ಮೋದಿ ಸರಕಾರದ ತಪ್ಪು ಆರ್ಥಿಕ ನೀತಿಗಳು ಯುವಜನರಿಗೆ ಮಾರಕ -ಬಿ. ಕೆ ಇಂತಿಯಾಜ್
ಮಂಗಳೂರು : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶದ ಮೇಲೆ ಹೇರಲಾಗಿರುವ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿಯ ಮೊದಲ ಬಲಿಪಶುಗಳು ಯುವಜನರಾಗಿದ್ದರೆ ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಂತಿಯಾಜ್ ಹೇಳಿದ್ದಾರೆ.
ಅವರು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜರಗಿದ “ಉದ್ಯೋಗ ಸೃಷ್ಟಿಸಿ ನಿರುದ್ಯೋಗದಿಂದ ರಕ್ಷಿಸಿ ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಆಗ್ರಹಿಸಿ, ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಲು ಮತ್ತು ಜಿಲ್ಲೆಯ ಬೃಹತ್ ಕೈಗಾರಿಕೆಗಳಲ್ಲಿ ಸ್ಥಳೀಯ ಯುವಜನರಿಗೆ ಉದ್ಯೋಗ ಅವಕಾಶ ನೀಡಲು ಒತ್ತಾಯಿಸಿ ನಡೆದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆಯೊಂದಿಗೆ ಈ ಹಿಂದಿನ ಚುನಾವಣೆಯಲ್ಲಿ ಮೊತ್ತಮೊದಲು ಅಧಿಕಾರಕ್ಕೆ ಬಂದ ಬಿಜೆಪಿ ಎರಡನೇ ಅವಧಿಯಲ್ಲಿ ಕೂಡ ಕೇಂದ್ರದಲ್ಲಿ ಅಧಿಕಾರವನ್ನು ವಹಿಸಿಕೊಂಡಿದೆ ಆದರೆ ಉದ್ಯೋಗಗಳು ಸೃಷ್ಟಿಯಾಗಲಿಲ್ಲ ಬದಲಾಗಿ ನರೇಂದ್ರ ಮೋದಿ ಸರಕಾರದ ಆರ್ಥಿಕ ನೀತಿಗಳ ವೈಫಲ್ಯಗಳಿಂದ ಮೊತ್ತಮೊದಲು ಯುವಜನತೆ ಬಲಿಯಾಗುತ್ತಿದೆ. ಕೇಂದ್ರದ ಆರ್ಥಿಕ ನೀತಿಗಳಿಂದಾಗಿ ಉದ್ಯಮಿಗಳು ಉದ್ಯಮ ಕ್ಷೇತ್ರವನ್ನು ಮುಚ್ಚುವ ಸ್ಥಿತಿಯನ್ನು ತಲುಪಿದ್ದು ಇದರಿಂದ ಉದ್ಯೋಗಗಳು ಸೃಷ್ಟಿಯಾಗುವ ಬದಲು 7 ಲಕ್ಷಕ್ಕೂ ಮಿಕ್ಕಿದ ಉದ್ಯೋಗಗಳು ಕಳೆದ ಕೆಲವೇ ತಿಂಗಳಲ್ಲಿ ನಷ್ಟಗೊಂಡು ದಿನೇ ದೀನೇ ಇದರ ಸಂಖ್ಯೆ ಹೆಚ್ಚುತ್ತಲೇ ಇದ್ದು ದೇಶವು ಗಂಭೀರ ಸ್ಥಿತಿಯನ್ನು ತಲುಪಿದೆ. ಇನ್ನುಳಿದಂತೆ ದ.ಕ ಜಿಲ್ಲೆಯ ನಿರುದ್ಯೋಗದ ಸ್ಥಿತಿಯು ಹೇಳತೀರದಾಗಿದೆ.ಇಲ್ಲಿನ ಮಂಗಳೂರು ನಗರಪಾಲಿಕೆಯಲ್ಲಿ 540 ಹುದ್ದೆಗಳು,ಮೆಸ್ಕಾಂ ಮಂಗಳೂರು ವೃತ್ತದಲ್ಲಿ 2690, ಪಿಡಬ್ಲ್ಯೂಡಿ ಕಚೇರಿಯಲ್ಲಿ 39 ಹುದ್ದೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 84 ಹುದ್ದೆಗಳು, ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ351, ಹುದ್ದೆಗಳು, ಶಿಕ್ಷಣ ಇಲಾಖೆಯಲ್ಲಿ 274 ಶಿಕ್ಷಕೇತರ ಹುದ್ದೆಗಳು,ಕಾರ್ಮಿಕ ಇಲಾಖೆಯಲ್ಲಿ 17 ಹುದ್ದೆಗಳು ಜಿಲ್ಲೆಯ ವಿವಿಧ ಎಪಿಎಂಸಿ ಗಳಲ್ಲಿ 97 ಹುದ್ದೆಗಳು ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 384, ಜಿಲ್ಲೆಯ ವಿವಿಧ ಪಂಚಾಯತ್ ಕಾರ್ಯದರ್ಶಿ ಮತ್ತು ಪಿಡಿಓ ಹುದ್ದೆಗಳು ಒಟ್ಟು 126, ಕಂದಾಯ ಇಲಾಖೆಯಲ್ಲಿ 1000ಕ್ಕೂ ಮಿಕ್ಕ ಖಾಲಿ ಹುದ್ದೆಗಳು ಸೇರಿ ಹೀಗೆ ಜಿಲ್ಲೆಯ ವಿವಿಧ ಸರಕಾರಿ ಇಲಾಖೆಗಳಲ್ಲಿ 13 ಸಾವಿರಕ್ಕೂ ಮಿಕ್ಕಿ ಹುದ್ದೆಗಳು ಖಾಲಿ ಇದ್ದು ಸರಕಾರ ಇದನ್ನು ಭರ್ತಿಗೊಳಿಸುತ್ತಿಲ್ಲ ಇದನ್ನು ಕೂಡಲೇ ಭರ್ತಿಗೊಳಿಸಬೇಕೆಂದು ಆಗ್ರಹಿಸಿದರು.
