ಮುಂದಿನ ಗುರುವಾರ ಲೋಕಸಭೆ ಚುನಾವಣೆ ದಿನಾಂಕ ಪ್ರಕಟ ಸಾಧ್ಯತೆ
ನವದೆಹಲಿ: ಭಾರತೀಯ ಚುನಾವಣಾ ಆಯೋಗವು ಸೋಮವಾರದಿಂದ ಬುಧವಾರದವರೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಯಾವಾಗ ಚುನಾವಣೆ ನಡೆಸಬಹುದು ಎಂಬುದನ್ನು ನಿರ್ಣಯಿಸಲಿದೆ. ಅದರ ಬೆನ್ನಲ್ಲೇ, ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಅಥವಾ ಶುಕ್ರವಾರ ಚುನಾವಣಾ ದಿನಾಂಕ ಪ್ರಕಟವಾಗಬಹುದು ಎನ್ನಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಸೆಪ್ಟೆಂಬರ್ನೊಳಗೆ ವಿಧಾನಸಭೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ನಂತರ ಆಯೋಗ ಅಲ್ಲಿಗೆ ಭೇಟಿ ನೀಡುತ್ತಿದೆ. ಈ ಮಧ್ಯೆ, ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯನ್ನು ಲೋಕಸಭೆ ಚುನಾವಣೆಯೊಂದಿಗೆ ಏಕಕಾಲದಲ್ಲಿ ನಡೆಸಬಹುದೇ ಎಂದು ನಿರ್ಣಯಿಸಲು ಕೇಂದ್ರವು ಸಮಿತಿಯನ್ನು ಕೇಳಿತ್ತು.
ಅಂತಿಮ ಹಂತದ ಪರಿಶೀಲನೆಗಳನ್ನು ಪೂರ್ಣಗೊಳಿಸಿಕೊಂಡು, ಜಮ್ಮು ಕಾಶ್ಮೀರ ಭೇಟಿ ಮುಕ್ತಾಯಗೊಂಡ ನಂತರ ಚುನಾವಣಾ ಆಯೋಗವು ಗುರುವಾರ ಅಥವಾ ಶುಕ್ರವಾರ ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಬಹುದು ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ಖಾಸಗಿ ವಾಹಿನಿ ಎನ್ ಡಿ ಟಿ ವಿ ವರದಿ ಮಾಡಿದೆ.