ಮೇರಮಜಲು: ಗ್ರಾಮ ಪಂಚಾಯಿತಿ ಸದಸ್ಯನ ಮನೆಗೆ ನುಗ್ಗಿ ಹತ್ಯೆ ಯತ್ನ – ಮೂವರ ಬಂಧನ
ಬಂಟ್ವಾಳ: ಇಲ್ಲಿನ ಮೇರಮಜಲು ಸಮೀಪದ ಪಕ್ಕಳಪಾದೆ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ಗ್ರಾಮ ಪಂಚಾಯಿತಿ ಸದಸ್ಯ ಯೋಗೀಶ ಪ್ರಭು ಮನೆಗೆ ನುಗ್ಗಿ ಮಾರಕಾಯುಧಗಳಿಂದ ತೀವ್ರ ಹಲ್ಲೆ ನಡೆಸಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸ್ಥಳೀಯ ನಿವಾಸಿ ಪ್ರಸಾದ್ ಬೆಳ್ಚಡ, ಶ್ರೀಪತಿ ಆಚಾರ್ಯ ಮತ್ತು ಕಾರ್ತಿಕ್ ಆಚಾರ್ಯ ಎಂದು ಗುರುತಿಸಲಾಗಿದ್ದು, ಇವರನ್ನು ಕಟೀಲು ಬಳಿ ಶುಕ್ರವಾರ ಸಂಜೆ ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
‘ಬೆಳಿಗ್ಗೆ ಸುಮಾರು 4ಗಂಟೆಗೆ ಆರೋಪಿಗಳು ಮನೆಯ ಕಾಲಿಂಗ್ ಬೆಲ್ ಮಾಡಿ ಯೋಗೀಶ ಪ್ರಭು ಅವರನ್ನು ಹೊರಗೆ ಕರೆದಿದ್ದಾರೆ. ಬಾಗಿಲು ತೆರೆಯುವಷ್ಟರಲ್ಲಿ ಆರೋಪಿಗಳು ಏಕಾಏಕಿ ನುಗ್ಗಿ ಕುತ್ತಿಗೆ, ಭುಜ, ಕೈ ಮತ್ತಿತರ ಕಡೆಗಳಿಗೆ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ. ಇವರನ್ನು ತಡೆಯಲು ಬಂದ ಯೋಗೀಶ ಪ್ರಭು ಅವರ ಪತ್ನಿ ಶೋಭಾ ಅವರ ಮೇಲೆಯೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ‘ ‘ ಎಂದು ಆರೋಪಿಸಲಾಗಿದೆ.
ಮನೆಯೊಳಗೆ ಸೋಫಾ, ನೆಲದಲ್ಲಿ ರಕ್ತ ಹರಿದ ದೃಶ್ಯ ಕಂಡು ಬಂದಿದ್ದು, ಗಾಯಾಳುಗಳ ಬೊಬ್ಬೆ ಕೇಳಿ ಸ್ಥಳೀಯರು ಬಂದು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳದಲ್ಲಿ ತಲವಾರು, ಚಾಕು ಮತ್ತು ದೊಣ್ಣೆ ಪತ್ತೆಯಾಗಿದೆ. ಗಾಯಾಳು ಶೋಭಾ ಅವರು ನೀಡಿದ ದೂರಿನಂತೆ ಆರೋಪಿಗಳನ್ನು ತಕ್ಷಣವೇ ಬಂಧಿಸಲು ಸಾಧ್ಯವಾಯಿತು’ ಎಂದು ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ತಿಳಿಸಿದ್ದಾರೆ.
ಪ್ರಮುಖ ಆರೋಪಿ ಪ್ರಸಾದ್ ಬೆಳ್ಚಡ ವೈಯಕ್ತಿಕ ದ್ವೇಷದಿಂದಲೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಈ ಹಿಂದೆಯೂ ಆತನು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಎಸ್ಪಿ ಲಕ್ಷ್ಮೀಪ್ರಸಾದ್, ಎಎಸ್ಪಿ ಸೈದುಲ್ ಅದಾವತ್, ಎಸ್ಐ ಪ್ರಸನ್ನ ಎಂ. ನೇತೃತ್ವದ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿರುವುದಾಗಿ ತಿಳಿಸಿದ್ದಾರೆ.