ನಗರ ಪೊಲೀಸ್ ಕಮಿಷನರೇಟ್ ಗೆ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಪಶ್ಚಿಮ ವಲಯ ಐಜಿಪಿ ವ್ಯಾಪ್ತಿಯ ಯುವ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಬೇಕೆಂದು ಸಲಹೆ ನೀಡಿದರು. ಎಂ.ಆರ್.ಪಿ.ಎಲ್, ಎಸ್ಇಝೆಡ್, ಓ.ಎನ್.ಜಿ.ಸಿ ಗಳಲ್ಲಿ, ರೈಲ್ವೆ ಮತ್ತು ಬ್ಯಾಂಕುಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕೆಂದು ಬಿ.ಕೆ ಇಂತಿಯಾಜ್ ಒತ್ತಾಯಿಸಿದರು.
ಮಾಜಿ ಜಿಲ್ಲಾಧ್ಯಕ್ಷರಾದ ದಯಾನಂದ್ ಶೆಟ್ಟಿ ಮಾತನಾಡುತ್ತಾ ಜಿಲ್ಲೆಯಲ್ಲಿ MRPL,MSEZ ಕೈಗಾರಿಕೆಗಳು ಜಿಲ್ಲೆಯ ನೆಲವನ್ನೆ ಬಳಸಿಕೊಂಡು ಇಲ್ಲಿನ ಪರಿಸರವನ್ನು ಕಲುಷಿತಗೊಳಿಸಿ ಇಲ್ಲಿದ್ದರೂ ಕೂಡ ಕೈಗಾರಿಕೆಗಳಲ್ಲಿ ದಕ್ಷಿಣಕನ್ನಡದ ಯುವಜನರಿಗೆ ಕೆಲಸಗಳಿಲ್ಲ ಇಲ್ಲಿನ ರೈಲ್ವೆ ವ್ಯವಸ್ಥೆಯಲ್ಲಿಯೂ ಕೂಡ ಸ್ಥಳೀಯರಿಗೆ ಅವಕಾಶಗಳಿಲ್ಲ ಹಾಗಾಗಿ ಇಲ್ಲಿನ ಸ್ಥಳೀಯರಿಗೆ ಸ್ಥಳೀಯ ಕೈಗಾರಿಕೆಗಳಲ್ಲಿ ಅವಕಾಶ ನೀಡಬೇಕು ಎಂದರು.
ಧರಣಿಯನ್ನು ಉದ್ದೇಶಿಸಿ
ಡಿವೈಎಫ್ಐ ಜಿಲ್ಲಾ ಖಜಾಂಚಿ ಮನೋಜ್ ವಾಮಂಜೂರು, ಜಿಲ್ಲಾ ಮುಖಂಡರಾದ ಅಶ್ರಫ್ ಕೆ. ಸಿ ರೋಡ್, ಶ್ರೀನಾಥ್ ಕುಲಾಲ್ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ನವೀನ್ ಕೊಂಚಾಡಿ ಸ್ವಾಗತಿಸಿದರು, ಜಿಲ್ಲಾ ಸಹ ಕಾರ್ಯದರ್ಶಿ ಸಾಧಿಕ್ ಕಣ್ಣೂರು ವಂದಿಸಿದರು. ಜಿಲ್ಲಾ ಮುಖಂಡರಾದ ನಿತಿನ್ ಕುತ್ತಾರ್, ರಝಕ್ ಮೊಂಟೆಪದವು, ಸುನಿಲ್ ತೇವುಲ, ರಫೀಕ್ ಹರೇಕಳ, ನೌಶಾದ್ ಬೆಂಗರೆ, ಪ್ರಶಾಂತ್ ಎಂ.ಬಿ, ಅಶ್ರಫ್ ಹರೇಕಳ l, ದಿನೇಶ್ ಬೊಂಡಂತಿಲ, ರಿಯಾಜ್ ಮೂಡುಬಿದ್ರಿ ಉಪಸ್ಥಿತರಿದ್ದರು