ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಿಂದ ದ್ವೇಷದ ರಾಜಕಾರಣ – ಐವನ್ ಡಿಸೋಜ
ಮಂಗಳೂರು: ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯ ಅನುಕೂಲ ಪಡೆಯುತ್ತಿರುವ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಪಡಿತರ ಚೀಟಿ ರದ್ಧತಿಗೆ ಮುಂದಾಗಿರುವ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಅವರು ಅನ್ನಭಾಗ್ಯ ಯೋಜನೆಯ ವೆಚ್ಚದಲ್ಲಿ ವಾರ್ಷಿಕ ₹ 2,500 ಕೋಟಿ ಉಳಿಸುವುದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದು ಅವರು ಜನರ ವಿರುದ್ಧವೇ ದ್ವೇಷದ ರಾಜಕಾರಣ ಆರಂಭಿಸಿರುವುದಕ್ಕೆ ಸಾಕ್ಷಿ’ ಎಂದರು.
ವಿವಿಧ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರ ನಾಮನಿರ್ದೇಶನವನ್ನೂ ರದ್ದು ಮಾಡಲಾಗಿದೆ. ಇದು ಕೂಡ ದ್ವೇಷದ ರಾಜಕಾರಣದ ಭಾಗ. ತಾನು ದ್ವೇಷದ ರಾಜಕೀಯ ಮಾಡುವುದಿಲ್ಲ ಎಂದು ಯಡಿಯೂರಪ್ಪ ವಿಧಾನಸಭೆಯಲ್ಲಿ ಹೇಳಿದ್ದರು. ಮಾತು ಮುರಿದು ಈಗ ದ್ವೇಷ ಸಾಧಿಸುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಏಕಚಕ್ರಾಧಿಪತ್ಯ ಮೆರೆಯುತ್ತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ಅದೇ ರೀತಿ ಮಾಡುತ್ತಿದ್ದಾರೆ. ಪ್ರಮಾಣವಚನ ಸ್ವೀಕರಿಸಿ ಹತ್ತು ದಿನಗಳಾದರೂ ಸಚಿವ ಸಂಪುಟ ವಿಸ್ತರಿಸಿಲ್ಲ. ಹದಿನಾಲ್ಕು ತಿಂಗಳಿನಿಂದ ಸರ್ಕಾರ ರಚನೆಗೆ ಕಸರತ್ತು ನಡೆಸಿದವರಿಗೆ ಈಗ ಏಕೆ ಸಂಪುಟ ರಚಿಸಲು ಆಗುತ್ತಿಲ್ಲ. ಎಲ್ಲಿದೆ ಸಚಿವ ಸಂಪುಟ ಎಂದು ಪ್ರಶ್ನಿಸಿದರು.
ಬಿಜೆಪಿಯ ಮಾತು ನಂಬಿ ಅನರ್ಹರಾದ 17 ಶಾಸಕರು ಈಗ ಬೀದಿ ಪಾಲಾಗಿದ್ದಾರೆ. ಇಬ್ಬರು ರಾಜಕೀಯದಿಂದ ನಿವೃತ್ತಿ ಹೊಂದುವ ಮಾತನ್ನಾಡಿದ್ದಾರೆ. ಉಳಿದವರು ಸುಪ್ರೀಂಕೋರ್ಟ್ ಎದುರಿನ ರಸ್ತೆ ಬದಿಯಲ್ಲಿ ಇಡ್ಲಿ, ದೋಸೆ ತಿನ್ನುತ್ತಾ ಪರಿತಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಐಬಿಎಂ ಸಾಫ್ಟ್‌ವೇರ್ ಕಂಪನಿ ಒಂದು ಲಕ್ಷ ನೌಕರರನ್ನು ಕೆಲಸದಿಂದ ತೆಗೆಯುತ್ತಿದೆ. ರೈಲ್ವೆಯಲ್ಲಿ ಮೂರು ಲಕ್ಷ, ಬಿಎಸ್ಎನ್‌ಎಲ್ 54,000 ನೌಕರರನ್ನು ವಜಾ ಮಾಡುತ್ತಿದೆ. ಕೇಂದ್ರದ ಜನವಿರೋಧಿ ನೀತಿಗಳೇ ಇದಕ್ಕೆ ಕಾರಣ ಎಂದರು.