ಮೈಸೂರಿನ ನೂತನ ಧರ್ಮಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದ ಕೆ. ಎಂ. ವಿಲಿಯಂ
ಮೈಸೂರು: ಸಾವಿರಾರು ಕ್ರೈಸ್ತರ ಶುಭ ಹಾರೈಕೆ, ಧರ್ಮಪ್ರಾಂತ್ಯಗಳ ಧರ್ಮಾಧ್ಯಕ್ಷರ (ಬಿಷಪ್) ಆಶೀರ್ವಾದ ಗಳೊಂದಿಗೆ ಮೈಸೂರು ಕೆಥೊಲಿಕ್ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಕೆ.ಎ.ವಿಲಿಯಂ ಅವರು ಇತ್ತೀಚೆಗೆ ಧರ್ಮಾಧ್ಯಕ್ಷ ದೀಕ್ಷೆ ಸ್ವೀಕರಿಸಿ ಪೀಠಾರೋಹಣ ಮಾಡಿದರು.
ನಗರದ ಸೇಂಟ್ ಫಿಲೊಮಿನಾ ಚರ್ಚ್ ಆವರಣದಲ್ಲಿ ಸೋಮವಾರ ಇಳಿಹಗಲು ನಡೆದ ಸಮಾರಂಭದಲ್ಲಿ ಶುಭಸಂದೇಶದ ಗ್ರಂಥವನ್ನು ಶಿರದ ಮೇಲೆ ಇರಿಸಿ, ಹಸ್ತನಿಕ್ಷೇಪ ವಿಧಿ, ಉಂಗುರ ಧಾರಣೆ, ಧಾರ್ಮಿಕ ಸೇವಾ ದಂಡದ ಹಸ್ತಾಂತರದ ಬಳಿಕ ಪೀಠಾ ರೋಹಣ ನೆರವೇರಿತು. ಪೋಪ್ ಅವರ ಆಜ್ಞಾಪತ್ರವನ್ನೂ ಪ್ರದರ್ಶಿಸಲಾಯಿತು.
ಸಂಜೆ 4.30ಕ್ಕೆ ಆರಂಭವಾದ ಧಾರ್ಮಿಕ ವಿಧಿ ವಿಧಾನಗಳು ಸುಮಾರು ಮೂರು ಗಂಟೆಗಳಷ್ಟು ಕಾಲ ನಡೆದವು. ಆರಂಭದಲ್ಲಿ ನಿಯೋಜಿತ, ನಿವೃತ್ತ ಧರ್ಮಾಧ್ಯಕ್ಷರು ಹಾಗೂ ವಿವಿಧ ಧರ್ಮಪ್ರಾಂತ್ಯಗಳ ಧರ್ಮಾಧ್ಯಕ್ಷರ ಮೆರವಣಿಗೆ ನಡೆಯಿತು.
‘ಬಂದಿಹೆ ದೇವಾ ನಿನ್ನಯ ಸನ್ನಿಧಿಗೆ’ ಎಂಬ ಪ್ರವೇಶಗೀತೆ ಹಾಡಲಾಯಿತು. ಬಳಿಕ ವಿವಿಧ ಪತ್ರಗಳ ವಾಚನ ಮಾಡಲಾಯಿತು. ಪವಿತ್ರಾತ್ಮರ ಗೀತೆ ಮೂಲಕ ದೇವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಬಿಷಪ್ ಅವರು ಉಚ್ಚರಿಸಿದ್ದನ್ನು ಸೇರಿದ್ದ ಎಲ್ಲರೂ ಎದ್ದು ನಿಂತು ಅನುಸರಿಸಿದರು.
ಧರ್ಮದೀಕ್ಷೆ ಮತ್ತು ಪೀಠಾರೋಹಣದ ಪ್ರತಿಷ್ಠಾಪಕರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ನೂತನ ಧರ್ಮಾಧ್ಯಕ್ಷ ವಿಲಿಯಂ ಅವರಿಗೆ ಎಲ್ಲರೂ ಶುಭ ಹಾರೈಸಿದರು. ಬಳಿಕ ವಿಲಿಯಂ ಅವರು, ಧರ್ಮಸಭೆಯ ಹಿತಕ್ಕಾಗಿ, ಚುನಾಯಿತರಿಗೆ ಕೃಪೆ ತೋರಲು ಪ್ರಾರ್ಥಿಸುವಂತೆ ಭಿನ್ನವಿ ಸಿದರು.
