ಮುಂಬಯಿ : ವಿಶ್ವ ಕೊಂಕಣಿ ಕೇಂದ್ರ ಮಂಗಳೂರು ಕೊಡಮಾಡುವ ಬಸ್ತಿ ವಾಮನ ಶೆಣೈ ಸಮಾಜ ಸೇವಾ ಪ್ರಶಸ್ತಿ-2015 ಪ್ರತಿಷ್ಠಿತ ಪುರಸ್ಕಾರಗಳಿಗೆ ಇಬ್ಬರು ಶಿಕ್ಷಣ ದಿಗ್ಗಜರನ್ನು ಆಯ್ಕೆ ಮಾಡಲಾಗಿದೆ.
ಕೊಂಕಣಿ ಮಹಿಳಾ ವಿಭಾಗದಲ್ಲಿ ಭಾರತ, ಯುರೋಪ್, ಅಮೆರಿಕಾ ಏಷ್ಯಾ ಖಂಡಗಳ ಸಹಿತ ಹಲವು ರಾಷ್ಟ್ರಗಳಲ್ಲಿ 150ಕ್ಕೂ ಮಿಕ್ಕಿ ಉನ್ನತ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣತಜ್ಞೆ ಆಗಿ ಹುಟ್ಟೂರಿಗೆ ಕೀರ್ತಿ ತಂದಿರುವ ರಾಯನ್ ಇಂಟರ್‍ನ್ಯಾಷನಲ್ ವಿದ್ಯಾ ಸಮೂಹ ಸಂಸ್ಥೆಗಳ ಸ್ಥಾಪಕಿ ಮೇಡಂ ಗ್ರೇಸ್ ಪಿಂಟೊ ಅವರಿಗೆ ಈ ಪ್ರಶಸ್ತಿ ಹಾಗೂ ಕೊಂಕಣಿ ಪುರುಷರ ವಿಭಾಗ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿ ಹೆಸರಾಂತ ನಾಮರಾಗಿರುವ, ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‍ನ್ ಅಡಳಿತಾಧಿಕಾರಿ ಮತ್ತು ರಂಗಭೂಮಿ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಮಣಿಪಾಲದ ಡಾ| ಹೆಚ್.ಶಾಂತಾರಾಮ ಅವರಿಗೆ ಪ್ರದಾನಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ.
ಮಣಿಪಾಲ ಗ್ಲೋಬಲ್ ಎಜ್ಯುಕೇಶನ್ ಸಂಸ್ಥೆಯ ಟಿ.ವಿ ಮೋಹನದಾಸ ಪೈ ಪ್ರಾಯೋಜಕತ್ವದ ಎರಡೂ ಪ್ರಶಸ್ತಿಗಳನ್ನು ವಿಶ್ವ ಕೊಂಕಣಿ ಕೇಂದ್ರದ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರ ಜನ್ಮೋತ್ಸವ ದಿನವಾದ ನವೆಂಬರ್ 06ರಂದು ಟಿ.ವಿ ರಮಣ ಪೈ ಸಭಾಗೃಹ, ಲಾಲ್‍ಭಾಗ್, ಮಂಗಳೂರು ಇಲ್ಲಿ ಪ್ರದಾನಿಸಲಾಗುವುದು. ಭವ್ಯ ಸಮಾರಂಭದ ಅಂಗವಾಗಿ ನ.5 ಮತ್ತು 6ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ ವಿಮರ್ಶಿಕಾ ಕಾರ್ಯಾಗಾರ ಸೃಜನ ಮತ್ತು ಅನುಸೃಜನ ಪರಿ ಸಂವಾದ ಕೂಡ ಆಯೋಜಿಸಲಾಗಿದೆ ಎಂದು ವಿಶ್ವ ಕೊಂಕಣಿ ಕೇಂದ್ರ ಪ್ರಕಟನೆ ತಿಳಿಸಿದೆ.