ಮೋದಿ, ಶಾ ಅವರೇ ಬರ ಪರಿಹಾರ ನೀಡದೆ ಕರ್ನಾಟಕಕ್ಕೆ ಬಂದರೆ ಬಹಿಷ್ಕಾರ ಎದುರಿಸಲು ಸಿದ್ಧರಾಗಿ:  ಸುರ್ಜೇವಾಲಾ ಎಚ್ಚರಿಕೆ

Spread the love

ಮೋದಿ, ಶಾ ಅವರೇ ಬರ ಪರಿಹಾರ ನೀಡದೆ ಕರ್ನಾಟಕಕ್ಕೆ ಬಂದರೆ ಬಹಿಷ್ಕಾರ ಎದುರಿಸಲು ಸಿದ್ಧರಾಗಿ:  ಸುರ್ಜೇವಾಲಾ ಎಚ್ಚರಿಕೆ

ಮಂಗಳೂರು: ಕರ್ನಾಟಕ ರಾಜ್ಯ ಸರಕಾರವು ನ್ಯಾಯಯುತವಾಗಿ ಬರಪರಿಹಾರಕ್ಕಾಗಿ ಕೇಂದ್ರಕ್ಕೆ ಸಲ್ಲಿಸಿರುವ ಮನವಿ ಯನ್ನು ತಿರಸ್ಕರಿಸಿ ಪ್ರತೀಕಾರದ ನಿಲುವನ್ನು ತೋರ್ಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಬರ ಪರಿಹಾರವನ್ನು ಬಿಡುಗಡೆ ಮಾಡದೆ ಮತ ಯಾಚನೆಗಾಗಿ ಕರ್ನಾಟಕ ರಾಜ್ಯಕ್ಕೆ ಕಾಲಿಡಬಾರದು.

ಬಂದಲ್ಲಿ ರಾಜ್ಯದ ರೈತರು ಸೇರಿದಂತೆ ಎಲ್ಲ ವರ್ಗದ ಜನರಿಂದ ಬಹಿಷ್ಕಾರವನ್ನು ಎದುರಿಸಬೇಕಾದೀತು ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ.

ಅವರು ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಬರ ಪರಿಹಾರ ವರದಿಯ ಪ್ರಕಾರ 18,172 ಕೋಟಿ ರೂ. ಕರ್ನಾಟಕದ ಜನತೆಗೆ ನೀಡುವುದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಜವಾಬ್ದಾರಿ. ನೀಡಬೇಕಾದ್ದನ್ನು ನೀಡದೆ ಈಗ ರಾಜ್ಯಕ್ಕೆ ಓಟು ಕೇಳಲು ಬರುತ್ತಿದ್ದಾರೆ. ಇಂದು ರಾತ್ರಿಯೊಳಗೆ ಬರ ಪರಿಹಾರ ಅನುದಾನ ಬಿಡುಗಡೆ ಮಾಡಿ, ಇಲ್ಲದಿದ್ದರೆ ಕರ್ನಾಟಕಕ್ಕೆ ಬರಬೇಡಿ ಎಂದರು.

ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ, ರೈತರು ಬಿಜೆಪಿಗೆ ಬೆಂಬಲಿಸಿಲ್ಲ ಎಂಬ ಏಕೈಕ ದ್ವೇಷದಿಂದ ಕೇಂದ್ರ ಬಿಜೆಪಿ ಸರಕಾರ ಬರ ಪರಿಹಾರ ನೀಡಿಲ್ಲ. ಅನುದಾನ ನೀಡದೆ ಇದ್ದರೆ ಈ ಬಾರಿಯೂ ಕರ್ನಾಟಕದ ಜನ ಬಿಜೆಪಿಯನ್ನು ಶೂನ್ಯಕ್ಕೆ ಸೀಮಿತಗೊಳಿಸಲಿದ್ದಾರೆ ಎಂದರು.

2023 ಸೆ.13ರಂದು ರಾಜ್ಯ ಸರಕಾರ ಬರ ಘೋಷಣೆ ಮಾಡಿತ್ತು. ಸೆ.22ರಂದು 18,172 ಕೋಟಿ ರೂ. ಬರ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಅದರ ಆಧಾರದಲ್ಲಿ ಅ.9ರಂದು ಕೇಂದ್ರ ಸರಕಾರದ ತಂಡ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅ.25ರಂದು ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಅದರ ನಂತರ ರಾಜ್ಯದ ಸಚಿವರಿಗೆ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಭೇಟಿಗೆ ಅವಕಾಶವನ್ನೇ ನೀಡಿಲ್ಲ. ಹಾಗಾಗಿ ನ.25ರಂದು ರಾಜ್ಯದ ಮೂವರು ಸಚಿವರು ದೆಹಲಿಗೆ ತೆರಳಿ ಕೃಷಿ ಮತ್ತು ಗೃಹ ಸಚಿವಾಲಯದ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದಾರೆ. ಡಿ.19ರಂದು ಸ್ವತಃ ಮುಖ್ಯಮಂತ್ರಿ ಪ್ರಧಾನಿ, ಅಮಿತ್ ಶಾ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ. ಆದರೂ ಈಡೇರದೆ ಇದ್ದಾಗ ದೆಹಲಿಯ ಜಂತರ್ ಮಂತರ್‌ನಲ್ಲಿ ಕರ್ನಾಟಕ ಸರಕಾರದಿಂದ ಪ್ರತಿಭಟನೆ ನಡೆದಿತ್ತು. ಆದರೆ ಅದಕ್ಕೂ ಮನ್ನಣೆ ಸಿಗದಾಗ ವಿಧಿ ಇಲ್ಲದೆ, ಕೊನೆಯ ಅಸ್ತ್ರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಸಂಪೂರ್ಣ 5 ತಿಂಗಳು ಕರ್ನಾಟಕಕ್ಕೆ ಬರ ಪರಿಹಾರ ನೀಡದೆ ಕೇಂದ್ರ ಸತಾಯಿಸಿದೆ. ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಈ ವಿಚಾರಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಸೌಹಾರ್ದಯುತವಾಗಿ ಬಗೆಹರಿಸಬೇಕಿತ್ತು ಎಂದಿದೆ. ಇದು ರಾಜ್ಯದ ರೈತರು ಹಾಗೂ ರಾಜ್ಯದ ಜನತೆಗೆ ದೊರೆತ ಬಹುದೊಡ್ಡ ವಿಜಯ ಎಂದು ಸುರ್ಜೇವಾಲಾ ಹೇಳಿದರು.

