ಮೋದಿ ಸರಕಾರ ಜನರಿಗೆ ಸುಳ್ಳು ಹೇಳುತ್ತ, ಭಯದ ವಾತಾವರಣ ಸೃಷ್ಟಿಸುತ್ತಿದೆ ; ಈಶ್ವರ ಖಂಡ್ರೆ

Spread the love

ಮೋದಿ ಸರಕಾರ ಜನರಿಗೆ ಸುಳ್ಳು ಹೇಳುತ್ತ, ಭಯದ ವಾತಾವರಣ ಸೃಷ್ಟಿಸುತ್ತಿದೆ ; ಈಶ್ವರ ಖಂಡ್ರೆ

ಉಡುಪಿ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಈ ದೇಶದ ಜನರಿಗೆ ಸುಳ್ಳು ಹೇಳುತ್ತ, ಭಯದ ವಾತಾವರಣ ಸೃಷ್ಟಿಸುತ್ತಿದೆ ಹೊರತು, ಇಲ್ಲಿಯವರೆಗೆ ಯಾವುದೇ ಭರವಸೆ ಈಡೇರಿಸಿಲ್ಲ ಎಂದು ರಾಜ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದರು.

ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ರಾಜ್ ಸಂಘಟನೆಯ ವತಿಯಿಂದ ಗಾಂಧೀಜಿ ಉದ್ಯಾವರ ಮೂಲಕ ಉಡುಪಿ ಅಜ್ಜರಕಾಡಿಗೆ ಬಂದು ಭಾಷಣ ಮಾಡಿದ ಐತಿಹಾಸಿಕ ದಿನವನ್ನು ಮರು ನೆನಪಿಸುವ ನಿಟ್ಟಿನಲ್ಲಿ ಸೋಮವಾರ ಉದ್ಯಾವರ ಬೊಳ್ಜೆ ಕಡವಿನಬಾಗಿಲುವಿನಿಂದ ಅಜ್ಜರಕಾಡಿನ ವರೆಗೆ ಹಮ್ಮಿಕೊಳ್ಳಲಾಗಿರುವ ಗಾಂಧಿಯಾನ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ನಾಲ್ಕುವರೆ ವರ್ಷದಲ್ಲಿ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಕಪ್ಪು ಹಣ ವಾಪಾಸ್ 2ಕೋಟಿ ಉದ್ಯೋಗ ಸೇರಿದಂತೆ ಯಾವುದೇ ಒಂದು ಭರವಸೆ ಈಡೇರಿಸಿಲ್ಲ. ಬರೀ ಸುಳ್ಳು ಹೇಳಿಕೊಂಡು ತಿರುಗಿದ್ದೇ ಇವರ ದೊಡ್ಡ ಸಾಧನೆ. ಚುನಾವಣೆಗೆ ಮುಂಚೆ ಪ್ರಧಾನಿ ಮೋದಿಯವರು ಅಧಿಕಾರ ಹಿಡಿಯುವ ಉದ್ದೇಶದಿಂದ ದೇಶದ ಜನರಿಗೆ ಕಪ್ಪುಹಣ ವಾಪಾಸ್, ನಿರುದ್ಯೋಗಿಗಳಿಗೆ 2ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಅದು ಹುಸಿಯಾಗಿದೆ. ಇವರಿಗೆ ಬಡವರ , ರೈತರ, ಮಹಿಳೆಯರ, ಕಾರ್ಮಿಕರ ಹಾಗು ದಲಿತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಬರೀ ಸುಳ್ಳು ಹೇಳೋದೇ ನಿತ್ಯದ ಕಾಯಕವಾಗಿದೆ. ಕಳೆದ ನಾಲ್ಕುವರಿ ವರ್ಷದ ಆಡಳಿತ ನೋಡಿದರೆ ಜನರಿಗೆ ಇವರ ಆಡಳಿತ ವೈಫಲ್ಯ ಅರ್ಥವಾಗುತ್ತಿದೆ ಎಂದರು.

