಲ್ಲಿ ಇದೀಗ ಮೀನುಗಾರಿಕೆ ಮತ್ತು ಬಂದರಿಗೆ ಒತ್ತು ನೀಡಿ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗುತ್ತಿದೆ. ಆ ಮೂಲಕ ಸ್ಮಾರ್ಟ್ ಸಿಟಿಗೆ ಈ ಬಾರಿ ಕೇಂದ್ರದಿಂದ ಅವಕಾಶ ದೊರಕಿದ್ದಲ್ಲಿ ಸಾಕಷ್ಟು ಅನುದಾನ ದೊರೆಯಲಿದ್ದು, ಬಂದರು ಅಭಿವೃದ್ದಿಯಾಗಲಿದೆ ಎಂದರು.
ಹಳೆ ಬಂದರು ತೃತೀಯ ಹಂತದ ಕಾಮಗಾರಿಗೆ ಸಂಬಂಧಿಸಿ ಆರ್ಥಿಕ ಇಲಾಖೆಯಿಂದ ಅನುದಾನ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಅಧಿಕಾರಿಗಳು ಸಭೆಯ ಗಮನ ಸೆಳೆದಾಗ, ಈ ಬಗ್ಗೆ ಕೇಂದ್ರದ ಗಮನ ಸೆಳೆಯಲಾಗುವುದು. ಸಮಸ್ಯೆ ಜಟಿಲವಾಗಿರುವುದರಿಂದ ಮುಖ್ಯಮಂತ್ರಿಯ ಗಮನಕ್ಕೂ ತರಲಾಗುವುದು ಎಂದು ಸಚಿವ ಅಭಯಚಂದ್ರ ಜೈನ್ ತಿಳಿಸಿದರು.