ಮೋದಿ ಭರವಸೆ ಈಡೇರಿಸದೆ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ – ದಿನೇಶ್ ಗುಂಡೂರಾವ್

Spread the love

ಮೋದಿ ಭರವಸೆ ಈಡೇರಿಸದೆ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ – ದಿನೇಶ್ ಗುಂಡೂರಾವ್

ಮಂಗಳೂರು: ಐದು ವರ್ಷದ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸದೇ ದೇಶದ ಜನರ ವಿಶ್ವಾಸ ಕಳೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೆ ಕೋಮುವಾದಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಆರೋಪಿಸಿದರು.

ಮಂಗಳವಾರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಪರ ಪ್ರಚಾರಕ್ಕೆ ತೆರಳುವ ಮುನ್ನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತನ್ನ ಐದು ವರ್ಷಗಳ ಸಾಧನೆ ಹೇಳಿಕೊಳ್ಳಲು ಪ್ರಧಾನಿ ಬಳಿ ಏನೂ ಇಲ್ಲ. ಈಗ ಜನರನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಚುನಾವಣೆ ಎದುರಿಸುವ ಕುತಂತ್ರ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಹಿಂದುತ್ವದ ಆಧಾರದಲ್ಲಿ ಮತ ಯಾಚಿಸಲು ಮೋದಿ ಹೊರಟಿದ್ದಾರೆ. ಕೋಮುವಾದದ ಅಫೀಮು ಬಿತ್ತಿ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ಯತ್ನಿಸುತ್ತಿದ್ದಾರೆ. ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯಲು ಯತ್ನಿಸುತ್ತಿದ್ದಾರೆ. ಬಿಜೆಪಿ ಬೆಂಬಲಿಸುವವರು ದೇಶಭಕ್ತರು, ಬಿಜೆಪಿ ವಿರೋಧಿಸುವವರು ದೇಶದ್ರೋಹಿಗಳು ಎಂಬ ಹುಸಿ ಸಿದ್ಧಾಂತವನ್ನು ಬಿತ್ತಿ ಜನರ ನಡುವೆ ಒಡಕು ತರಲು ಯತ್ನಿಸುತ್ತಿದ್ದಾರೆ ಎಂದು ಆಪಾದಿಸಿದರು.

ಧೈರ್ಯವಿದ್ದರೆ ಸಾಧನೆ ಹೇಳಲಿ: ‘ಮೋದಿಯವರ ಸಾಧನೆ ಮತ್ತು ತಮ್ಮ ವೈಯಕ್ತಿಕ ಸಾಧನೆಗಳನ್ನು ಮುಂದಿಟ್ಟು ಮತ ಕೇಳುವ ಧೈರ್ಯ ಬಿಜೆಪಿಯ ಯಾವ ಅಭ್ಯರ್ಥಿಗೂ ಇಲ್ಲ. ಅಂತಹ ಧೈರ್ಯ ಯಾರಿಗಾದರೂ ಇದ್ದರೆ ಸಾಧನೆಗಳ ಆಧಾರದಲ್ಲಿ ಮತ ಯಾಚಿಸಲಿ. ಮೋದಿ ಪ್ರಧಾನಿ ಹುದ್ದೆಯಲ್ಲಿ ಕುಳಿತುಕೊಂಡು ದೇಶದ ಜನರಿಗೆ ಹೇಳಿದ ಸುಳ್ಳುಗಳ ಕುರಿತು ಬಿಜೆಪಿ ನಾಯಕರು ಬಹಿರಂಗ ಚರ್ಚೆಗೆ ಬರಲಿ’ ಎಂದು ದಿನೇಶ್‌ ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ಮಾಡುತ್ತಿದೆ. ಆದರೆ, ಮೋದಿ ಕೀಳುಮಟ್ಟದ ಮಾತಿನ ಮೂಲಕ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಸ್ಪರ್ಧೆಯನ್ನೂ ಕೋಮುವಾದಿ ದೃಷ್ಟಿಯಿಂದ ನೋಡುತ್ತಿದ್ದಾರೆ. ಪ್ರಧಾನಿ ಮಾರ್ಕೆಟಿಂಗ್ ಚತುರನಾಗಿ ಕೆಲಸ‌ ಮಾಡುತ್ತಿದ್ದಾರೆ ಎಂದು ದೂರಿದರು.

ನ್ಯಾಯ್ ಯೋಜನೆ, ನರೇಗಾ ಕೆಲಸದ ದಿನಗಳ ಹೆಚ್ಚಳ, ಮಹಿಳಾ ಮೀಸಲಾತಿ ಜಾರಿ ಸೇರಿದಂತೆ ಕ್ರಾಂತಿಕಾರಿ ಅಂಶಗಳನ್ನು ಕಾಂಗ್ರೆಸ್ ಪ್ರಣಾಳಿಕೆ ಒಳಗೊಂಡಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಎಲ್ಲ ಭರವಸೆಗಳನ್ನೂ ಈಡೇರಿಸುತ್ತದೆ ಎಂಬ ನಂಬಿಕೆ ಮತದಾರರಲ್ಲಿ ಇದೆ. ಈ ಬಾರಿ ಕಾಂಗ್ರೆಸ್ ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ ಕೆಳಕ್ಕೆ ಇಳಿಯಲಿದೆ ಎಂದರು.

ಮಿಥುನ್‌ ಗೆಲುವು ನಿಶ್ಚಿತ: ನಳಿನ್ ಕುಮಾರ್ ಕಟೀಲ್ ಒಬ್ಬ ವಿಫಲ ಸಂಸದ. ಕೋಮುವಾದದ ಮೂಲಕ ಬೆಂಕಿ ಹಚ್ಚುವುದಷ್ಟೇ ಅವರಿಗೆ ಗೊತ್ತು. ಕರಾವಳಿಯ ಹೆಮ್ಮೆಯ ವಿಜಯ ಬ್ಯಾಂಕ್‌ ಅನ್ನು ವಿಲೀನ ಮಾಡುವಾಗ ಈ ಸಂಸದ ಮೌನಕ್ಕೆ ಶರಣಾಗಿದ್ದರು. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಜನರು ಯುವ ನಾಯಕ‌ ಮಿಥುನ್‌ ರೈ ಅವರನ್ನು ಬೆಂಬಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಮಿಥುನ್‌ ಲೋಕಸಭೆ ಪ್ರವೇಶಿಸುವುದು ನಿಶ್ಚಿತ ಎಂದು ದಿನೇಶ್‌ ಹೇಳಿದರು.

‘ಪಕ್ಷದ ಹಿರಿಯ ಮುಖಂಡರಾದ ಬಿ.ಜನಾರ್ದನ ಪೂಜಾರಿ ಒಳ್ಳೆಯ ರೀತಿಯಲ್ಲಿ ಮಿಥುನ್‌ ಅವರನ್ನು ಆಶೀ
ರ್ವದಿಸಿದ್ದಾರೆ. ಜಿಲ್ಲೆಯ ಎಲ್ಲ ಮುಖಂಡರು ಒಮ್ಮತದಿಂದ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಜೆಡಿಎಸ್‌ ಕೂಡ ಸಂಪೂರ್ಣ ಬೆಂಬಲ ನೀಡಿದೆ’ ಎಂದರು.

ಎಐಸಿಸಿ ಕಾರ್ಯದರ್ಶಿ ಪಿ.ಸಿ.ವಿಷ್ಣುನಾಥನ್‌, ಸಚಿವ ಯು.ಟಿ.ಖಾದರ್‌, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್‌ಕುಮಾರ್, ಮಿಥುನ್‌ ರೈ, ಮಾಜಿ ಶಾಸಕ ಜೆ.ಆರ್‌.ಲೋಬೊ, ಪಕ್ಷದ ಮುಖಂಡರಾದ ತಾರಾನಾಥ ಕಳ್ಳಿಗೆ, ಕಣಚೂರು ಮೋನು, ಎ.ಸಿ.ವಿನಯರಾಜ್‌, ಸಂತೋಷ್‌ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.


Spread the love