ಮಂಗಳೂರು: ಅಂತರ್ಜಾಲ ಸುದ್ದಿಮಾಧ್ಯಮ ಮ್ಯಾಂಗಲೋರಿಯನ್ ಡಾಟ್ ಕಾಮ್ ಕೇವಲ ನಿಷ್ಪಕ್ಷಪಾತ ಸುದ್ದಿಯನ್ನು ಓದುಗರಿಗೆ ನೀಡುವುದು ಮಾತ್ರವಲ್ಲದೆ ಹಲವಾರು ಸಮಾಜಪರ ಜಾಗೃತಿ ಕೆಲಸಗಳಾದ ಆರೋಗ್ಯ, ಸಮಾಜದ ಅಶಕ್ತರಿಗೆ ನೆರವು ನೀಡುವ ಹಲವು ಕೆಲಸಗಳನ್ನು ಮಾಡುತ್ತಾ ಬಂದಿರುತ್ತದೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ, ಮ್ಯಾಂಗಲೋರಿಯನ್ ಡಾಟ್ ಕಾಮ್, ಕೆ ಎಮ್ ಸಿ ಆಸ್ಪತ್ರೆ ಹಾಗೂ ನಗರ ಪೋಲಿಸ್ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮ ಶನಿವಾರ ಮಂಗಳೂರು ನಗರ ಪೋಲಿಸ್ ಆಯುಕ್ತರ ಕಛೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ನಗರ ಪೋಲಿಸ್ ಆಯುಕ್ತ ಚಂದ್ರಶೇಖರ್ ಉದ್ಘಾಟನೆ ನಡೆಸಿದರು.
ಉದ್ಘಾಟನಾ ಸಂದೇಶದಲ್ಲಿ ಮಾತನಾಡಿದ ಚಂದ್ರಶೇಖರ್ ನಮ್ಮ ಜೀವನದಲ್ಲಿ ಹಲವು ರೀತಿಯ ಸಮಸ್ಯೆಗಳಿವೆ. ಕೆಲಸದ ಒತ್ತಡದಿಂದಾಗಿ ಕಾಯಿಲೆ ಬೀಳುವುದು ಸಾಮಾನ್ಯ. ಕಾಯಿಲೆಯಿಂದ ಮನಸ್ಸು ಗೊಂದಲ ಹಾಗೂ ಹೆದರಿಕೆ ಕಾರಣವಾಗುತ್ತದೆ. ಪೋಲಿಸರು ತಾವು ಕಾಯಿಲೆ ಬೀಳುವುದಿಲ್ಲ ಎಂಬ ಭ್ರಮೆಯಲ್ಲಿ ವೈದ್ಯರನ್ನು ಭೇಟಿ ಮಾಡುವುದನ್ನು ಮರೆಯುತ್ತಾರೆ. ಪೋಲಿಸ್ ಇಲಾಖೆಗೆ ಸೇರುವಾಗ ದೈಹಿಕ ಕ್ಷಮತೆಯನ್ನು ಗುರುತಿಸಿ ಇಲಾಖೆಗೆ ಸೇರ್ಪಡೆಗೊಳ್ಳುತ್ತಾರೆ. ಒಮ್ಮೆ ಪೋಲಿಸ್ ಇಲಾಖೆಗೆ ಸೇರ್ಪಡೆಗೊಂಡ ಬಳಿಕ ಆರೋಗ್ಯದ ಬಗ್ಗೆ ಗಮನ ಹರಿಸುವುದದನ್ನು ಮರೆಯುತ್ತಾರೆ.
ವಾಹನವನ್ನು ಬಿಡುವಿಲ್ಲದೆ ಒಡಿಸಿದಾಗ ಅದು ಕೂಡ ಹಾಳಾಗುತ್ತದೆ ಅದರಂತೆಯೇ ಪೋಲಿಸರು ಕೂಡ ಆರಂಭದಲ್ಲಿ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗಲೇ ವ್ಯೆದ್ಯರ ಬಳಿ ತೆರಳಿ ಅಗತ್ಯ ವ್ಯೆದ್ಯರ ಸಲಹೆ ಪಡೆದು ಆರೋಗ್ಯದ ಜಾಗ್ರತೆ ವಹಿಸಬೇಕಾಗಿದೆ. ಪೋಲಿಸ್ ಇಲಾಖೆಯ ಸಿಬಂದಿಗಳಿಗೆ ಇಂತಹ ಕಾರ್ಯಕ್ರಮ ಆಯೋಜಿಸಿದ ಮ್ಯಾಂಗಲೋರಿಯನ್ ಡಾಟ್ ಕಾಮ್ ಹಾಗೂ ಕೆ ಎಮ್ ಸಿ ಆಸ್ಪತ್ರೆ ಅಭಿನಂದನಾರ್ಹ ಎಂದರು.
ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಪೋಲಿಸ್ ಅಧಿಕಾರಿಗಳಾದ ಬಂದರು ಪೋಲಿಸ್ ಇನ್ಸ್ ಪೆಕ್ಟರ್ ಶಾಂತರಾಮ್, ನಗರ ರಿಸರ್ವ್ ಪೋಲಿಸ್ ಇನ್ಸ್ ಪೆಕ್ಟರ್ ಸಚಿನ್ ಲೋರೆನ್ಸ್, ಉಲ್ಲಾಳ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಭಾರತಿ ಹಾಗೂ ಬಜ್ಪೆ ಹೆಚ್ ಸಿ ಮಹಮ್ಮದ್ ಅವರನ್ನು ಈ ವೇಳೆ ಮ್ಯಾಂಗಲೋರಿಯನ್ ಡಾಟ್ ಕಾಂ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶಾಂತರಾಮ್ ಮ್ಯಾಂಗಲೋರಿಯನ್ ಡಾಟ್ ಕಾಮ್ ನಮ್ಮ ಸೇವೆಯನ್ನು ಗುರುತಿಸಿ ಅಭಿನಂಧಿಸಿದೆ ಇದಕ್ಕಾಗಿ ಇಡೀ ಮ್ಯಾಂಗಲೋರಿಯನ್ ಡಾಟ್ ಕಾಂ ತಂಡಕ್ಕೆ ಅಭಿನಂದನೆಗಳು. ಸನ್ಮಾನದೊಂದಿಗೆ ಸಮಾಜದಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿದ್ದು, ಮುಂದೆಯೂ ನಿಯತ್ತಿನ ಸೇವೆಯನ್ನು ಸಮಾಜಕ್ಕೆ ನೀಡುವ ಭರವಸೆ ನೀಡಿದರು.
ಸಂಚಾರ ಹಾಗೂ ಕ್ರೈಂ ವಿಭಾಗದ ಡಿಸಿಪಿ ಡಾ ಸಂಜೀವ್ ಪಾಟೀಲ್ ಮಾತನಾಡಿ ಮ್ಯಾಂಗಲೋರಿಯನ್ ಡಾಟ್ ಕಾಮ್ ಪೋಲಿಸ್ ಸಿಬಂದಿಗೆ ಅತ್ಯುತ್ತಮ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಂಸ್ಥೆಯ ವಾಯ್ಲೆಟ್ ಪಿರೇರಾ ಈಗಾಗಲೇ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಅವರ ಹುಟ್ಟಿದ ದಿನದಂದು ದೇಹದಾನದ ಕುರಿತು ಕಾರ್ಯಕ್ರಮ ಆಯೋಜಿಸಿದ್ದರು. ಮಾಧ್ಯಮ ಸಂಸ್ಥೆಗಳು ಇಂತಹ ಸಮಾಜದಲ್ಲಿ ಹಾಗೂ ನಾಗರಿಕರಿಗೆ ಜಾಗೃತಿ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇಂದು ಸ್ತನ ಕ್ಯಾನ್ಸರ್ ಕುರಿತು ಆಯೋಜಿಸಿದ ಕಾರ್ಯಕ್ರಮ್ ಅರ್ಥಪೂರ್ಣವಾಗಿದ್ದು, ಇದರಿಂದಾಗಿ ಹಲವು ಸಾವುಗಳು ಸಂಭವಿಸಿವೆ. ಸ್ತನ ಕ್ಯಾನ್ಸರ್ ಕಾಯಿಲೆಯ ಕುರಿತು ಆರಂಭದ ವೇಳೆಯಲ್ಲೇ ಜಾಗೃತೆ ವಹಿಸಿದರೆ ಹೆಚ್ಚಿನ ಪ್ರಯೋಜನವಾಗಬಹುದು ಎಂದರು.
ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮಾತನಾಡಿ ವಾಯ್ಲೆಟ್ ಪಿರೇರಾ ಹಾಗೂ ಅವರ ತಂಡ ಸಮಾಜಕ್ಕೆ ಒಳಿತಾಗುವ ಹಲವು ಕಾರ್ಯಕ್ರಮಗಳನ್ನು ಮಾಡಲು ಮುಂದೆ ಬಂದಿರುವುದು ಶ್ಲಾಘನೀಯ. ಇಂದು ಸಮಾಜದಲ್ಲಿ ಯುವ ಜನತೆ ಕೆಲವು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತಮ್ಮ ಸಮಯವನ್ನು ಕಳೆಯುತ್ತಿದ್ದು, ಅಂತಹ ಯುವಕರಿಗೆ ಸಮಾಲೋಚನೆಯನ್ನು ಆಯೋಜಿಸಿ ಸಮಾಜದ ಸ್ವಾಸ್ಥ್ಯವನ್ನು ಉಳಿಸಬೇಕಾಗಿದೆ. ಯಾರಾದರೂ ಈ ಕುರಿತು ಯಾರಾದರೂ ಮುಂದಾಳತ್ವ ವಹಿಸಿ ಯುವಜನತೆ ಶಾಂತಿಯಿಂದ ಬದಕುವಂತ ವ್ಯವಸ್ಥೆ ಮಾಡಿಕೊಡಬೇಕಾಗಿದೆ ಎಂದರು.
ಮ್ಯಾಂಗಲೋರಿಯನ್ ಡಾಟ್ ಕಾಮ್ ನ ಆಲ್ಫಿ ಡಿ’ಸೋಜಾ ಸ್ವಾಗತಿಸಿ, ಶಾಂತರಾಮ್ ವಂದಿಸಿದರು. ಕೆ ಎಮ್ ಸಿಯ ಡಾ ಮನೀಶ್ ರೈ ಸ್ತನ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಮ್ಯಾಂಗಲೋರಿಯನ್ ಡಾಟ್ ಕಾಮ್ ಮುಖ್ಯಸ್ಥರಾದ ವಾಯ್ಲೆಟ್ ಪಿರೇರಾ ಉಪಸ್ಥಿತರಿದ್ದರು. ಮಾಹಿತಿ ಕಾರ್ಯಕ್ರಮದ ಬಳಿಕ ಪೋಲಿಸ್ ಸಿಬಂದಿಗಳ ಆರೋಗ್ಯ ತಪಾಸಣೆ ಜರುಗಿತು.