ಸಿಬಿಐ, ಐಟಿ, ಇಡಿ ಮುಂತಾದ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು, ಯಾರು ಅವರ ವಿರುದ್ದ ಮಾತನಾಡುತ್ತಾರೋ ಅಂಥವರ ವಿರುದ್ದ ಸಿಬಿಐ, ಐಟಿ ಗಳನ್ನು ಛೂಬಿಟ್ಟು ಪ್ರತಿ ಪಕ್ಷಗಳನ್ನು ಹಣಿಯುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಸ್ವರ್ಥಕ್ಕಾಗಿ ಮತಗಳ ಧ್ರವೀಕರಣಕ್ಕಾಗಿ ಇಂಥ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಇಂಥವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಬೇಕು ಎಂದರು. ಬಿಜೆಪಿ ಕಾಂಗ್ರೆಸ್ ಸರಕಾರಗಳ ಬಗ್ಗೆ ಅಪಪ್ರಚಾರ ಮಾಡುತ್ತಿದೆ. ಆದುದರಿಂದ ನಮ್ಮ ಕಾರ್ಯಕ್ರಮಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.

ಬಿಜೆಪಿಯು ಗಾಂಧೀಜಿಯ ಕನಸುಗಳನ್ನು ನುಚ್ಚು ನೂರು ಮಾಡುತ್ತಿದೆ. ನೀಚ, ಕೀಳುಮಟ್ಟದ ಹಾಗೂ ಧ್ವೇಷದ ರಾಜಕಾರಣಕ್ಕೆ ಬಿಜೆಪಿ ಮುಖಂಡರು ಇಳಿದಿದ್ದಾರೆ. ಇಂದು ಭಾರತ ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಕಾನೂನು ಸುವ್ಯವಸ್ಥೆ ಹಾಗೂ ಅಖಂಡತೆ, ಸಮಗ್ರತೆಯು ಅಪಾಯದಲ್ಲಿದ್ದು, ಇದನ್ನು ಉಳಿಸಲು ಗಾಂಧಿ ತತ್ವ, ಆದರ್ಶಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಭಂಡಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಸಂಘಟನೆಯ ರಾಜ್ಯ ಪ್ರಮುಖರಾದ ರಂಗ ಸ್ವಾಮಿ, ನವೀನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್, ಜಿಲ್ಲಾ ಉಸ್ತುವಾರಿ ಜಿ.ಎ. ಬಾವಾ, ಮುಖಂಡರಾದ ಸತೀಶ್ ಅಮೀನ್ ಪಡುಕೆರೆ, ವರೋನಿಕಾ ಕರ್ನೆಲಿಯೋ, ಇಸ್ಮಾಯಿಲ್ ಆತ್ರಾಡಿ, ಗೀತಾ ವಾಗ್ಳೆ, ವಿಶ್ವಾಸ್ ಅಮೀನ್, ಉದ್ಯಾವರ ನಾಗೇಶ್ ಕುಮಾರ್, ಇಬ್ರಾಹಿಂ ಮಟಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಸ್ವಾಗತಿಸಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಡಾ.ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಾದಯಾತ್ರೆಯು ಉದ್ಯಾವರ, ಬಲಾಯಿಪಾದೆ ಮಾರ್ಗವಾಗಿ ಉಡುಪಿ ಅಜ್ಜರಕಾಡು ಗಾಂಧಿ ಪ್ರತಿಮೆವರೆಗೆ ಸಾಗಿಬಂತು. ಅಲ್ಲಿ ತೆಂಕನಿಡಿ ಯೂರು ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ ಪ್ರೊ.ಪ್ರಸಾದ್ ರಾವ್ ಎಂ. ಗಾಂಧಿ ಚಿಂತನೆಯ ಕುರಿತು ಮಾತನಾಡಿದರು.


Spread the love