ಮೈಸೂರು ಧರ್ಮಾಧ್ಯಕ್ಷರಾಗಿದ್ದ ಡಾ.ಥಾಮಸ್ ಅಂಥೋಣಿ ವಾಳಪಿಳ್ಳೈ ಅವರು ರಹಸ್ಯಮಯ ಅಭ್ಯಂಜನದ ತೈಲವನ್ನು ಸುರಿಸಿದರು. ಶುಭ ಸಂದೇಶವನ್ನು ಶಿರದ ಮೇಲೆ ಇರಿಸಿ ದೇವರ ವಾಕ್ಯವನ್ನು ತಾಳ್ಮೆ, ನಿಷ್ಕಳಂಕ ಬೋಧನೆಯಿಂದ ಸಾರುವಂತೆ ಸೂಚಿಸಿದರು. ಪ್ರಾಮಾಣಿಕತೆಯ ಮುದ್ರೆಯಾದ ಉಂಗುರವನ್ನು ಸ್ವೀಕರಿಸಿ ಧರ್ಮಸಭೆಯನ್ನು ನಿಷ್ಕಳಂಕವಾಗಿ ಕಾಪಾಡುವಂತೆ, ಶಿರಸ್ತ್ರಾಣವನ್ನು ಧಾರಣೆ ಮಾಡಿ ಕಳೆಗುಂದದ ಮಹಿಮೆಯ ಮುಕುಟವನ್ನು ಪಡೆಯಲು ಯೋಗ್ಯ ರಾಗಲಿ ಎಂದು ಉಪದೇಶಿಸಿದರು.
ದೇವರ ಧರ್ಮಸಭೆಯನ್ನು ಎಚ್ಚರಿಕೆ ಯಿಂದ ಆಳುವಂತೆ ಸೇವಾದಂಡವನ್ನು ಹಸ್ತಾಂತರಿಸಿದರು. ಬಳಿಕ ಕೆ.ಎ.ವಿಲಿಯಂ ಅವರು ಬಲಿಪೂಜೆ ನೆರವೇರಿಸಿದರು. ನಂತರ ನಡೆದ ಸಮರ್ಪಣಾ ಕಾರ್ಯಕ್ರಮದಲ್ಲಿ ವಿವಿಧ ಪುಷ್ಪಗುಚ್ಛ, ವಿವಿಧ ಕಾಣಿಕೆಗಳನ್ನು ಸ್ವೀಕರಿಸಿದರು. ‘ಬನ್ನಿರಿ ಪ್ರಭು, ಹೃದಯದೊಳು, ತನ್ನಿರಿ ನಿಮ್ಮಯ ಜ್ಯೋತಿಯನು, ನೀಡಿರಿ ನಿಮ್ಮ ಶಾಂತಿಯನ್ನು, ಬಾಳಿಗೆ ಬೆಳಕನ್ನು’ ಎಂಬ ಪರಮ ಪ್ರಸಾದ ಗೀತೆಗಳು ಅನುರಣಿಸಿದವು.
ಬೆಂಗಳೂರು ಮಹಾಧರ್ಮ ಕ್ಷೇತ್ರದ ಮಹಾಧರ್ಮಾಧ್ಯಕ್ಷ ಡಾ.ಬರ್ನಾಡ್ ಮೊರಾಸ್ ಅವರು, ಹೊಸ ಸದಸ್ಯರನ್ನು ಧರ್ಮಸಭೆಗೆ ಆಹ್ವಾನಿಸಿ. ಧರ್ಮಸಭೆ ಇರುವಲ್ಲಿ ಧರ್ಮಾಧ್ಯಕ್ಷರು ಇರುತ್ತಾರೆ. ಧರ್ಮಾಧ್ಯಕ್ಷರ ಮೂಲಕ ಭಕ್ತರಿಗೆ ಆಶೀರ್ವಾದ ಮಾಡಬೇಕು ಎಂದು ಸಲಹೆ ನೀಡಿದರು.
ಚಿಕ್ಕಮಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಟಿ.ಅಂಥೋಣಿಸ್ವಾಮಿ, ಆರಾಧನಾ ವಿಧಿ ಸಮಿತಿಯ ಜೆ.ಬಿ. ಝೇವಿಯರ್, ಗಿಲ್ಬರ್ಟ್ ಅರಾನ್ಹ, ಜೆ.ಜೋಸೆಫ್ ಮರಿ, ಎಫ್.ಸಂಜಯ್ ಕುಮಾರ್ ಇದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕೃಪೆ: ಪ್ರಜಾವಾಣಿ