ಮುಸ್ಲಿಂ ನಾಯಕರು ಒಪ್ಪಿದರೆ ಈ ಬಾರಿಯೂ ಇಫ್ತಾರ್ ಕೂಟ ಆಯೋಜಿಸಲು ಸಿದ್ದ; ಪೇಜಾವರ ಸ್ವಾಮೀಜಿ
ಉಡುಪಿ: ಕಳೆದ ಬಾರಿ ಕೃಷ್ಣಮಠದಲ್ಲಿ ನಡೆದ ಇಫ್ತಾರ್ ಕೂಟ ಈ ಬಾರಿಯೂ ಆಯೋಜನೆ ಕುರಿತು ಮಾತನಾಡಿದ ಶ್ರೀಗಳು, ಈ ಬಾರಿಯೂ ಇಫ್ತಾರ್ ಕೂಟ ಮಾಡಬೇಕೆಂಬ ಭಾವನೆ ಇದೆ. ಮುಸ್ಲಿಂ ನಾಯಕರು, ಪ್ರಮುಖರು ಒಪ್ಪಿದರೆ ಸತ್ಕಾರ ಕೂಟ ಮಾಡುತ್ತೇನೆ ಎಂದು ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಉಡುಪಿಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿ ಈ ಬಾರಿ ಮುಸ್ಲಿಮರು ಇಫ್ತಾರ್ ಕೂಟಕ್ಕೆ ಬಹಳ ಉತ್ಸಾಹ ತೋರಿಸುತ್ತಿಲ್ಲ. ಕಳೆದ ಬಾರಿಯ ಇಫ್ತಾರ್ ಕೂಟ ಬಹಳ ಚರ್ಚೆಯಾಗಿತ್ತು. ಮೂರ್ತಿ ಇರುವಲ್ಲಿ ಕಾರ್ಯಕ್ರಮ ಆಯೋಜಿಸಲು ಮುಸಲ್ಮಾನರು ಒಪ್ಪುತ್ತಿಲ್ಲ. ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ಸತ್ಕಾರ ಕೂಟ ಆಯೋಜಿಸುವ ಆಲೋಚನೆಯಿದೆ. ಅಲ್ಪಸಂಖ್ಯಾತರನ್ನು ಬಹು ಸಂಖ್ಯಾತರನ್ನು ಸಮಾನವಾಗಿ ಕಾಣಬೇಕು ಈ ಉದ್ದೇಶಕ್ಕಾಗಿ ಸತ್ಕಾರ ಕೂಟ ನಡೆಯಲಿದೆ ಎಂದರು. ದೇಶದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಶಿಕ್ಷಣ, ಆಹಾರ, ಸರ್ಕಾರದ ಯೋಜನೆ ಎಲ್ಲಾ ಧರ್ಮದ ಬಡವರಿಗೆ ಸಿಗಬೇಕು. ನಾನು ಅಂಬೇಡ್ಕರ್ ವಿರೋಧಿಯಲ್ಲ. ಎಲ್ಲಾ ಧರ್ಮ , ಜಾತಿಯವರೊಂದಿಗೆ ನಾನು ಚೆನ್ನಾಗಿದ್ದೇನೆ ಎಂದರು.
ಇನ್ನು ನರೇಂದ್ರ ಮೋದಿ ಸರ್ಕಾರ ನಾಲ್ಕು ವರ್ಷ ಪೂರೈಸಿರೋದಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಮೋದಿ ಸರ್ಕಾರದಿಂದ ಸಾಕಷ್ಟು ಕೆಲಸ ಆಗಿದೆ. ಕೇಂದ್ರ ಸರ್ಕಾರದ ಬಗ್ಗೆ ನಿರೀಕ್ಷೆ ಬಹಳ ಇತ್ತು. ನಿರೀಕ್ಷೆಯಷ್ಟು ಸಾಧನೆಗಳು ಆಗಲಿಲ್ಲ ಎಂಬ ಬೇಸರವಿದೆ. ರಾಮ ಮಂದಿರ ಕ್ಕಿಂತ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು. ಗಂಗಾ ಶುದ್ಧೀಕರಣ ಸಂಪೂರ್ಣವಾಗಿ ಆಗಿಲ್ಲ. ಕಪ್ಪು ಹಣವನ್ನು ಪ್ರಧಾನಿ ಮೋದಿ ತರಿಸಿಲ್ಲ. ದೇಶದ ಜನಕ್ಕೆ , ನಮಗೆ ನಿರೀಕ್ಷೆಯಿತ್ತು. ವಿಪಕ್ಷಗಳಲ್ಲಿ ಐಕ್ಯತೆ ಮೂಡಿದೆ.ಈ ಹಿಂದೆ ಇಂದಿರಾ ಗಾಂಧಿಗೂ ಹೀಗೇ ಆಗಿತ್ತು. ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಆಗಬಹುದು. ಚುನಾವಣೆಗೂ ಮೊದಲು ಮೋದಿ ಕೆಲಸ ಮಾಡಿ ತೋರಿಸಬೇಕು ಎಂದರು.
ರಾಜ್ಯದ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಅನುಭವಿ ರಾಜಕಾರಣಿ. ರಾಜ್ಯ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ ಅಂತ ಹಾರೈಸ್ತೇನೆ. ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ಚದ ವಿಕೃತಿಯಾಗಿದೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳು ರೆಸಾರ್ಟ್, ಆಪರೇಷನ್ ನಲ್ಲಿ ತಲ್ಲೀನರಾಗಿದ್ದಾರೆ.ಯಾವುದೇ ರಾಜಕೀಯ ಪಕ್ಷಗಳು ನೈತಿಕತೆ ಹೊಂದಿಲ್ಲ. ಗೊಂದಲ ನಿರ್ಮಾಣವಾದ್ರೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತದ ಬದಲು ಸರ್ವ ಪಕ್ಷ ಸರ್ಕಾರ ಜಾರಿಗೆ ಬರಬೇಕು. ಅಂತಹ ಪ್ರಯೋಗ ರಾಜ್ಯದಲ್ಲಿ ನಡೆಯಬೇಕು ಎಂದರು. ರಾಜ್ಯದಲ್ಲಿ ಆದರ್ಶ ಮಂತ್ರಿ ಮಂಡಲ ರಚನೆಯಾಗಲಿ. ವಿಪಕ್ಷ ಮುಕ್ತ ಸರ್ಕಾರ ಸರಿಯಲ್ಲ, ವಿಪಕ್ಷ ಇರಬೇಕು ಎಂಬೂದು ನನ್ನ ವಾದ ಎಂದರು.