ಮೇಯರ್ ಪಾಲಿಕೆಯ ಆರ್ಥಿಕತೆ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಪ್ರವೀಣ್ ಚಂದ್ರ ಆಳ್ವ ಒತ್ತಾಯ

Spread the love

ಮೇಯರ್ ಪಾಲಿಕೆಯ ಆರ್ಥಿಕತೆ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಪ್ರವೀಣ್ ಚಂದ್ರ ಆಳ್ವ ಒತ್ತಾಯ

ಮಂಗಳೂರು: ಪಾಲಿಕೆಯ ಸದಸ್ಯರ ಲೋಕಲ್ ಏರಿಯಾ ಡೆವೆಲಪ್ ಮೆಂಟ್ ನಿಧಿ ಅನುದಾನ ನೀಡದೆ ವಾರ್ಡ್ ಗಳ ಕೆಲಸ ಮಾಡಲು ತೊಂದರೆಯಾಗಿದೆ. ಪಾಲಿಕೆ ಆರ್ಥಿಕವಾಗಿ ದಿವಾಳಿಯಾಗಿದ್ದು ಮೇಯರ್ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಮನಪಾ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಒತ್ತಾಯಿಸಿದ್ದಾರೆ. ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳವಾಗಿದ್ದ ಬಗ್ಗೆ ವಿಪಕ್ಷ ನಾಯಕನಾಗಿ ಧ್ವನಿ ಎತ್ತಿ ಹಿಂದಿನ ಮನಪಾ ಪರಿಷತ್ ಸಭೆಯಲ್ಲಿ ವಿಪಕ್ಷದ ಸದಸ್ಯರೆಲ್ಲರೂ ಪ್ರತಿಭಟಿಸಿದ್ದೆವು. ಅದರಂತೆ ಆಸ್ತಿ ತೆರಿಗೆ ಕಡಿಮೆ ಮಾಡುವ ನಿರ್ಣಯವನ್ನು ಪರಿಷತ್‌ ಸಭೆಗೆ ತಂದಿದ್ದು, ಅದಕ್ಕೆ ಮೇಯರ್ ಸೂಕ್ತ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದೆವು. ಆದರೆ ಇದರ ಬಗ್ಗೆ ಸಭೆ ನಡೆಸಿ ತಕ್ಷಣ ಸ್ಪಂದಿಸುವ ಬದಲು ಮೇಯರ್ ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ, ರಾಜ್ಯ ಹಾಗೂ ಮನಪಾದಲ್ಲಿ ಬಿಜೆಪಿ ಆಡಳಿತ ಇದ್ದ ವೇಳೆ ಪಾಲಿಕೆಯ ನಾಗರಿಕರಿಗೆ ಅನುಕೂಲವಾಗುವ ಯಾವುದೇ ಹೊಸ ಯೋಜನೆ ಜಾರಿಗೆ ತರಲು ಕಳೆದ ನಾಲ್ಕು ವರ್ಷದ ಅವಧಿಯ ಮೇಯರ್ ಗಳು ವಿಫಲರಾಗಿದ್ದಾರೆ. ಸ್ವಯಂ ಘೋಷಿತ ಆಸ್ತಿ ತೆರಿಗೆ ಬಿಜೆಪಿ ಅವಧಿಯಲ್ಲೇ 5ರಿಂದ ಆರು ಪಟ್ಟು ಹೆಚ್ಚಿಸಿದ್ದು, ಅಂಗಳಕ್ಕೆ ಕೂಡ ತೆರಿಗೆ ವಿಧಿಸಿದ ಶ್ರೇಯಸ್ಸು ಬಿಜೆಪಿಯದ್ದು. ನೀರಿನ ದರ ಹೆಚ್ಚಳ, ಬಿಲ್ ಪಾವತಿಯಲ್ಲಿನ ಸಮಸ್ಯೆ, ಘನತ್ಯಾಜ್ಯ ತೆರಿಗೆ ಹೆಚ್ಚಳ, ಉದ್ದಿಮೆ ಪರವಾನಿಗೆ ತೆರಿಗೆ ಹೆಚ್ಚಳ, ಜಲಸಿರಿ ಯೋಜನೆಯ ವೈಫಲ್ಯ, ಗೇಲ್ ಗ್ಯಾಸ್ ಕಾಮಗಾರಿಯಿಂದ ಹದಗೆಟ್ಟ ರಸ್ತೆಗಳು, ಹತ್ ಸಮಸ್ಯೆ, ಮಾರುಕಟ್ಟೆಗಳ ಸಮಸ್ಯೆ ಸ್ವಚ್ಛತೆಯ ವೈಫಲ್ಯ ನಗರದಲ್ಲೆಡೆ ಒಳಚರಂಡಿ ಅವ್ಯವಸ್ಥೆಯ ಬಿಜೆಪಿ ಅಡಳಿತಾವಧಿಯ ಸಾಧನೆಗಳು ಎಂದು ಪ್ರವೀಣ್ ಚಂದ್ರ ಆಳ್ವ ಹೇಳಿದರು.