ಕೇಂದ್ರ ಸರಕಾರದಿಂದ ರಾಜ್ಯದ ಮೇಲಿನ ದ್ವೇಷ, ಪ್ರತೀಕಾರದ ರಾಜಕೀಯ ಕೇವಲ ಬರ ಬರಿಹಾರ ನೀಡದಿರುವುದಕ್ಕೆ ಸೀಮಿತವಾಗಿಲ್ಲ. 15ನೆ ಹಣಕಾಸಿನಡಿ ರಾಜ್ಯದ ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ 58000 ಕೋಟಿ ರೂ. ಭದ್ರಾ ಅಣೆಕಟ್ಟಿಗೆ ಕೇಂದ್ರದಿಂದ 6000 ಕೋಟಿ ರೂ., ಹೈದರಾಬಾದ್ ಮಾದರಿಯಲ್ಲಿ ಬೆಂಗಳೂರು ಫೆರಿಫೆರಲ್ ರಸ್ತೆಗೆ 30,000 ಕೋಟಿ ರೂ. ಯಾಕೆ ನಿರಾಕರಣೆ ಮಾಡಲಾಯಿತು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಅವರು ಪ್ರತಿ ಸವಾಲು ಹಾಕಿದರು.

ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ತೆರಿಗೆ ನೀಡುವ 2ನೇ ದೊಡ್ಡ ರಾಜ್ಯವಾಗಿದ್ದರೂ ರಾಜ್ಯ ನೀಡಿದ ತೆರಿಗೆ ಹಣದ ಕೇವಲ ಶೇ.13 ವಾಪಸ್ ನೀಡಿ ಕೇಂದ್ರ ದ್ವೇಷ ಸಾಧಿಸುತ್ತಿದೆ. ದೇಶದ ಅಭಿವೃದ್ಧಿ ಅತ್ಯಗತ್ಯ. ಆದರೆ ತೆರಿಗೆ ಹಣದಲ್ಲಿ 100 ರೂ.ನಲ್ಲಿ ರಾಜ್ಯಕ್ಕೆ 13 ರೂ. ಮಾತ್ರ ಸಿಗುವುದು. ನ್ಯಾಯಯುತ ತೆರಿಗೆ ಪಾಲು ನೀಡಬೇಕಲ್ಲವೇ? ಕೇಂದ್ರದ ಈ ತಾರತಮ್ಯದಿಂದ ರಾಜ್ಯದ ಜನತೆ, ರೈತರು ಬವಣೆಪಡುವಂತಾಗಿದೆ ಎಂದು ರಣದೀಪ್ ಸುರ್ಜೇವಾಲಾ ತಿಳಿಸಿದರು.

ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಜಾಹೀರಾತಿನ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ರಣದೀಪ್ ಸುರ್ಜೇವಾಲಾ, 10 ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಚುನಾವಣಾ ಪೂರ್ವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದರಲ್ಲದೆ, 2022ಕ್ಕೆ ರೈತರ ಆದಾಯ ದ್ವಿಗುಣ ಗೊಳಿಸುವುದಾಗಿ ಹೇಳಿದ್ದರು. ಸ್ಮಾರ್ಟ್ ಸಿಟಿಗಳನ್ನು ಮಾಡುವುದಾಗಿ ಘೋಷಿಸಿದ್ದರು. ಆದರೆ ಬಿಜೆಪಿಯದ್ದು ಕೇವಲ ಚೊಂಬು ಮಾದರಿಯಷ್ಟೇ ಎಂದು ಹೇಳುತ್ತಾ ಪತ್ರಿಕಾಗೋಷ್ಠಿಯಲ್ಲೂ ಚೆಂಬು ಪ್ರದರ್ಶಿಸಿದರು.

  ಗೋಷ್ಟಿಯಲ್ಲಿ ಮುಖಂಡರಾದ ವಿನಯ ಕುಮಾರ್ ಸೊರಕೆ, ಡಾ. ಮಂಜುನಾಥ ಭಂಡಾರಿ, ಸಲೀಂ ಅಹ್ಮದ್, ಹರೀಶ್ ಕುಮಾರ್, ಇನಾಯತ್ ಅಲಿ, ಜೆ.ಆರ್. ಲೋಬೊ, ಐವನ್ ಡಿಸೋಜಾ, ಸೂರಜ್, ಮಿಥುನ್ ರೈ, ಇಬ್ರಾಹಿಂ, ವಿಜಯ್ ರಕ್ಷಿತ್ ಶಿವರಾಂ, ಸದಾಶಿವ ಉಳ್ಳಾಲ್, ಮಮತಾ ಗಟ್ಟಿ, ಇಬ್ರಾಹಿಂ ಕೋಡಿಜಾಲ್ ಮೊದಲಾದವರು ಉಪಸ್ಥಿತರಿದ್ದರು.


Spread the love