ಮೂಡುಸಗ್ರಿ ಬಳಿ ಹಾಡಿಯಲ್ಲಿ ಬಾಲಕಿ ಶವ ಪತ್ತೆ; ಅತ್ಯಾಚಾರ ಶಂಕೆ

Spread the love

ಮೂಡುಸಗ್ರಿ ಬಳಿ ಹಾಡಿಯಲ್ಲಿ ಬಾಲಕಿ ಶವ ಪತ್ತೆ; ಅತ್ಯಾಚಾರ ಶಂಕೆ

ಉಡುಪಿ: ಮಣಿಪಾಲದ ಮೂಡುಸಗ್ರಿ ಬಳಿಯ ಹಾಡಿಯೊಂದರಲ್ಲಿ ಬಾಲಕಿಯೋರ್ವಳ ಮೃತದೇಹ ಭಾನುವಾರ ಸಂಜೆ ಪತ್ತೆಯಾಗಿದ್ದು ಹಲವಾರು ಸಂಶಯಗಳಿಗೆ ಎಡೆಮಾಡಿದೆ.

ಮೃತ ಬಾಲಕಿ ಬಾದಾಮಿ ಮೂಲದವಳಾಗಿದ್ದು, ನಿಟ್ಟೂರು ಬಳಿ ವಾಸ ಮಾಡಿಕೊಂಡಿದ್ದಳು.

ಪ್ರಾಥಮಿಕ ಮೂಲಗಳ ಪ್ರಕಾರ ಯುವತಿಯು ಉಡುಪಿ ಕ್ರಷ್ಣ ಮಠದ ಬಳಿಯಿರುವ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಶನಿವಾರ ಮಧ್ಯಾಹ್ನ ಅಂಗಡಿಯಿಂದ ನಾಪತ್ತೆಯಾಗಿದ್ದು, ಯುವತಿಯ ಮನೆಯವರು ಆಕೆ ಮನೆಗೆ ಬಾರದಿರುವುದನ್ನು ಗಮನಿಸಿ ಎಲ್ಲಾ ಕಡೆ ಹುಡುಕಾಟ ನಡೆಸಿದ ಭಾನುವಾರ ಉಡುಪಿ ಮಹಿಳಾ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಇಂದು ಸಂಜೆ ಸಗ್ರಿಯ ಹಾಡಿಯಲ್ಲಿ ಬಾಲಕಿಯ ಮೃತದೇಹವೊಂದು ಪತ್ತೆಯಾಗಿರುವ ಬಗ್ಗೆ ಮಣಿಪಾಲ ಪೊಲೀಸರಿಗೆ ಮಾಹಿತಿ ದೊರೆತಿದ್ದು, ಅದರಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮೃತದೇಹದ ಕೆಲವು ಭಾಗಗಳು ಕೊಳೆತ ಸ್ಥಿತಿಯಲ್ಲಿದ್ದು, ಕುತ್ತಿಗೆಗೆ ಶಾಲು ಬಿಗಿದಿರುವುದು ಕಂಡುಬಂದಿದೆ.

ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಣಿಪಾಲ ಶವಗಾರದಲ್ಲಿ ಇರಿಸಲಾಗಿದ್ದು, ಮನೆಯವರನ್ನು ಕರೆಸಿ ಮೃತದೇಹದ ಗುರುತು ಪತ್ತೆ ಮಾಡ ಲಾಗಿದೆ. ದುಷ್ಕರ್ಮಿಗಳು ಆಕೆಯನ್ನು ಹಾಡಿಗೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿ ರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಆ ಹಿನ್ನೆಲೆಯಲ್ಲಿ ಮಣಿಪಾಲ ವಿಧಿ ವಿಜ್ಞಾನ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ, ಡಿವೈಎಸ್ಪಿ ಜೈಶಂಕರ್ ಮಹಿಳಾ ಠಾಣೆಯ ಪೊಲೀಸ್ ನಿರೀಕ್ಷಕ ಸಂಪತ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love