ಆ.31ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ 1984ರಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಗಾಳಿಗೆ ತೂರಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಪ್ರತಿಪಕ್ಷದ ಎಲ್ಲಾ ಸದಸ್ಯರಿಗೆ ಅಗೌರವ ತೋರಿ ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ ಎಂದು ಪ್ರವೀಣ್ ಚಂದ್ರ ಆಳ್ವ ಆರೋಪಿಸಿದ್ದಾರೆ. ಮನಪಾದಲ್ಲಿ ತಿಂಗಳಿಗೊಮ್ಮೆ ನಡೆಯುವ ಸಾಮಾನ್ಯ ಸಭೆಯಲ್ಲಿ ಸ್ವಾಗತ, ಸ್ಥಿರೀಕರಣದ ಬಳಿಕ ವಿಪಕ್ಷ ನಾಯಕರಿಗೆ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ನೀಡುವುದು ಸಂಪ್ರದಾಯ. ಆದರೆ ಈ ಸಭೆಯಲ್ಲಿ ಅದಕ್ಕೆ ವಿರುದ್ಧವಾಗಿ ಮೇಯರ್ ತಮ್ಮ ಸಾಧನೆಗಳ ಪಟ್ಟಿಯನ್ನು ನೀಡಿದರು. ಆದರೆ ಅವರ ಸಾಧನೆ ಶೂನ್ಯವಾಗಿದ್ದು, ಗೊಂದಲ ಸೃಷ್ಟಿಸುವ ಉದ್ದೇಶದಿಂದ ಆಡಳಿತ ಪಕ್ಷದ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಲು ಮುಂದಾದರು. ನಾವು ವಿಪಕ್ಷವಾಗಿ ಅಭಿವೃದ್ಧಿ ವಿಚಾರದಲ್ಲಿ ಎಂದೂ ರಾಜಕೀಯ ಮಾಡಿಲ್ಲ. ಆದರೆ ಈ ಹಿಂದಿನ ಸಭೆಯಲ್ಲಿಯೂ ಸ್ವಯಂ ಘೋಷಿತ ಆಸ್ತಿ ತೆರಿಗೆ ವಿಚಾರದಲ್ಲಿ ಮಾತನಾಡಲು ಮುಂದಾದಾಗ ಸಂಪ್ರದಾಯದಂತೆ ಬೆಲ್ ಕೂಡಾ ಬಾರಿಸದೆ ಸಭೆಯಿಂದ ಹೊರನಡೆದು ಸಭೆ ಮುಂದೂಡಿಕೆ ಎಂದು ಹೇಳಿಕೆ ಪ್ರಕಟಿಸಿದ್ದರು. ಕಳೆದ ಸಭೆಯಲ್ಲೂ ಅವರ ಸಾಧನೆಯ ಬಗ್ಗೆ ನಾವು ವಿರೋಧ ಮಾಡುವ ಅರಿವಿತ್ತು. ಹಾಗಾಗಿ ಸಭೆಯನ್ನು ಮೊಟಕುಗೊಳಿಸಿದಾಗ ಅವರಿಗೆ ವಿಪಕ್ಷ ಸದಸ್ಯರನ್ನು ಕರೆದು ಮನವರಿಕೆ ಮಾಡಬಹುದಿತ್ತು. ಆದರೆ ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಅರಿವಿಲ್ಲ ಕೇವಲ ಪ್ರಚಾರಕ್ಕಾಗಿ ನಾವು ಸಾಮಾನ್ಯ ಸಭೆ ಮಾಡಲು ಬಿಟ್ಟಿಲ್ಲ ಎಂಬ ಆರೋಪ ಮಾಡಿದ್ದಾರೆ ಎಂದರು.

ಗೋಷ್ಠಿಯಲ್ಲಿ ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ವಿನಯರಾಜ್, ನವೀನ್ ಡಿಸೋಜ, ಲ್ಯಾನ್ಸಿ ಲಾಟ್ ಪಿಂಟೋ, – ಶವ್, ಅಬ್ದುಲ್ ರವೂಫ್, ಅನಿಲ್ ಕುಮಾರ್, ಜೆಸಿಂತಾ ವಿಜಯ ಆಲೈಡ್, ಝೀನತ್ ಸಂಶುದ್ದೀನ್ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments