ಮುಂದುವರೆದ ಮಳೆಯ ಆರ್ಭಟ: ಮತ್ತೆ ತಗ್ಗು ಪ್ರದೇಶಗಳು ಜಲಾವೃತ
ನಾವುಂದದ ಕುದ್ರು ಮುಳುಗಡೆ. ಡ್ರೋನ್ ಕ್ಯಾಮೆರಾದಲ್ಲಿ ದೃಶ್ಯ ಸೆರೆ.
ಪುರಸಭೆ ವ್ಯಾಪ್ತಿಯಲ್ಲಿ ಮನೆಗಳಿಗೆ ನುಗ್ಗಿದ ನೀರು.
ಸ್ಥಳೀಯ ನಿವಾಸಿಗಳ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ.
ಕುಂದಾಪುರ : ಬುಧವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನದಿ ತೀರದ ನಿವಾಸಿಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಸೌಪರ್ಣಿಕ ನದಿತೀರದ ನಾವುಂದದ ಕುದ್ರು, ಸಾಲ್ಬುಡ, ಬಡಾಕೆರೆ, ಚಿಕ್ಕಳ್ಳಿ, ಪಡುಕೋಣೆ, ಮರವಂತೆ ಭಾಗಗಗಲ್ಲಿನ ಮನೆಗಳು, ಕೃಷಿಗದ್ದೆ, ತೋಟಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ, ಸಂಭವಿಸಿದೆ. ಸಂಪರ್ಕ ರಸ್ತೆಯೂ ಮುಳುಗಡೆಯಾಗಿದ್ದು, ಜನರು ಅಗತ್ಯ ವಸ್ತುಗಳನ್ನು ತರಲು ದೋಣಿಯನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸ್ಥಳೀಯ ಯುವಕರು ಅಧಿಕಾರಿಗಳ ಗಮನ ಸೆಳೆಯಲು ಡ್ರೋನ್ ಮೂಲಕ ನೆರೆಯ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.
ಜಿಲ್ಲಾಧಿಕಾರಿ ಭೇಟಿ :
ಕುಂದಾಪುರ ಪುರಸಭಾ ವ್ಯಾಪ್ತಿಯ ಒಂಬತ್ತುದಂಡಿಗೆ, ಖಾರ್ವಿಕೇರಿ ಮುಂತಾದ ಕಡೆಗಳಲ್ಲಿ ಮಳೆಯಿಂದಾಗಿ ಮನೆಗೆ ನೀರು ನುಗ್ಗಿದ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಸ್ಥಳೀಯ ನಿವಾಸಿಗಳ ಸಂಕಷ್ಟ ಆಲಿಸಿದರು.
ಈ ವೇಳೆಯಲ್ಲಿ ವೇಳೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಪ್ರತಿ ಸಭೆಗಳಲ್ಲಿ ಹೇಳುತ್ತಿದ್ದರೂ ರಾಜಕಾಲುವೆ, ಚರಂಡಿಯ ಹೂಳು ಯಾಕೆ ತೆಗೆಸಿಲ್ಲ. ಅನಾಹುತ ಆದ ಬಳಿಕವೇ ಎಚ್ಚೆತ್ತುಕೊಳ್ಳುವ ಪರಿಪಾಠ ಇರಕೂಡದು ಎಂದರು. ಖಾಸಗಿ ಫ್ಲ್ಯಾಟ್ ಒಂದರಿಂದ ಯಾವಾಗಲೂ ಕೊಳಚೆ ನೀರು ಬರುತ್ತದೆ. ಊಟದ ವೇಳೆಯಲ್ಲಿ ದುರ್ವಾಸನೆಯ ನೀರು ಬಿಡಲಾಗುತ್ತದೆ. ಕೊಳಚೆ ನೀರಿನಿಂದ ರೋಗ ಭೀತಿಯಿದೆ. ಬೀದಿ ದೀಪದ ವ್ಯವಸ್ಥೆಯೂ ಸರಿ ಇಲ್ಲ ಎಂದು ಸ್ಥಳೀಯ ನಿವಾಸಿಗಳು ಅಲವತ್ತುಕೊಂಡರು. ಫ್ಲಾಟ್ನವರಿಗೆ ಹಾಗೂ ನೀರು ನಿಲ್ಲುವ ಭೂಮಿಯ ಮಾಲಕರಿಗೆ ನೋಟಿಸ್ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿ ಅವರು, ಕೆಲವೆಡೆ ಅನಗತ್ಯ, ಅಸಮರ್ಪಕ, ಕಾನೂನು ಮೀರಿ ಮಾಡಿದ ಕಾಮಗಾರಿಯಿಂದ ನೆರೆ ನೀರು ಸಂಗ್ರಹವಾಗಿದ್ದು ಅದನ್ನು ತೆಗೆದು ಅದರ ಖರ್ಚನ್ನು ಜಾಗದ ಮಾಲಕರಿಂದ ವಸೂಲಿ ಮಾಡುವಂತೆ ಸೂಚಿಸಿದರು.
ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ, ತಹಶೀಲ್ದಾರ್ ಹೆಚ್.ಎಸ್ ಶೋಭಾಲಕ್ಷ್ಮೀ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ ಆರ್., ಆರೋಗ್ಯ ನಿರೀಕ್ಷಕ ರಾಘವೇಂದ್ರ ನಾಯ್ಕ್, ಎಂಜಿನಿಯರ್ ಗುರುಪ್ರಸಾದ ಶೆಟ್ಟಿ, ಅರುಣ್ ಬರೆಟ್ಟೊ ಇದ್ದರು.
ಶಾಸಕರ ಭೇಟಿ:
ಖಾರ್ವಿಕೇರಿ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರು, ಅನಿರೀಕ್ಷಿತ ಮಳೆಯಾಗುತ್ತಿದ್ದು, ಸಾರ್ವಜನಿಕರು ಎಚ್ಚರದಿಂದ ಹಾಗೂ ಜಾಗೂರಕರಾಗಿರಬೇಕು. ತುರ್ತು ಅವಶ್ಯಗಳಿಗೆ ತಾಲ್ಲೂಕು ಆಡಳಿತವನ್ನು ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ಭಯಭೀತರಾಗುವ ಅಗತ್ಯ ಇಲ್ಲ ಎಂದು ಧೈರ್ಯ ನೀಡಿದರು.
ಮತ್ತೆ ಕಮಲಶೀಲೆ ಬ್ರಾಹ್ಮೀ ದುರ್ಗೆಯನ್ನು ತೋಯಿಸಿದ ಕುಬ್ಜೆ :
ಬುಧವಾರದಿಂದ ನಿರಂತರವಾಗಿ ಸುರಿಯುತ್ತಿರುವ ಜಲರಾಶಿಯಿಂದಾಗಿ ತಾಲ್ಲೂಕಿನ ಕಮಲಶಿಲೆಯಲ್ಲಿ ಹರಿಯುತ್ತಿರುವ ಕುಬ್ಜಾ ನದಿ ತುಂಬಿ ಹರಿಯುತ್ತಿದ್ದು, ಮತ್ತೊಮ್ಮೆ ಕ್ಷೇತ್ರದ ಆರಾಧ್ಯ ದೇವತೆಯಾದ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವರ ಗರ್ಭಗುಡಿಯನ್ನು ದಾಡಿದ ಕುಬ್ಜೆಯ ನೀರು, ಶ್ರೀದೇವಿಗೆ ಸ್ನಾನಾಭೀಷೆಕ ಮಾಡಿಸಿದೆ.
ಬೆರಳೆಣಿಕೆಯ ವರ್ಷಗಳನ್ನು ಹೊರತು ಪಡಿಸಿ, ಹಿಂದೆಲ್ಲ ವರ್ಷಕ್ಕೆ ಒಂದು ಬಾರಿ ಮಾತ್ರ ಕುಬ್ಜಾ ನದಿ ಶ್ರೀಕ್ಷೇತ್ರದ ಆವರಣವನ್ನು ದಾಟಿ, ದೇವರನ್ನು ತೋಯಿಸುವ ಘಟನೆಗಳು ನಡೆಯುತ್ತಿತ್ತು. ಈ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುವ ಭಕ್ತರು ತಾಯಿಯೊಂದಿಗೆ ಸ್ನಾನವನ್ನು ಮಾಡಿ ಧನ್ಯತೆಯನ್ನು ಅನುಭವಿಸುತ್ತಾರೆ. ಬುಧವಾರ ರಾತ್ರಿ 12.30 ರ ವೇಳೆಯಲ್ಲಿ ಮತ್ತೊಮ್ಮೆ ಅನೀರಿಕ್ಷಿತವಾಗಿ ಬಂದ ಕುಬ್ಜೆಯ ನೀರಿನಲ್ಲಿ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿಯ ಅಭಿಷೇಕವನ್ನು ದೇಗುಲದ ಆಡಳಿತ ಮೊಕ್ತೇಸರ ಎಸ್.ಸಚ್ಚಿದಾನಂದ ಚಾತ್ರ ಹಾಗೂ ಇತರರು ಕಣ್ ತುಂಬಿಸಿಕೊಂಡರು. ಕ್ಷೇತ್ರದ ಅರ್ಚಕರು ವಾಡಿಕೆಯಂತೆ ಆರತಿ ಬೆಳಗಿ, ಧಾರ್ಮಿಕ ಪೂಜೆ ನೆರವೇರಿಸಿದರು.