ಮುಡಾ, ವಾಲ್ಮೀಕಿ ಹಗರಣದಿಂದ ಹತಾಶ ಸಿದ್ಧರಾಮಯ್ಯರಿಂದ ಬಿಜೆಪಿ ಸಚಿವರ ತೇಜೋವಧೆ ಯತ್ನ : ಯಶ್ಪಾಲ್ ಸುವರ್ಣ ಆಕ್ರೋಶ
ಮುಡಾ ಅಕ್ರಮ ಸೈಟ್ ಹಂಚಿಕೆ, ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಹಗರಣ ಬಯಲಿಗೆ ಬಂದು ಓರ್ವ ಸಚಿವರ ರಾಜೀನಾಮೆಯಿಂದ ರಾಜ್ಯ ಸರ್ಕಾರದ ಬುಡವೇ ಅಲುಗಾಡುವ ಸ್ಥಿತಿ ನಿರ್ಮಾಣವಾಗಿದ್ದು ಹತಾಶಗೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ಸರ್ಕಾರದ ಅವಧಿಯ ಸಚಿವರ ವಿರುದ್ಧ ಸುಳ್ಳು ಆರೋಪ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸುನೀಲ್ ಕುಮಾರ್ ವಿರುದ್ಧ ಕೋಟ್ಯಾಂತರ ರೂಪಾಯಿ ಹಗರಣದ ಬಗ್ಗೆ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ.
ಈಗಾಗಲೇ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸುನೀಲ್ ಕುಮಾರ್ ರವರು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ತನಿಖೆಗೆ ಆಗ್ರಹಿಸಿ ಸುಳ್ಳು ಆರೋಪದ ವಿರುದ್ಧ ತಕ್ಷಣ ಕ್ಷಮೆಯಾಚಿಸುವಂತೆ ಸವಾಲು ಹಾಕಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿಯವರು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಸಂದರ್ಭದಲ್ಲಿ ಕೊಳವೆ ಬಾವಿ ನಿರ್ಮಾಣ ಯೋಜನೆಯಲ್ಲಿ ಟೆಂಡರ್ ಅಕ್ರಮ ತಡೆಯಲು ನೇರವಾಗಿ ಫಲಾನುಭವಿ ರೈತರ ಖಾತೆಗೆ ಡಿ ಬಿ ಟಿ ಮೂಲಕ ಹಣ ವರ್ಗಾವಣೆ ಮಾಡುವ ಕ್ರಮವಹಿಸಿದನ್ನು ರಾಜ್ಯದ ಜನತೆ ಮರೆತಿಲ್ಲ. ಸರಳ ಸಜ್ಜನ ವ್ಯಕ್ತಿತ್ವದ ಕೋಟ ಶ್ರೀನಿವಾಸ ಪೂಜಾರಿ ಯವರ ಪ್ರಾಮಾಣಿಕತೆಗೆ ಮೊನ್ನೆ ನಡೆದ ಲೋಕಸಭೆ ಚುನಾವಣೆಯಲ್ಲಿ ಅವರು ಸಾಧಿಸಿದ ಗೆಲುವಿನ ಅಂತರವೇ ಸಾಕ್ಷಿ.
ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಗೆ ಇನ್ನೂ 11 ಕೋಟಿ ಹಣ ಬಿಡುಗಡೆಯೇ ಆಗಿಲ್ಲ ಎಂಬ ಕನಿಷ್ಠ ಜ್ಞಾನವಿಲ್ಲದೆ 11 ಕೋಟಿ ಹಗರಣ ನಡೆದಿದೆ ಎನ್ನುವ ಮೂಲಕ ಸರಕಾರಿ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ಸುಳ್ಳು ಮಾಹಿತಿ ನೀಡಿದರೇ ಎಂಬ ಪ್ರಶ್ನೆ ಮೂಡುತ್ತಿದೆ.
ತುಳುನಾಡಿನ ಜನತೆಯ ಪಾಲಿಗೆ ಅತ್ಯಂತ ಪವಿತ್ರ ಭಾವನಾತ್ಮಕ ಸಂಬಂಧ ಹೊಂದಿರುವ ಪರಶುರಾಮನ ವಿಚಾರದಲ್ಲಿ ಕಾಂಗ್ರೆಸ್ ನಿರಂತರ ಚೆಲ್ಲಾಟವಾಡುತ್ತಿದೆ.
ಮುಖ್ಯಮಂತ್ರಿಗಳಿಗೆ ನಿಜವಾಗಲೂ ತಾಕತ್ ಇದ್ದರೆ ತಾವು ಬಿಜೆಪಿ ವಿರುದ್ಧ ಆರೋಪಿಸಿದ ಹಾಗೂ ತಮ್ಮ ಸರಕಾರದ ಮುಡಾ, ವಾಲ್ಮೀಕಿ ನಿಗಮ ಸಹಿತ ಎಲ್ಲಾ ಹಗರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಿ ತಪ್ಪಿದಲ್ಲಿ ನಾಡಿನ ಜನತೆ ಮುಂದೆ ಬೇಷರತ್ ಕ್ಷಮೆ ಯಾಚಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.