ಮುಖ್ಯಮಂತ್ರಿ ಬ್ಯಾನರಿಗೆ ಬೆಂಕಿ; ಕೀಡಿಗೇಡಿಗಳ ಬಂಧನಕ್ಕೆ ಯುವ ಕಾಂಗ್ರೆಸ್ ಗಡು
ಉಡುಪಿ : ಕಾಪುವಿನಲ್ಲಿ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದ ಬ್ಯಾನರ್ ಗಳಿಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳನ್ನು ಮೂರು ದಿನಗಳೊಳಗೆ ಬಂಧಿಸುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾಪು ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದು ತಪ್ಪಿದ್ದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದೆ.
ಸಾಧನಾ ಸಮಾವೇಶದ ಪ್ರಯುಕ್ತ ಉದ್ಯಾವರದಿಂದ ಉಚ್ಚಿಲದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಿದ್ದ ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರುವ 25ಕ್ಕೂ ಹೆಚ್ಚು ಬ್ಯಾನರ್ ಗಳನ್ನು ಭಾನುವಾರ ರಾತ್ರಿ ಅಪರಿಚಿತ ಕಿಡಿಗೇಡಿಗಳು ಸುಟ್ಟು ಹಾಕಿದ್ದರು. ಈ ಬಗ್ಗೆ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದರೂ ಈ ವರೆಗೂ ದುಷ್ಕರ್ಮಿಗಳ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ನೇತೃತ್ವದಲ್ಲಿ ಬುಧವಾರ ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮುಖ್ಯಮಂತ್ರಿಗಳ ಭಾವಚಿತ್ರವಿರುವ ಬ್ಯಾನರ್ ಸುಟ್ಟಿರುವುದು ರಾಜದ್ರೋಹದ ಪ್ರಕರಣವಾಗಿದೆ. ಇದರ ಹಿಂದೆ ಗಲಭೆಯನ್ನು ಸೃಷ್ಟಿಸುವ ಹುನ್ನಾರವಿದ್ದು, ತಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಂಡು ಅಪರಾಧಿಗಳನ್ನು ಪತ್ತೆಹಚ್ಚಿ ಬಂಧಿಸಬೇಕು ತಪ್ಪಿದ್ದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ನಿಯೋಗದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಮ್ರಾನ್, ಕಾಪು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಂತೋಷ್ ಬಂಗೇರ, ಪ್ರಕಾ. ತನುಜ್ ಕರ್ಕೇರಾ, ಮಹಮ್ಮದ್ ನಿಯಾಜ್, ಮುನಾಜ್, ಹಕೀಮ್, ಶಾಗಿರ್, ಮಹಮ್ಮದ್ ಝಿಯಾನ್ ಉಪಸ್ಥಿತರಿದ್ದರು.