ಯಕ್ಷಗಾನ ನಟನೆಯಲ್ಲಿ ಸೈ ಎನಿಸಿದ ಉಡುಪಿ ಪತ್ರಕರ್ತರು !

Spread the love

ಯಕ್ಷಗಾನ ನಟನೆಯಲ್ಲಿ ಸೈ ಎನಿಸಿದ ಉಡುಪಿ ಪತ್ರಕರ್ತರು !

ಉಡುಪಿ: ಸದಾ ಸುದ್ದಿಯಲ್ಲೇ ಮಗ್ನರಾಗಿರುವ ಜಿಲ್ಲೆಯ ಪತ್ರಕರ್ತರು ಒಂದು ದಿನ ತಮ್ಮೆಲ್ಲಾ ಸುದ್ದಿಗೆ ವಿರಾಮ ಹಾಡಿ ತಮ್ಮಲ್ಲಿನ ಪ್ರತಿಭೆಗಳಿಗೂ ಜೀವ ತುಂಬುವ ಕೆಲಸ ಶನಿವಾರ ಉಡುಪಿಯ ಐಎಮ್ಎ ಭವನದಲ್ಲಿ ನಡೆಯಿತು.

ಕರ್ಣಾಟಕ ಮಾಧ್ಯಮ ಅಕಾಡೆಮಿ, ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇವರ ಸಹಯೋಗದಲ್ಲಿ ನಡೆದ ಕರಾವಳಿ ಸಮಸ್ಯೆಗಳು – ಪರಿಹಾರ ಮಾಧ್ಯಮಗಳ ಪಾತ್ರ ಕುರಿತಾದ ವಿಚಾರ ಸಂಕಿರಣದಲ್ಲಿ ನಗರದ ಪತ್ರಕರ್ತರು ನೀಡಿದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಪತ್ರಕರ್ತ ನಾಗರಾಜ್ ವರ್ಕಾಡಿ ನಿರ್ದೇಶನದ ಕಿರು ನಾಟಕ ಸೆಕೆಂಡ್ ಹ್ಯಾಂಡ್ ಸುಂದರ ಹಾಗೂ ಯಕ್ಷಗಾನದ ಭೀಷ್ಮ ಬನ್ನಂಜೆ ಸಂಜೀವ ಸುವರ್ಣ ನೇತೃತ್ವದ ನಳಕಾರ್ಕೋಟಕ ಯಕ್ಷಗಾನ ಹಾಜರಿದ್ದ ಎಲ್ಲರಿಗೂ ಮನರಂಜೆಯನ್ನು ನೀಡಿತು.

ಕಿರು ನಾಟಕದಲ್ಲಿ ನಗರದ ಪತ್ರಕರ್ತರಾದ ಸಂತೋಶ್, ಪಲ್ಲವಿ, ಶೀಜಾ, ತೃಪ್ತಿ, ಅವಿನ್ ಶೆಟ್ಟಿ ಹಾಗೂ ಹರ್ಷಿಣಿ ತಮ್ಮ ಹಾಸ್ಯದ ಪ್ರದರ್ಶನವನ್ನು ನೀಡಿದರೆ, ನಳಕಾರ್ಕೋಟಕ ಯಕ್ಷಗಾನದಲ್ಲಿ ನಾಗರಾಜ್ ವರ್ಕಾಡಿ, ದೀಪಕ್ ಜೈನ್, ಅನಿಶ್ ಡಿಸೋಜ, ಚೇತನ್ ಮಟಪಾಡಿ, ಆದಿತ್ಯ, ಅಶೋಕ್ ಪೂಜಾರಿ, ಪ್ರಜ್ವಲ್ ಅಮೀನ್ ವೃತ್ತಿಪರ ಕಲಾವಿದರಿಗಿಂತ ತಾವು ಕಡಿಮೆ ಏನಲ್ಲ ಭಾವನೆ ಮೂಡಿಸುವಂತೆ ಪ್ರದರ್ಶಿಸಿ ತಮ್ಮ ಪ್ರತಿಭೆಯನ್ನು ತೋರಿಸಿದರು. ಇನ್ನೋರ್ವ ಪತ್ರಕರ್ತ ಹರ್ಷರಾಜ್ ಕೋಡಿಕನ್ಯಾಣ ತಮ್ಮ ಸಂಗೀತದ ಮೂಲಕ ನೆರೆದವರನ್ನು ರಂಜಿಸಿದರು.

ಸುಮಾರು ಅರ್ಧಗಂಟೆಯ ಕೇವಲ ಅಭಿನಯದ ಯಕ್ಷರೂಪಕವನ್ನು ಉಡುಪಿ ಯಕ್ಷಗಾನ ಕೇಂದ್ರದ ನೃತ್ಯಗುರು ಬನ್ನಂಜೆ ಸಂಜೀವ ಸುವರ್ಣ ಅವರ ನಿರ್ದೇಶನದಲ್ಲಿ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು. ಭಾಗವತ ದಿನೇಶ ಭಟ್ ಯಲ್ಲಾಪುರ ಅವರ ಭಾಗವತಿಕೆಗೆ ರತ್ನಾಕರ ಶೆಣೈ ಅವರ ಮದ್ದಳೆ, ಕೃಷ್ಣಮೂರ್ತಿ ಭಟ್ ಅವರ ಚೆಂಡೆಯ ನಿನಾದಕ್ಕೆ ಯಕ್ಷವೇಷಧಾರಿಗಳಾದ ಪತ್ರಕರ್ತರು ಧೀಂಗಣ ಹಾಕಿದರು.

ಸಾಂಪ್ರದಾಯಿಕ ಶೈಲಿಯಲ್ಲಿ ಆರಂಭವಾದ `ನಳ ಕಾರ್ಕೋಟಕ’ ಯಕ್ಷ ಪ್ರದರ್ಶನದಲ್ಲಿ ಬಾಲಗೋಪಾಲರ ವೇಷವೂ ಇತ್ತು. ನಾಗರಾಜ ರಾವ್ ವರ್ಕಾಡಿ ನಳನಾಗಿ ಕಂಗೊಳಿಸಿದರೆ, ಸೌಮ್ಯ ದಮಯಂತಿಯ ಪಾತ್ರ ನಿರ್ವಹಿಸಿದರು. ಸಂದೇಶ್ ಶನಿಯಾಗಿ ಕಾಡಿದರೆ, ಅನಿಶ್ ಡಿ’ಸೋಜಾ ಬಾಹುಕನಾಗಿ ನರಳಿದ. ಚೇತನ್ ಮಟಪಾಡಿ ಕಾರ್ಕೋಟಕವಾಗಿ ಭಯಂಕರ ವಿಷಜ್ವಾಲೆ ಹರಿಸಿದರೆ, ಪ್ರಜ್ವಲ್ ಮತ್ತು ಅಶೋಕ್ ಉರಿಯುವ ಅಗ್ನಿಜ್ವಾಲೆಗಳಾಗಿ ರಂಗದ ಮೇಲೆ ಮಿಂಚಿದರು. ಪುಷ್ಕಳಕುಮಾರನಾಗಿದ್ದ ದೀಪಕ್ ಜೈನ್ ಅವರನ್ನು ಬ್ರಾಹ್ಮಣ ವೇಷಧಾರಿ ಆದಿತ್ಯ ಧ್ಯೂತಕ್ಕಾಹ್ವಾನಿಸಿದ್ದರು. ಬ್ರಹ್ಮಾವರ ಅಜಪುರ ಯಕ್ಷ ಪ್ರಸಾಧನ ಸಂಸ್ಥೆ ಪೂರಕ ವೇಷಭೂಷಣಗಳನ್ನೊದಗಿಸಿತ್ತು. ಶಶಿಧರ ಮಾಸ್ತಿಬೈಲು ಅವರ ಪ್ರೋತ್ಸಾಹ ತೈಲಧಾರೆಯಂತಿತ್ತು.

ಅಲ್ಪಕಾಲದ ತರಬೇತಿಯಿಂದ ಅದ್ಭುತವಾಗಿ ಪ್ರದರ್ಶನ ನೀಡುವ ಮೂಲಕ ಮಾಧ್ಯಮ ಪ್ರತಿನಿಧಿಗಳು ರಂಗಸ್ಥಳದಲ್ಲಿ ಬಣ್ಣಹಾಕಲೂ ಸೈ, ಧೀಂಗಣ ಜಿಗಿಯಲೂ ಸೈ ಎಂದು ತೋರಿಸಿಕೊಟ್ಟದ್ದಂತೂ ಸುಳ್ಳಲ್ಲ.

 


Spread the love